ಹೊಸದಿಲ್ಲಿ: ಅಕ್ಟೋಬರ್ ತಿಂಗಳಿನಲ್ಲಿ ಕತಾರ್ ನ್ಯಾಯಾಲಯದಿಂದ ಮರಣದಂಡನೆಗೆ ಗುರಿಯಾಗಿದ್ದ 8 ಮಾಜಿ ನೌಕಾಪಡೆಯ ಸಿಬಂದಿಗಳಿಗೆ ಬಿಗ್ ರಿಲೀಫ್ ಎಂಬಂತೆ ಶಿಕ್ಷೆ ಕಡಿತಗೊಳಿಸಲಾಗಿದೆ ಎಂದು ಭಾರತ ಸರಕಾರ ಗುರುವಾರ ಮಧ್ಯಾಹ್ನ ತಿಳಿಸಿದೆ.
COP28 ಶೃಂಗಸಭೆಯ ಬದಿಯಲ್ಲಿ ಕತಾರ್‌ನ ಎಮಿರ್ ಶೇಖ್ ತಮೀಮ್ ಬಿನ್ ಹಮದ್ ಅಲ್-ಥಾನಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ವಾರಗಳ ನಂತರ ಈ ಬೆಳವಣಿಗೆ ನಡೆದಿದೆ.
ಇನ್ನೂ ಬಹಿರಂಗವಾಗದ ಆರೋಪಗಳಿಗಾಗಿ ಮರಣದಂಡನೆಗೊಳಗಾಗಿರುವರು ಕಡಿತದ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಭಾರತ ಸರಕಾರ ತಿಳಿಸಿದೆ. ತೀರ್ಪು ಇನ್ನೂ ಬಿಡುಗಡೆ ಮಾಡದ ಕಾರಣ ಕಡಿಮೆಯಾದ ಶಿಕ್ಷೆಯ ನಿಯಮಗಳ ಬಗ್ಗೆ ವಿವರಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆಗಳು ಇವೆ ಎನ್ನಲಾಗಿದೆ.
”ಮುಂದಿನ ಕ್ರಮಗಳನ್ನು ನಿರ್ಧರಿಸಲು ಕಾನೂನು ತಂಡ ಮತ್ತು ಕುಟುಂಬ ಸದಸ್ಯರೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ. ನಾವು ಮೊದಲಿನಿಂದಲೂ ಅವರ ಬೆಂಬಲಕ್ಕೆ ನಿಂತಿದ್ದೇವೆ ಮತ್ತು ನಾವು ಎಲ್ಲಾ ದೂತಾವಾಸ ಮತ್ತು ಕಾನೂನು ನೆರವು ನೀಡುವುದನ್ನು ಮುಂದುವರಿಸುತ್ತೇವೆ. ನಾವು ಕತಾರ್ ಅಧಿಕಾರಿಗಳೊಂದಿಗೆ ವಿಷಯ ವಿನಿಮಯ ಮಾಡಿಕೊಳ್ಳುವುದನ್ನು ಮುಂದುವರಿಸುತ್ತೇವೆ.” ಎಂದು ಎಂದು ಭಾರತ ಸರಕಾರ ತಿಳಿಸಿದೆ
ಬಂಧಿತರು ಯಾರು ?
ಕಮಾಂಡರ್‌ಗಳಾದ ಪೂರ್ಣೇಂದು ತಿವಾರಿ, ಸುಗುಣಾಕರ್ ಪಾಕಲಾ, ಅಮಿತ್ ನಾಗ್‌ಪಾಲ್, ಸಂಜೀವ್ ಗುಪ್ತಾ ಮತ್ತು ಕ್ಯಾಪ್ಟನ್‌ಗಳಾದ ನವತೇಜ್ ಸಿಂಗ್ ಗಿಲ್, ಬೀರೇಂದ್ರ ಕುಮಾರ್ ವರ್ಮಾ ಮತ್ತು ಸೌರಭ್ ವಸಿಷ್ಟ್, ನಾವಿಕ ರಾಗೇಶ್ ಗೋಪಕುಮಾರ್ ಬಂಧಿತ ಎಂಟು ಮಂದಿ. ಇವರ ವಿರುದ್ಧದ ಆರೋಪಗಳನ್ನು ಎಂದಿಗೂ ಬಹಿರಂಗಗೊಳಿಸಲಾಗಿಲ್ಲ.