ಹೊಸದಿಲ್ಲಿ : ಪ್ರಕೃತ ಜಮ್ಮು ಕಾಶ್ಮೀರದಲ್ಲಿ ನೆಲೆಸಿರುವ ಮ್ಯಾನ್ಮಾರ್‌ನ ಸುಮಾರು 10,000 ರೊಹಿಂಗ್ಯಾ ಮುಸ್ಲಿಮರನ್ನು ಅವರ ದೇಶವಾದ ಮ್ಯಾನ್ಮಾರ್‌ಗೆ ಗಡೀಪಾರು ಮಾಡಲು ಚಿಂತಿಸುತ್ತಿದೆ.
ಜಮ್ಮು ಕಾಶ್ಮೀರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಸುಮಾರು 40,000 ರೊಹಿಂಗ್ಯಾ ಮುಸ್ಲಿಮರು ಅಕ್ರಮವಾಗಿ ನೆಲೆಸಿದ್ದಾರೆ. ಇವರೆಲ್ಲರೂ ಕಾನೂನುಬಾಹಿರವಾಗಿ ದೇಶವನ್ನು ಪ್ರವೇಶಿಸಿದವರಾಗಿದ್ದಾರೆ.
ರೊಹಿಂಗ್ಯಾ ಮುಸ್ಲಿಮರನ್ನು ಗುರುತಿಸಿ ಗಡೀಪಾರು ಮಾಡುವ ಮಾರ್ಗೋಪಾಯಗಳನ್ನು ಜಮ್ಮು ಕಾಶ್ಮೀರ ಸರಕಾರ ಅನ್ವೇಷಿಸುತ್ತಿದೆ.
ರೊಹಿಂಗ್ಯಾ ಮುಸ್ಲಿಮರಲ್ಲಿ ಹೆಚ್ಚಿನವರು ಜಮ್ಮು ಮತ್ತು ಸಾಂಬಾದಲ್ಲಿ ನೆಲೆಸಿದ್ದಾರೆ. ಇವರು ಭಾರತ-ಬಾಂಗ್ಲಾ ಗಡಿಯ ಮೂಲಕ, ಇಲ್ಲವೇ ಭಾರತ-ಮ್ಯಾನ್ಮಾರ್ ಗಡಿಯ ಮೂಲಕ ಅಥವಾ ಬಂಗಾಲ ಕೊಲ್ಲಿಯ ಮೂಲಕ ಪ್ರಯಾಣಿಸಿ ಜಮ್ಮು ಕಾಶ್ಮೀರವನ್ನು ಅಕ್ರಮವಾಗಿ ಪ್ರವೇಶಿಸಿ ಅಲ್ಲೇ ನೆಲೆಸಿಕೊಂಡಿದ್ದಾರೆ.
ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮಹರ್ಷಿ ಅವರು ನಿನ್ನೆ ಸೋಮವಾರ ನಡೆಸಿದ್ದ ಉನ್ನತ ಮಟ್ಟ ಸಭೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಅಕ್ರಮವಾಗಿ ಬೀಡು ಬಿಟ್ಟಿರುವ ರೊಹಿಂಗ್ಯಾ ಮುಸ್ಲಿಮರ ಸಮಸ್ಯೆಯನ್ನು ಚರ್ಚಿಸಲಾಗಿತ್ತು. ಈ ಸಭೆಯಲ್ಲಿ ಜಮ್ಮು ಕಾಶ್ಮೀರದ ಮುಖ್ಯ ಕಾರ್ಯದರ್ಶಿ ಬೃಜ್ ರಾಜ್ ಶರ್ಮಾ ಮತ್ತು ಪೊಲೀಸ್ ಮಹಾನಿರ್ದೇಶಕರು ಭಾಗವಹಿಸಿದ್ದರು.
ಕಳೆದ ಜನವರಿ 20ರಂದು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ರಾಜ್ಯ ವಿಧಾನಸಭೆಯಲ್ಲಿ “ರಾಜ್ಯದಲ್ಲಿನ ಮದ್ರಸಗಳೊಂದಿಗೆ ರೊಹಿಂಗ್ಯಾ ಮುಸ್ಮಿಮರು ನಂಟು ಇರಿಸಿಕೊಂಡಿದ್ದಾರೆ’ ಎಂದು ಹೇಳಿದ್ದರು.