Advertisement

ಇಂದು ಬೃಹತ್‌ ಜನಸ್ಪಂದನ- 10 ಸಾವಿರ ಜನರಿಗೆ ವ್ಯವಸ್ಥೆ , ಇಡೀ ದಿನ ಅಹವಾಲು ಆಲಿಸಲಿರುವ ಸಿಎಂ

12:44 AM Feb 08, 2024 | Team Udayavani |

ಬೆಂಗಳೂರು: ಪ್ರತಿ ಮೂರು ತಿಂಗಳಿಗೊಮ್ಮೆ ಜನಸ್ಪಂದನ ನಡೆಸುವುದಾಗಿ ಘೋಷಿಸಿದ್ದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಗುರುವಾರ ವಿಧಾನಸೌಧದ ಮೆಟ್ಟಿಲುಗಳ ಬಳಿ ರಾಜ್ಯಮಟ್ಟದ ಬೃಹತ್‌ ಜನಸ್ಪಂದನ ಕಾರ್ಯಕ್ರಮ ನಡೆಸಲಿದ್ದಾರೆ. ಇದು ವಿಧಾನಸೌಧದ ಆವರಣದಲ್ಲಿ ನಡೆಯಲಿರುವ ಮೊದಲ ಜನಸ್ಪಂದನ.

Advertisement

ನ. 27ರಂದು ಗೃಹಕಚೇರಿ “ಕೃಷ್ಣಾ’ದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಿದ್ದ ಸಿಎಂ, ಐಪಿಜಿಆರ್‌ಎಸ್‌ ತಂತ್ರಾಂಶದ ಮೂಲಕ 2,862, ನೇರ ವಾಗಿ 950 ಸಹಿತ ಒಟ್ಟು 4,030 ಅರ್ಜಿಗಳನ್ನು ಸ್ವೀಕರಿಸಿದ್ದರು. ಈ ಪೈಕಿ 3,738 ಅರ್ಜಿಗಳು ವಿಲೇವಾರಿ ಆಗಿವೆ. ಈ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಮಸ್ಯೆಗಳನ್ನು ಹೊತ್ತು ಬಂದಿದ್ದರಿಂದ ಗೃಹ ಕಚೇರಿ ಆವರಣದಲ್ಲಿ ಸ್ಥಳಾಭಾವ ಎದುರಾಗಿತ್ತು. ಆದ್ದರಿಂದ ಈ ಬಾರಿ ವಿಧಾನಸೌಧದ ಆವರಣದಲ್ಲಿ ನಡೆಸಲಾಗುತ್ತಿದೆ.

ಇಲಾಖಾವಾರು ಕೌಂಟರ್‌ ಆರಂಭ
ಫೆ. 8ರ ಬೆಳಗ್ಗೆ 10.30ರಿಂದ ಸಂಜೆ 5ರ ವರೆಗೂ ಜನಸ್ಪಂದನ ನಡೆಯಲಿದೆ. ಅದಕ್ಕಾಗಿ ವಿಧಾನಸೌಧ ಆವರಣದಲ್ಲಿ ಟೆಂಟ್‌ಗಳನ್ನು ನಿರ್ಮಿಸಲಾಗಿದ್ದು, ಇಲಾಖಾವಾರು ಕೌಂಟರ್‌ಗಳನ್ನು ತೆರೆಯಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಲಿರುವ ಸಾರ್ವಜನಿಕರ ಮನವಿ ಸ್ವೀಕರಿಸಲಾಗುತ್ತದೆ. ಅದಕ್ಕಾಗಿ ಇಲಾಖಾವಾರು ಅಧಿಕಾರಿಗಳನ್ನೂ ನಿಯೋಜಿಸ ಲಾಗಿದೆ. ಜನರು ಹೆಚ್ಚಿದ್ದರೆ ರಾತ್ರಿಯವರೆಗೂ ಜನ ಸ್ಪಂದನ ಮುಂದುವರಿಯುವ ಸಾಧ್ಯತೆಗಳಿವೆ.

ಸಾರ್ವಜನಿಕರಿಗೆ ಮಾಹಿತಿ ಕೇಂದ್ರ

ಜನಸ್ಪಂದನ ಸ್ಥಳದಲ್ಲಿ ಎಲ್ಲ ಇಲಾಖೆಗಳ ಸ್ಟಾಲ್‌ಗ‌ಳನ್ನು ತೆರೆಯಲಾಗಿದೆ. ಪ್ರತಿ ಸ್ಟಾಲ್‌ಗ‌ಳಿಗೆ ಸಂಖ್ಯೆಯನ್ನು ನೀಡಲಾಗಿದೆ. ಜನತಾ ದರ್ಶನಕ್ಕಾಗಿ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದ್ದು, ನಾಗರಿಕರನ್ನು ಪ್ರಥಮ ಹಂತದಲ್ಲಿ ವಿಚಾರಿಸಿ, ಯಾವ ಇಲಾಖೆಯ ಸ್ಟಾಲ್‌ಗೆಂದು ನಿರ್ದೇಶಿಸಿ ಕಳಿಸಬೇಕು. ಸಾರ್ವಜನಿಕರ ದೂರುಗಳನ್ನು ಹೀಗೆ ವಿಂಗಡಿಸಲು ಅನುಭವಿ ಅಧಿಕಾರಿ-ಸಿಬಂದಿಯ ವಿಚಾರಣ ಕೌಂಟರ್‌ ತೆರೆಯಲಾಗಿದೆ. ಅಲ್ಲಿ ನಾಗರಿಕರ ಮೊಬೈಲ್‌ ನಂಬರ್‌ ಸಹಿತ ಪ್ರಾಥಮಿಕ ವಿವರ, ಅವರನ್ನು ಯಾವ ಇಲಾಖೆಗೆ ಕಳಿಸಲಾಗಿದೆ ಎಂದು ಸ್ಟಾಲ್‌ ನಂಬರ್‌ ನಮೂದಿಸಲಾಗುವುದು.

Advertisement

ಬಿಎಂಟಿಸಿಯಿಂದ ಉಚಿತ ಸೇವೆ
ಜನಸ್ಪಂದನ ಕಾರ್ಯಕ್ರಮಕ್ಕಾಗಿ ಮೆಜೆಸ್ಟಿಕ್‌ನಿಂದ ವಿಧಾನಸೌಧಕ್ಕೆ ಬರುವ ಸಾರ್ವಜನಿಕರಿಗೆ ಬಿಎಂಟಿಸಿ ಬಸ್‌ನಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ. ಜನತಾದರ್ಶನದ ಸ್ಥಳದಲ್ಲಿ 5-10 ಸಾವಿರ ಜನರಿಗೆ ಆಹಾರ, ಕುಡಿಯುವ ನೀರು, ಶೌಚಾಲಯದ ಸೌಕರ್ಯವನ್ನೂ ಒದಗಿಸಲಾಗಿದೆ. ವೃದ್ಧರು, ಅಂಗವಿಕಲರು, ಗರ್ಭಿಣಿಯರು, ಮಕ್ಕಳೊಂದಿಗೆ ಬಂದ ತಾಯಂದಿರಿಗೆ ಬ್ಯಾಟರಿ ಚಾಲಿತ ವಾಹನ ಹಾಗೂ ವೀಲ್‌ಚೇರ್‌ ವ್ಯವಸ್ಥೆ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next