ಅರ್ಧಕ್ಕೆ ನಿಂತ ಸಿನಿಮಾಗಳ ಚಿತ್ರೀಕರಣಕ್ಕೆ ಅನುಮತಿ … ಸರ್ಕಾರದಿಂದ ಹೀಗೊಂದು ಅನುಮತಿ ಸಿಗುತ್ತಿದ್ದಂತೆ ಚಿತ್ರರಂಗ ನಿಟ್ಟುಸಿರು ಬಿಟ್ಟಿದೆ. ಅದಕ್ಕೆ ಕಾರಣ ಕಾರ್ಮಿಕರು. ಲಾಕ್‍ಡೌನ್‍ನಿಂದಾಗಿ ಚಿತ್ರೀಕರಣ ನಿಂತು ಹೋಗಿದ್ದರಿಂದ ಸಿನಿಮಾ ಕಾರ್ಮಿಕರ ಪರಿಸ್ಥಿತಿ ದುಸ್ತರವಾಗಿತ್ತು. ಜೊತೆಗೆ ಚಿತ್ರರಂಗ ಕೂಡಾ ಸಂಪೂರ್ಣ ಸ್ತಬ್ಧವಾಗಿತ್ತು. ಆದರೆ, ಈಗ ಚಿತ್ರೀಕರಣಕ್ಕೆ ಅನುಮತಿ ಸಿಗುವ ಮೂಲಕ ಚಿತ್ರರಂಗದಲ್ಲಿ ಚಟುವಟಿಕೆ ಗರಿಗೆದರಿದೆ.
ಅದೆಷ್ಟೋ ಸಿನಿಮಾಗಳ ಚಿತ್ರೀಕರಣ ಅರ್ಧಕ್ಕೆ ನಿಂತಿತ್ತು. ಇದರಿಂದಾಗಿ ಸಿನಿಮಾ ಬಿಡುಗಡೆಗೆ ಅನುಮತಿ ಸಿಕ್ಕರೂ ಯಾವಾಗ ಬಿಡುಗಡೆ ಎಂಬ ಗೊಂದಲದಲ್ಲಿದ್ದರು ನಿರ್ಮಾಪಕರು. ಆದರೆ, ಈಗ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿರುವುದರಿಂದ ನಿರ್ಮಾಪಕರು ನಿಟ್ಟುಸಿರು ಬಿಟ್ಟಿದ್ದಾರೆ. ಮುಖ್ಯವಾಗಿ ಬಿಗ್ ಬಜೆಟ್ ಹಾಗೂ ಸ್ಟಾರ್ ಸಿನಿಮಾಗಳ ಚಿತ್ರೀಕರಣ ಅರ್ಧಕ್ಕೆ ನಿಂತಿದ್ದವು. ಈಗ ಅವೆಲ್ಲವೂ ಚಿತ್ರೀಕರಣಕ್ಕೆ ಅಣಿಯಾಗಿವೆ.
ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ, ಜೇಮ್ಸ್, ಯಶ್ ನಟನೆಯ ಕೆಜಿಎಫ್ 2, ಶಿವರಾಜ್ ಕುಮಾರ್ ಅಭಿನಯದ ಭಜರಂಗಿ -2, ಉಪೇಂದ್ರ ಅಭಿನಯದ ಕಬ್ಜ, ಸುದೀಪ್ ನಟನೆಯ ಫ್ಯಾಂಟಮ್ ಸೇರಿದಂತೆ ಹಲವು ಬಿಗ್ ಬಜೆಟ್ ಸಿನಿಮಾಗಳು ಚಿತ್ರೀಕರಣಕ್ಕೆ ಅಣಿಯಾಗಿವೆ. ಈ ಮೂಲಕ ಚಿತ್ರರಂಗದಲ್ಲಿ ಮತ್ತೆ ಸಿನಿ ಚಟುವಟಿಕೆಗಳು ಆರಂಭವಾಗಲಿವೆ. ಆದರೆ, ಈ ಎಲ್ಲಾ ಸಿನಿಮಾಗಳಿಗಿರುವ ಸವಾಲೆಂದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಚಿತ್ರೀಕರಣ ನಡೆಸೋದು.
ಏಕೆಂದರೆ ಸಿನಿಮಾ ಚಿತ್ರೀಕರಣ ಎಂದಾಗ ಸಾಕಷ್ಟು ಕಾರ್ಮಿಕರ ಅಗತ್ಯವಿರುತ್ತದೆ. ಅವರೆಲ್ಲರನ್ನು ಮಾರ್ಗಸೂಚಿ ಪ್ರಕಾರ ನಡೆಸಿಕೊಂಡು ಸಿನಿಮಾ ಚಿತ್ರೀಕರಣ ನಡೆಸುವ ಅನಿವಾರ್ಯತೆ ಚಿತ್ರತಂಡಗಳಿಗಿವೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಯುವರತ್ನ ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ಕೊರೊನಾ ಲಾಕ್ ಡೌನ್‍ನಿಂದಾಗಿ ಚಿತ್ರೀಕರಣ ನಿಂತು ಹೋಗಿತ್ತು.
ಚಿತ್ರದ ಎರಡು ಹಾಡುಗಳನ್ನು ವಿದೇಶಗಳಲ್ಲಿ ಚಿತ್ರೀಕರಣ ಮಾಡುವ ಉದ್ದೇಶ ಚಿತ್ರತಂಡಕ್ಕಿತ್ತು. ಆದರೆ, ಈಗ ವಿದೇಶ ಯಾತ್ರೆ ಕೈಬಿಟ್ಟು ರಾಜ್ಯದಲ್ಲೇ ಚಿತ್ರೀಕರಣ ಮಾಡುವ ಅನಿವಾರ್ಯತೆ ಇದೆ. ಇನ್ನು ಉಪೇಂದ್ರ ಅವರ ಬಹುಭಾಷಾ ಚಿತ್ರ ಕಬ್ಜ ಕೂಡಾ ಚಿತ್ರೀಕರಣಕ್ಕೆ ಅಣಿಯಾಗಿದೆ. ಇಷ್ಟೇ ಅಲ್ಲಾ, ಈ ವರ್ಷದ ಬಹುನಿರೀಕ್ಷಿತ ಚಿತ್ರ ಕೆಜಿಎಫ್ 2 ಕೂಡಾ ಅಂತಿಮ ಹಂತದ ಚಿತ್ರೀಕರಣಕ್ಕೆ ಬಂದಿದ್ದು, ಚಿತ್ರೀಕರಣ ನಿಂತು ಹೋಗಿತ್ತು.
ಈಗ ಚಿತ್ರತಂಡ ಚಿತ್ರೀಕರಣಕ್ಕೆ ಸಿದ್ಧತೆ ಮಾಡಿಕೊಂಡಿದೆ. ಅಕ್ಟೋಬರ್‍ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಒಟ್ಟಾರೆಯಾಗಿ ಚಿತ್ರೀಕರಣಕ್ಕೆ ಅನುಮತಿ ನೀಡಿರುವುದರಿಂದ ಅರ್ಧಕ್ಕೆ ನಿಂತ ಚಿತ್ರೀಕರಣಗಳು ಆರಂಭವಾಗುವ ಮೂಲಕ ಚಿತ್ರರಂಗದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಜೊತೆಗೆ ಕಾರ್ಮಿಕರ ಮುಖದಲ್ಲೂ ಮಂದಹಾಸ ಮೂಡಿದೆ. ಆದರೆ, ಮುನ್ನೆಚ್ಚರಿಕೆಯೊಂದಿಗೆ ಚಿತ್ರೀಕರಣ ಮಾಡುವ ಅನಿವಾರ್ಯತೆ ಇದೆ.