ತಿರುವನಂತಪುರಂ: ಕೋವಿಡ್ 19 ಸೋಂಕು ಕ್ಷಿಪ್ರವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಎಲ್ಲರಿಂದ ಮೆಚ್ಚುಗೆ ಪಡೆದಿದ್ದ ಕೇರಳದ ಆರೋಗ್ಯ ಸಚಿವೆ, ಶಿಕ್ಷಕಿ ಕೆಕೆ ಶೈಲಜಾ ಅವರು ಕಣ್ಣೂರು ಜಿಲ್ಲೆಯ ಮಟ್ಟಾನ್ನೂರ್ ಕ್ಷೇತ್ರದಲ್ಲಿ ತಮ್ಮ ಪ್ರತಿಸ್ಫರ್ಧಿಯನ್ನು 60ಸಾವಿರಕ್ಕೂ ಹೆಚ್ಚು ಮತಗಳಿಂದ ಪರಾಜಯಗೊಳಿಸಿದ್ದಾರೆ.
ಇದನ್ನೂ ಓದಿ:ಪಶ್ಚಿಮಬಂಗಾಳ; ನಂದಿಗ್ರಾಮ ಫಲಿತಾಂಶದಲ್ಲಿ ಬಿಗ್ ಟ್ವಿಸ್ಟ್, ಮಮತಾಗೆ ಸೋಲು, ಅಧಿಕಾರಿಗೆ ಜಯ
ಸಿಪಿಐಎಂನ ಭದ್ರಕೋಟೆಯಾದ ಮಟ್ಟಾನ್ನೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕೆಕೆ ಶೈಲಜಾ ಟೀಚರ್ ಅವರು ರೆವಲ್ಯೂಶನರಿ ಸೋಶಿಯಲಿಸ್ಟ್ ಪಕ್ಷದ ಇಲಿಕ್ಕಲ್ ಅಗಸ್ಥಿಯನ್ನು 61ಸಾವಿರ ಮತಗಳಿಂದ ಸೋಲಿಸಿರುವುದಾಗಿ ವರದಿ ತಿಳಿಸಿದೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಭಾರತೀಯ ಜನತಾ ಪಕ್ಷದ ಬಿಜು 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಕೆಕೆ ಶೈಲಜಾ ಅವರು ನಿವೃತ್ತ ಶಿಕ್ಷಕಿ, ಅವರು ಕೇರಳದ ಎಲ್ ಡಿಎಫ್ ಸರ್ಕಾರದಲ್ಲಿ ಕೋವಿಡ್ 19 ಸೋಂಕಿನ ಆರಂಭಿಕ ಹಂತದಲ್ಲಿ ಅದ್ಭುತ ಕೆಲಸ ಮಾಡುವ ಮೂಲಕ ಜನರ ಮನಗೆದ್ದಿದ್ದರು. ಕೇರಳದಲ್ಲಿ ಕೋವಿಡ್ ಸಂಬಂಧಿ ಸಾವಿನ ಸಂಖ್ಯೆಯೂ ಕಡಿಮೆಯಾಗಿರುವುದಾಗಿ ವರದಿ ತಿಳಿಸಿದೆ.
ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ ಡಿಎಫ್ ಮೈತ್ರಿಕೂಟ 75 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಯುಡಿಎಫ್ 41 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಕೇರಳದಲ್ಲಿ ಎರಡನೇ ಬಾರಿ ಎಲ್ ಡಿಎಫ್ ಅಧಿಕಾರಕ್ಕೆ ಏರುತ್ತಿರುವುದು ರಾಜ್ಯದ ರಾಜಕೀಯದ ನಾಲ್ಕು ದಶಕಗಳ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಿದೆ ಎಂದು ವರದಿ ತಿಳಿಸಿದೆ.