ಬೆಳಗಾವಿ: ಮಹಾರಾಷ್ಟ್ರ ಗಡಿ ಭಾಗದಲ್ಲಿರುವ ಕನ್ನಡ ಶಾಲೆಗಳಿಗೆ ಮರಾಠಿ ಶಿಕ್ಷಕರ ನೇಮಕ ವಿವಾದ ತೀವ್ರತೆ ಪಡೆದುಕೊಂಡಿದೆ. ಜತ್ ಭಾಗದ ಶಾಸಕ ವಿಕ್ರಮ ಸಾವಂತ ಅವರು ಮಹಾರಾಷ್ಟ್ರ ಸರಕಾರದ ಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕನ್ನಡಿಗರ ಪರ ನಿಂತಿದ್ದಾರೆ.
ಜತ್ ತಾಲೂಕಿನ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಿರುವ ಶಾಸಕ ಸಾವಂತ ಅವರು ಬುಧವಾರ ಸಾಂಗ್ಲಿಯಲ್ಲಿ ಜಿಲ್ಲಾ ಪರಿಷತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು ಹಾಗೂ ಕನ್ನಡ ಸಂಘಟನೆಗಳ ಮುಖಂಡರ ಸಭೆ ಕರೆದಿದ್ದಾರೆ. ಇನ್ನೊಂದು ಕಡೆ ಸೊಲ್ಲಾಪುರ ಜಿಲ್ಲೆಯಲ್ಲಿ ಕೂಡ ಮಹಾರಾಷ್ಟ್ರ ಸರಕಾರದ ನಡೆಯಿಂದ ಕನ್ನಡ ಶಿಕ್ಷಕರು ಆಕ್ರೋಶಗೊಂಡಿದ್ದಾರೆ. ಈ ಬಗ್ಗೆ ಮುಂಬಯಿ ನ್ಯಾಯಾಲಯದಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದಾರೆ.
ಜತ್ ತಾಲೂಕಿನ ಕನ್ನಡ ಹೋರಾಟಗಾರರು ಎರಡು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿಕನ್ನಡ ಮಕ್ಕಳಿಗೆ ಆಗಿರುವ ಸಮಸ್ಯೆಗಳ ಬಗ್ಗೆ ನೋವು ತೋಡಿಕೊಂಡಿದ್ದಾರೆ. ಕನ್ನಡ ಹೋರಾಟಗಾರರ ಮನವಿಗೆ ಸ್ಪಂದಿಸಿರುವ ಸಿಎಂ ಸೂಕ್ತ ಕ್ರಮವಹಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಮಹಾರಾಷ್ಟ್ರ ಸರಕಾರದ ಕ್ರಮ ಗಡಿಭಾಗದಲ್ಲಿ ಕನ್ನಡವನ್ನು ಕ್ರಮೇಣ ಅಳಿಸುವ ಹುನ್ನಾರ. ಈ ಸಂಬಂಧ ಅಲ್ಲಿನ ಕನ್ನಡ ಹೋರಾಟಗಾರರು ಮತ್ತು ಕನ್ನಡ ಸಂಘಗಳು ರೂಪಿಸಿರುವ ಹೋರಾಟಕ್ಕೆ ಸಾಹಿತ್ಯ ಪರಿಷತ್ತು ಸಂಪೂರ್ಣ ಬೆಂಬಲ ನೀಡಲಿದೆ. ಈ ಕುರಿತು ಸಮಗ್ರ ಅಧ್ಯಯನ ನಡೆಸಿ ಗಡಿಭಾಗದಲ್ಲಿ ಶಿಕ್ಷಕರ ನೇಮಕದ ಕುರಿತು ಸ್ಪಷ್ಟ ಶಾಸನಾತ್ಮಕ ನಿರ್ಣಯವನ್ನು ರಾಜ್ಯ ಸರಕಾರ ಕೈಗೊಳ್ಳಬೇಕು.
-ಮಹೇಶ್ ಜೋಶಿ, ಕಸಾಪ ಅಧ್ಯಕ್ಷ