Advertisement

ಬಿಗ್‌ ಡಾಗ್‌ ಡಿಗ್‌ ಡಾಗ್‌; ನಾಯಿ ನೆಲ ಅಗೆಯುವುದೇಕೆ?

10:01 AM Jan 17, 2020 | Sriram |

ನಮ್ಮ ಮನೆಯ ನಾಯಿ ಶೌಚಕ್ಕೆ ಹೋದ ನಂತರ ನೆಲವನ್ನು ಕೆದಕಿ ಮಣ್ಣಿನಿಂದ ಮುಚ್ಚುವುದು ಏಕೆ? ಶುಚಿಯಾಗಲಿ ಎಂಬ ಸದುದ್ದೇಶದಿಂದಂತೂ ಅಲ್ಲ!

Advertisement

ಮಕ್ಕಳಿಗೆ ನಾಯಿಯನ್ನು ಕಂಡರೆ ತುಂಬಾ ಇಷ್ಟ. ನಾಯಿಗಳೂ ಪುಟಾಣಿಗಳೊಂದಿಗೆ ತಾವೂ ಬೆರೆತು ಮಕ್ಕಳಾಗಿಬಿಡುತ್ತವೆ. ದೊಡ್ಡವರೊಂದಿಗೆ ಆಡುವಾಗ ಮೈಮೇಲೆ ಎಗರುವ ನಾಯಿಗಳು ಪುಟಾಣಿ ಮಕ್ಕಳೊಂದಿಗೆ ಆಡುವಾಗ ಎಗರಿದರೆ ಎಲ್ಲಿ ಏಟಾಗುವುದೋ ಎಂಬ ಎಚ್ಚರಿಕೆ ವಹಿಸುವುದು ಅವುಗಳ ಸೂಕ್ಷ್ಮಪ್ರಜ್ಞೆಗೆ ಸಾಕ್ಷಿ. ಮನುಷ್ಯ ಮತ್ತು ನಾಯಿ ನಡುವಿನ ಸಂಬಂಧ 30,000 ವರ್ಷಗಳಷ್ಟು ಹಳೆಯದು ಎನ್ನುತ್ತಾರೆ ಸಂಶೋಧಕರು. ಆದರೆ, ಇಂದಿಗೂ ನಾಯಿಗಳ ಅನೇಕ ವರ್ತನೆಗಳು ಅಚ್ಚರಿ ಮೂಡಿಸುವುದಲ್ಲದೆ, ಅವುಗಳಲ್ಲಿ ಕೆಲವು ಒಗಟಾಗಿಯೇ ಉಳಿದಿದೆ. ನಾವೆಲ್ಲರೂ ನೋಡಿರುವ ಆದರೆ ಉತ್ತರ ಗೊತ್ತಿಲ್ಲದ ನಾಯಿಗಳ ವರ್ತನೆಗಳಲ್ಲೊಂದು ಅವುಗಳು ಶೌಚ ಮಾಡಿದ ನಂತರ ಮಣ್ಣನ್ನು ಕೆದಕುವುದು.

ತೋಳದಿಂದ ವರ್ಗಾವಣೆ
ಎಲ್ಲಾ ನಾಯಿಗಳೂ ಶೌಚದ ನಂತರ ಮಣ್ಣು ಕೆದಕುವ ವರ್ತನೆಯನ್ನು ತೋರುವುದಿಲ್ಲವಂತೆ! ಈ ವರ್ತನೆಯ ಮೂಲ ತೋಳಗಳು ಎಂಬ ಸಂದೇಹ ವ್ಯಕ್ತಪಡಿಸುತ್ತಾರೆ ಸಂಶೋಧಕರು. ತೋಳಕ್ಕೂ ನಾಯಿಗೂ ಎತ್ತಣಿಂದೆತ್ತ ಸಂಬಂಧ ಎಂಬ ಅನುಮಾನ ಬರುತ್ತಿದೆಯಲ್ಲವೆ? ತೋಳ, ನಾಯಿಗಳ ವಂಶಜ. ನಾಯಿಗಳೂ ಮುಂಚೆ ತೋಳಗಳೇ ಆಗಿದ್ದವು. ವಿಕಾಸ ಪಥದಲ್ಲಿ ಯಾವ ರೀತಿ ಮಂಗನಿಂದ ಮಾನವ ಆದನೋ ಅದೇ ರೀತಿ ತೋಳನಿಂದ ನಾಯಿ ಬಂದಿತು. ತೋಳಗಳ ಹಿಂಡಿನಲ್ಲಿದ್ದ ನಾಯಕ ತೋಳ ತನ್ನ ಸಾಮ್ರಾಜ್ಯವನ್ನು, ತನಗೆ ಸೇರಿದ ಜಾಗವನ್ನು ಗುರುತು ಮಾಡಲು ನೆಲವನ್ನು ಕೆದಕುತ್ತದೆ. ಅದೇ ವರ್ತನೆ ನಾಯಿಗಳಿಗೂ ವರ್ಗಾವಣೆಯಾಗಿದೆ.

ಈಗ ಸಾಮ್ರಾಜ್ಯವಿಲ್ಲ
ನಾಯಿಯ ವಿಷಯಕ್ಕೆ ಬರುವುದಾದರೆ ನಾಯಿಗಳೇನು ತೋಳಗಳಂತೆ ಹಿಂಡಿನಲ್ಲಿ ಜೀವಿಸುತ್ತಿಲ್ಲ. ಗುಂಪುಗಳಿರಬಹುದಷ್ಟೇ. ಹೀಗಾಗಿ ನಾಯಿಗಳಿಗೆ ಅವುಗಳ ಜಾಗವನ್ನು ಗುರುತು ಮಾಡಿಕೊಳ್ಳುವಂಥ ಅವಶ್ಯಕತೆ ಈಗಿಲ್ಲ. ಆದರೆ, ನಾಯಿಗಳು ತಮ್ಮ ಇರುವಿಕೆಯನ್ನು ಇತರೆ ನಾಯಿಗಳಿಗೆ ತಿಳಿಸಲು ಈಗಲೂ ಮಣ್ಣನ್ನು ಕೆದಕುವ ವರ್ತನೆಯನ್ನು ಪ್ರದರ್ಶಿಸುತ್ತವೆ. ಕೆಲ ಮಾಲೀಕರು ತಮ್ಮ ನಾಯಿಯ ಕೆದಕುವ ಅಭ್ಯಾಸವನ್ನು ಹೋಗಲಾಡಿಸಲು ಅನೇಕ ತಂತ್ರಗಳನ್ನು ಬಳಸುತ್ತಾರೆ. ಅದರಲ್ಲಿ ಯಶಸ್ವಿಯೂ ಆಗುತ್ತಾರೆ. ಆದರೆ ಪರಿಸರತಜ್ಞರು ನಾಯಿಗಳನ್ನು ಅದಕ್ಕೆ ಬೇಕಾದ ಹಾಗೆ ಇರಲು ಬಿಡಿ ಎನ್ನುತ್ತಾರೆ. ಅವುಗಳು ಇತರೆ ಪ್ರಾಣಿಗಳೊಂದಿಗೆ ಸಂವಹನ ನಡೆಸುವುದನ್ನು ತಪ್ಪಿಸುವುದು ಅವುಗಳ ಸ್ವಭಾವ ಪ್ರಕೃತಿಗೆ ವಿರುದ್ಧ ಎನ್ನುವುದು ಅವರ ಅಭಿಪ್ರಾಯ.

ಗುರುತು ಮಾಡುವುದು ಏಕೆ?
ನಮ್ಮಲ್ಲಿ ಸೈಟುಗಳನ್ನು ಕೊಂಡು ಅದರ ಸುತ್ತ ಬೇಲಿ ಹಾಕಿ, ಇದು ಇಂಥವರಿಗೆ ಸೇರಿದ ಸೈಟು ಎಂಬ ನಾಮಫ‌ಲಕವನ್ನು ಹಾಕುವುದಿಲ್ಲವೆ? ಹಾಗೆ ಯಾಕೆ ಮಾಡುತ್ತಾರೆ ಹೇಳಿ. ಅದು ಯಾರಿಗೆ ಸೇರಿದ ಜಾಗ ಎಂಬುದು ಎಲ್ಲರಿಗೂ ತಿಳಿಯಲಿ ಎಂದು. ಇದರಿಂದ ನಾಳೆ ಇನ್ಯಾರೋ ಬಂದು ಆ ಜಾಗ ತಮಗೆ ಸೇರಿದ್ದು ಎಂದು ಹೇಳದಿರಲಿ ಎಂದು. ಅದೇ ರೀತಿ ತೋಳಗಳೂ ತಮ್ಮ ಹಿಂಡಿನ ವ್ಯಾಪ್ತಿ ಇತರೆ ಹಿಂಡಿನ ತೋಳಗಳಿಗೆ ತಿಳಿಯಲಿ ಎಂದು ನೆಲವನ್ನು ಕೆದಕಿ ಗುರುತು ಮಾಡುತ್ತದೆ. ನೆಲವನ್ನು ಕೆದಕಿದಾಗ ಅವುಗಳ ದೇಹದಿಂದ “ಫೆರೋಮೋನ್‌’ ಎಂಬ ರಾಸಾಯನಿಕ ಆ ಮಣ್ಣಿನಲ್ಲಿ ಸೇರುತ್ತದೆ. ಆ ವಾಸನೆ ಬಹಳ ಕಾಲ ಉಳಿದುಕೊಂಡುಬಿಡುತ್ತದೆ. ಇತರೆ ತೋಳ ಮಾತ್ರ ವಾಸನೆಯನ್ನು ಪತ್ತೆಹಚ್ಚಬಲ್ಲುದು. ನಾಯಿಗಳಿಗೂ ಈ ವಿಚಾರ ಅನ್ವಯಿಸುತ್ತದೆ.

Advertisement

-ಹರ್ಷವರ್ಧನ್‌ ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next