Advertisement

ತವರಿನ ಲಾಭವಿಲ್ಲ, ಟಾಸ್ ಗೆದ್ದು ಫೀಲ್ಡಿಂಗ್ ಮಾಡಬೇಕಿಲ್ಲ…: ಇದು 2023ರ IPL ವಿಶೇಷತೆ

05:15 PM Jun 01, 2023 | ಕೀರ್ತನ್ ಶೆಟ್ಟಿ ಬೋಳ |

ಸುಮಾರು ಎರಡು ತಿಂಗಳು ನಡೆದ ವರ್ಣರಂಜಿತ ಐಪಿಎಲ್ ಜಾತ್ರೆಗೆ ತೆರೆ ಬಿದ್ದಿದೆ. ವಿಶ್ವದ ಅತ್ಯಂತ ದುಬಾರಿ ಟಿ20 ಲೀಗ್ ನ ಈ ಬಾರಿಯ ಸಂಚಿಕೆ ಮುಕ್ತಾಯ ಕಂಡಿದೆ. ಫೈನಲ್ ಪಂದ್ಯದಲ್ಲಿ ಗುಜರಾಟ್ ಟೈಟಾನ್ಸ್ ವಿರುದ್ಧ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐದನೇ ಬಾರಿಗೆ ಚಾಂಪಿಯನ್ ಶಿಪ್ ಗೆದ್ದುಕೊಂಡಿದೆ.

Advertisement

ಮೂರು ವರ್ಷದ ಬಳಿಕ ಹೋಮ್- ಅವೇ ಪಂದ್ಯಗಳು, ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಕಾರಣದಿಂದ ಈ ಬಾರಿಯ ಐಪಿಎಲ್ ಭಿನ್ನವಾಗಿತ್ತು. ಹಾಗಾದರೆ 2023ರ ಐಪಿಎಲ್ ನ ವಿಶೇಷತೆಗಳು ಏನು? ಇಲ್ಲಿದೆ ವಿವರ

ಟಾಸ್ ಗೆದ್ದು ಫೀಲ್ಡಿಂಗ್ ಮಾಡಿದರೆ ಲಾಭವೇ?

ಟಿ20 ಕ್ರಿಕೆಟ್ ನಲ್ಲಿ ಟಾಸ್ ಗೆದ್ದ ತಂಡ ಫೀಲ್ಡಿಂಗ್ ಮಾಡುವುದು ಸಾಮಾನ್ಯ. ಗುರಿ ಮುಟ್ಟೋದು ಗೊತ್ತಿದ್ದರೆ ಸರಿಯಾದ ಲೆಕ್ಕಾಚಾರದೊಂದಿಗೆ ಆಡಬಹುದು ಎನ್ನುವುದು ತಂಡಗಳ ಯೋಚನೆ. ಅದರಲ್ಲೂ ರಾತ್ರಿ ಪಂದ್ಯದಲ್ಲಿ ಇಬ್ಬನಿ ಬೀಳುವುದರಿಂದ ಎರಡನೇ ಬ್ಯಾಟಿಂಗ್ ತಂಡಕ್ಕೆ ಅನುಕೂಲ ಜಾಸ್ತಿ. ಈ ಬಾರಿಯ ಐಪಿಎಲ್ ನಲ್ಲೂ ಬಹುತೇಕ ತಂಡಗಳು ಈ ಲೆಕ್ಕಾಚಾರ ಪಾಲಿಸಿದವು. ಒಟ್ಟು 74 ಪಂದ್ಯಗಳಲ್ಲಿ 53 ಪಂದ್ಯಗಳಲ್ಲಿ ಟಾಸ್ ಗೆದ್ದ ತಂಡ ಫೀಲ್ಡಿಂಗ್ ಆಯ್ಕೆ ಮಾಡಿವೆ. ಆದರೆ ಅದರಲ್ಲಿ ಟಾಸ್ ಗೆದ್ದ ತಂಡವು ಪಂದ್ಯ ಗೆದ್ದಿದ್ದು 23ರಲ್ಲಿ ಮಾತ್ರ. ಒಟ್ಟಾರೆಯಾಗಿ 74 ರಲ್ಲಿ 33 ಬಾರಿ ಚೇಸಿಂಗ್ ತಂಡಗಳು ಗೆಲುವು ಸಾಧಿಸಿದೆ. (ಒಂದು ಪಂದ್ಯ ಮಳೆಯಿಂದ ವಾಶೌಟಾಗಿದೆ)

ತವರಿನ ಲಾಭವಿಲ್ಲ

Advertisement

ಪ್ರತಿ ತಂಡಗಳೂ ತವರಿನ ಲಾಭ ಪಡೆಯವುದು ಸಹಜ. ಆದರೆ ವಿಚಿತ್ರವೆಂದರೆ ಈ ಬಾರಿ ಮಾತ್ರ ತಂಡಗಳಿಗೆ ಹೆಚ್ಚಿನ ತವರಿನ ಲಾಭ ಸಿಗಲಿಲ್ಲ. ಲೀಗ್ ಹಂತದಲ್ಲಿ 69 ಪೂರ್ಣಗೊಂಡ ಪಂದ್ಯಗಳಲ್ಲಿ, ಆತಿಥೇಯ ತಂಡಗಳು ಕೇವಲ 27 ಗೆದ್ದವು. ಆ ಗೆಲುವಿನ ಶೇಕಡವಾರು 39.1 ಯಾವುದೇ ಐಪಿಎಲ್ ಋತುವಿನಲ್ಲಿ ಅತ್ಯಂತ ಕಳಪೆಯಾಗಿತ್ತು. ಹಿಂದಿನ ಕನಿಷ್ಠ 2012 ರಲ್ಲಿ 44.3% ಆಗಿತ್ತು.

ಕೇವಲ ಮೂರು ತಂಡಗಳು (ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್) ತವರಿನಲ್ಲಿ ಧನಾತ್ಮಕ ಗೆಲುವು-ಸೋಲು ದಾಖಲೆಯನ್ನು ಹೊಂದಿದ್ದವು. ಆದರೆ ಸನ್‌ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಮ್ಮ ಏಳು ತವರಿನ ಪಂದ್ಯಗಳಲ್ಲಿ ತಲಾ ಕೇವಲ ಒಂದು ಗೆಲುವನ್ನು ಕಂಡರೆ, ರಾಜಸ್ಥಾನ್ ರಾಯಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತವರಿನಲ್ಲಿ ತಲಾ ಎರಡನ್ನು ಗೆದ್ದವು.

ಇಂಪ್ಯಾಕ್ಟ್ ಪ್ಲೇಯರ್ ಬಳಕೆ

ಈ ಬಾರಿಯ ಕೂಟಕ್ಕೆ ಪರಿಚಯವಾದ ಇಂಪ್ಯಾಕ್ಟ್ ಆಟಗಾರ ನಿಯಮವನ್ನು ಎಲ್ಲಾ ತಂಡಗಳು ಉತ್ತಮವಾಗಿ ಬಳಸಿದವು. ಮೊದಲು ಬ್ಯಾಟಿಂಗ್ ಮಾಡುತ್ತಿದ್ದರೆ ಹೆಚ್ಚುವರಿ ಬ್ಯಾಟರ್‌ ನೊಂದಿಗೆ ಆಡಿ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲರ್ ಇಂಪ್ಯಾಕ್ಟ್ ಆಟಗಾರನಾಗಿ ಬದಲಿಸುತ್ತಿದ್ದರು. ಆದ್ದರಿಂದ ಈ ಬಾರಿಯ ಐಪಿಎಲ್ ನಲ್ಲಿ ಹೆಚ್ಚುವರಿ ಬ್ಯಾಟಿಂಗ್ ಮತ್ತು ಬೌಲಿಂಗ್ ನೊಂದಿಗೆ 12 ಸದಸ್ಯರ ತಂಡವಾಯಿತು. ಇದರಿಂದಾಗಿ ಈ ಬಾರಿ ಹೆಚ್ಚು ರನ್ ಕೂಡಾ ಹರಿದುಬಂತು. ಬ್ಯಾಟರ್ ಗಳು ಹೆಚ್ಚಿನ ವಿಶ್ವಾಸದಿಂದ ಬ್ಯಾಟ್ ಬೀಸಿದರು. ಆದರೆ ಆಲ್ ರೌಂಡರ್ ಗಳ ಪಾತ್ರ ಕಡಿಮೆಯಾಯಿತು.

ಡೆತ್ ಓವರ್ ನಲ್ಲಿ ಸ್ಪಿನ್ 

ಡೆತ್ ಓವರ್ ಗಳು ಅಂದರೆ ಇನ್ನಿಂಗ್ಸ್ ನ ಕೊನೆಯ ನಾಲ್ಕು ಓವರ್ ಗಳಲ್ಲಿ ಸಾಮಾನ್ಯವಾಗಿ ವೇಗಿಗಳು ಬೌಲಿಂಗ್ ಮಾಡುತ್ತಾರೆ. ಆದರೆ ಈ ಬಾರಿ ಸ್ಪಿನ್ನರ್ ಗಳು ಕೂಡಾ ಡೆತ್ ಓವರ್ ಗಳಲ್ಲಿ ಬ್ಯಾಟರ್ ಗಳಿಗೆ ಸವಾಲೊಡ್ಡಿದರು. 2021ರ ಐಪಿಎಲ್ ನಲ್ಲಿ ಸ್ಪಿನ್ನರ್‌ ಗಳು 8.6% ಡೆತ್ ಓವರ್‌ ಗಳನ್ನು ಎಸೆದಿದ್ದರು. ಆ ಅಂಕಿ ಅಂಶವು 2022 ರಲ್ಲಿ 12.8% ಕ್ಕೆ ಏರಿತ್ತು. ಆದರೆ ಈ ಬಾರಿ ಅಂದರೆ 2023ರಲ್ಲಿ ಇದು 17.4%ಕ್ಕೆ ಏರಿಕೆ ಕಂಡಿದೆ.

ರನ್ ರಾಶಿ; ದೊಡ್ಡ ಮೊತ್ತಗಳು

ಇದು ಅತಿ ಹೆಚ್ಚು ರನ್ ಗಳಿಸಿದ ಐಪಿಎಲ್ ಸೀಸನ್ ಆಗಿತ್ತು ಎಂದು ಸುಲಭವಾಗಿ ಹೇಳಬಹುದು. ಈ ಬಾರಿ ಒಟ್ಟಾರೆಯಾಗಿ, ಪ್ರತಿ ಓವರ್‌ಗೆ 8.99 ರನ್‌ ಗಳನ್ನು ಗಳಿಸಲಾಯಿತು, ಇದು 2018 ರಲ್ಲಿ ಸಾಧಿಸಲಾದ ಹಿಂದಿನ ಅತ್ಯುತ್ತಮ 8.64 ಕ್ಕಿಂತ ಹೆಚ್ಚು.

ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಅದರಲ್ಲಿ ದೊಡ್ಡ ಪಾತ್ರವನ್ನು ಹೊಂದಿತ್ತು. ಲಭ್ಯವಿರುವ ಹೆಚ್ಚುವರಿ ಬ್ಯಾಟರ್‌ ನೊಂದಿಗೆ, ತಂಡಗಳು ಹೆಚ್ಚು ಸ್ವತಂತ್ರವಾಗಿ ಬ್ಯಾಟ್ ಮಾಡಿದವು. ಹೀಗಾಗಿ 200 ಅಥವಾ ಅದಕ್ಕಿಂತ ಹೆಚ್ಚು 37 ಬಾರಿ ಸ್ಕೋರ್ ದಾಖಲಾಯಿತು. ಈ ಹಿಂದಿನ ದಾಖಲೆ 18 ಬಾರಿ. ಸ್ಕೋರಿಂಗ್ ಮಾದರಿಗಳನ್ನು ಹತ್ತಿರದಿಂದ ನೋಡಿದಾಗ ತಂಡಗಳು ಆರಂಭದಿಂದ ಅಂತ್ಯದವರೆಗೆ ಹೊಡೆಬಡಿಯ ಆಟವನ್ನೇ ಆಡಿದವು. ಈ ಬಾರಿ ಹೆಚ್ಚಾಗಿ ತಂಡಗಳು ಇಂಪ್ಯಾಕ್ಟ್ ಆಟಗಾರರ ಕಾರಣದಿಂದ ವಿಕೆಟ್ ಬಗ್ಗೆ ಯೋಚಿಸದೆ ಬ್ಯಾಟ್ ಬೀಸಿದ್ದರಿಂದ ಹೆಚ್ಚು ರನ್ ಹರಿದುಬಂತು.

ಯುವ ಆಟಗಾರರ ದಂಡು

ಈ ಬಾರಿಯ ಕೂಟದ ಪ್ರಮುಖ ಲಾಭವೆಂದರೆ ದೇಶಿಯ ಯುವ ಆಟಗಾರರು ಮಿಂಚು ಹರಿಸಿದ್ದು. ಅದರಲ್ಲೂ ಹೊಸ ಭಾರತೀಯ ಫಿನಿಶರ್ ಗಳು ಈ ಕೂಟದಿಂದ ಬೆಳಕಿದೆ ಬಂದರು. ಕೊನೆಯ ಓವರ್ ನಲ್ಲಿ ಸಿಕ್ಸರ್ ಮಳೆಗೈದ ರಿಂಕು ಸಿಂಗ್, ಪಂಜಾಬ್ ಕಿಂಗ್ಸ್ ನ ಜಿತೇಶ್ ಶರ್ಮಾ, ರಾಜಸ್ಥಾನ ರಾಯಲ್ಸ್ ನ ಧ್ರುವ ಜುರೆಲ್ ಹೊಸ ಫಿನಿಶರ್ ಗಳಾಗಿ ಮೂಡಿಬಂದರು. ಅಲ್ಲದೆ ರಾಹುಲ್ ತಿವಾಟಿಯಾ ತನ್ನ ಕೆಲಸ ಮಾಡಿದರು. ಒಟ್ಟಾರೆಯಾಗಿ, ಅನ್‌ಕ್ಯಾಪ್ಡ್ ಭಾರತೀಯ ಬ್ಯಾಟರ್‌ ಗಳು ಕೊನೆಯ ನಾಲ್ಕು ಓವರ್‌ಗಳಲ್ಲಿ 172.60 ಸ್ಟ್ರೈಕ್ ರೇಟ್ ಹೊಂದಿದ್ದರು; ಉಳಿದ ಬ್ಯಾಟರ್ ಗಳದ್ದು 164.95. ಸ್ಟ್ರೈಕ್ ರೇಟ್.

Advertisement

Udayavani is now on Telegram. Click here to join our channel and stay updated with the latest news.

Next