ನರಗುಂದ: ಪ್ರಸಕ್ತ ಸಾಲಿನಲ್ಲಿ ಮುಂಗಾರು ಬಿತ್ತನೆ ಮಾಡಿದ ಗೋವಿನಜೋಳ ಕಟಾವಿಗೆ ವಿಜಯಪುರ ಮೂಲದ ದೈತ್ಯ ಯಂತ್ರವೊಂದು ಲಗ್ಗೆ ಇಟ್ಟಿದ್ದು, ರೈತರಿಗೆ ಕೂಲಿಕಾರರ ಸಮಸ್ಯೆ ನೀಗಿಸಿದೆ. ಪಟ್ಟಣ ವ್ಯಾಪ್ತಿಯ ರೈತರ ಜಮೀನಿನಲ್ಲಿ ಈಗಾಗಲೇ ಗೋವಿನಜೋಳ ಕಟಾವಿಗೆ ಅಡಿಯಿಟ್ಟ ಯಂತ್ರ ಗೋದಿ ಕಟಾವು ಯಂತ್ರದ ಮಾದರಿಯಲ್ಲಿದ್ದರೂ ಆಧುನಿಕ ತಂತ್ರಜ್ಞಾನ ಒಳಗೊಂಡಿದೆ. ಸುಮಾರು 25 ಲಕ್ಷ ರೂ.ಬೆಲೆ ಬಾಳುವ ಯಂತ್ರ ಕಟಾವು ಹಂತದಲ್ಲಿ ರೈತರ ಕೆಲ ಸಮಸ್ಯೆ ನೀಗಿಸುತ್ತಿದೆ.
ಕಟಾವಿಗೆ ಬಂದ ಬೆಳೆ: ಆಗಸ್ಟ್‌ನಲ್ಲಿ ಸುರಿದ ಉತ್ತಮ ಮಳೆಯಿಂದ ತಾಲೂಕಿನಾದ್ಯಂತಬಹುತೇಕ ಪ್ರದೇಶದಲ್ಲಿ ಗೋವಿನಜೋಳ ಬಿತ್ತನೆಯಾಗಿತ್ತು. ಇನ್ನೂ ಕೆಲ ಪ್ರದೇಶದಲ್ಲಿ ಮಳೆಯಾಗುವ ಪೂರ್ವದಲ್ಲೇ ಬಿತ್ತನೆಯಾದ ಗೋವಿನಜೋಳ ಕಟಾವು ಹಂತಕ್ಕೆ ಬಂದಿದ್ದು,ಅಂತಹ ಪ್ರದೇಶದಲ್ಲೀಗ ಈ ಯಂತ್ರ ಲಗ್ಗೆ ಇಟ್ಟಿದ್ದು, ಗೋವಿನಜೋಳ ಕಟಾವಿಗೆ ಮುಂದಡಿಯಿಟ್ಟಿದೆ. ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತಾಂಬಾದ ಬಸವರಾಜ ಮಸಳಿ ಎಂಬುವರಿಗೆ ಸೇರಿದ ಈ ಯಂತ್ರ ದಿನಕ್ಕೆ 20 ಎಕರೆ ಗೋವಿನಜೋಳ ಕಟಾವು ಮಾಡುತ್ತದೆ. ಒಂದು ಬಾರಿ ಕಟಾವು ಮಾಡಿದಾಗ ಕನಿಷ್ಟ 20 ಕ್ವಿಂಟಲ್ ಕಾಳು ಸಂಗ್ರಹಿಸುತ್ತದೆ. 3 ದಿನದಿಂದ ಪಟ್ಟಣದ ರೈತರ ಜಮೀನುಗಳಲ್ಲಿ ಕಟಾವು ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ವಿಶೇಷವೆಂದರೆ ಕಾಳಿನಲ್ಲಿ ಒಂದು ಕಡ್ಡಿಯೂ ಸೇರದಂತೆ ಗೋವಿನಜೋಳದ ಕಾಳು ಸಂಗ್ರಹಿಸುತ್ತದೆ.
ರೈತರಿಗೆ ಸಹಕಾರಿ:ಈ ಹಿಂದೆ ಗೋವಿನಜೋಳ ಕಟಾವಿಗೆ ಬಂದಾಗ ತೆನೆ ಮುರಿಯುವುದು, ದಂಟು ಕಡಿಯುವುದು, ಕೂಡಿ ಹಾಕಿದ ತೆನೆಯನ್ನು ಸಿಪ್ಪೆಯಿಂದ ಬೇರ್ಪಡಿಸಿ ಲಡ್ಡುಗಳ ಸಮೇತ ಒಕ್ಕಣಿ ಮಾಡಿ ಕಾಳು ಬೇರ್ಪಡಿಸುವ ಬಹಳಷ್ಟು ಕೆಲಸಗಳು ಗೋವಿನಜೋಳ ರಾಶಿ ಮಾಡಲು ರೈತರು ಹೆಣಗಬೇಕಾಗುತ್ತಿತ್ತು. ಇಷ್ಟೆಲ್ಲ ಕೆಲಸಕ್ಕೆ ಕೂಲಿಕಾರರು ಸಕಾಲಕ್ಕೆ ಸಿಗದಿರುವುದು ಕೃಷಿಕರಿಗೆ ದೊಡ್ಡ ತಲೆನೋವಾಗಿತ್ತು. ಹೀಗಾಗಿ ಎಲ್ಲವನ್ನು ಒಂದೇ ಬಾರಿ ಮಾಡಿ ನೇರವಾಗಿ ಕಾಳು ಒದಗಿಸಲು ಈ ಯಂತ್ರ ಸಹಕಾರಿಯಾಗಿದೆ. ಮೂರು ಸಾವಿರ ಖರ್ಚು: ಹೀಗಾಗಿ ರೈತರ ಜಮೀನುಗಳಲ್ಲಿ ಗೋವಿನಜೋಳ ಕಟಾವು ಮಾಡುವ ದೈತ್ಯ ಯಂತ್ರದ ಕಾರ್ಯ ಖುದ್ದಾಗಿ ವೀಕ್ಷಿಸುತ್ತಿರುವ ರೈತರು ಯಂತ್ರದಿಂದಾಗುವ ಸಾಧಕ-ಬಾಧಕ ಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಪ್ರತಿ ಎಕರೆ ಗೋವಿನಜೋಳ ಕಟಾವಿಗೆ 3 ಸಾವಿರ ರೂ. ಭರಿಸಲಾಗುತ್ತಿದೆ. ಈ ಬಾರಿ ಅತಿಹೆಚ್ಚು ಕೃಷಿ ಪ್ರದೇಶ ಆವರಿಸಿದ ಗೋವಿನಜೋಳ ಬೆಳೆ ಕಟಾವಿಗೆ ದೈತ್ಯ ಯಂತ್ರ ಲಗ್ಗೆಯಿಟ್ಟಿದ್ದು ಮಾತ್ರ ರೈತರ ಕೂಲಿಕಾರರ ಸಮಸ್ಯೆಗೆ ಪರಿಹಾರವಿಗೆ ಎನ್ನಲಾಗುತ್ತಿದೆ.
ಯಂತ್ರದ ಅನಾನುಕೂಲವೇನು?: ಹಾಗೆಂದ ಮಾತ್ರಕ್ಕೆ ರೈತರಿಗೆ ಸಮಸ್ಯೆಗಳು ಇಲ್ಲವೆಂದಲ್ಲ. ಈ ಯಂತ್ರದಿಂದ ಒಮ್ಮೆ ಕಟಾವು ಮಾಡಿದರೆ ಕಾಳು ಹೊರತುಪಡಿಸಿ ಮೇವು, ಲಡ್ಡು ರೈತರಿಗೆ ಸಿಗದು. ಕಟಾವು ಹಂತದಲ್ಲಿ ಕಾಳು ಬೇರ್ಪಡಿಸಿ ಉಳಿದೆಲ್ಲ ಕಚ್ಚಾ ಭಾಗ ತುಂಡಾಗಿ ಜಮೀನಿನಲ್ಲಿ ಹರವಿ ಬಿಡುತ್ತದೆ. ಪ್ರತಿ ಎಕರೆಗೆ ಕನಿಷ್ಟ 2 ಕ್ವಿಂಟಲ್ ನಷ್ಟು ಕಾಳು ಭೂಮಿಗೆ ಹರಿದು ಹೋಗುತ್ತದೆ. 2 ಅಡಿಯಷ್ಟು ಉಳಿಯುವ ಗೋವಿನಜೋಳದಂಟು ತೆರವು ಕೆಲಸವೂ ರೈತರಿಗೆ ಹೊರೆಯಾಗುತ್ತದೆ. ಆದರೆ ಕೂಲಿಕಾರರ ಸಮಸ್ಯೆ ನೀಗಿಸುವ ಏಕೈಕ ಉದ್ದೇಶಕ್ಕೆ ಈ ಯಂತ್ರ ಸಹಕಾರಿಯಾಗಲಿದೆ ಎಂಬುದು ರೈತರ ಅಭಿಪ್ರಾಯ.
-ಸಿದ್ಧಲಿಂಗಯ್ಯ ಮಣ್ಣೂರಮಠ