ಲಂಡನ್ : ಭಾರತದ ಮೋಸ್ಟ್ ವಾಂಟೆಡ್ ಭೂಗತ ಜಗತ್ತಿನ ಮಹಾ ಪಾತಕಿ ಹಾಗೂ ಕರಾಚಿಯಲ್ಲಿ ಪಾಕ್ ಸರಕಾರದ ಕೃಪಾ ಕಟಾಕ್ಷದಲ್ಲಿ ಅವಿತುಕೊಂಡಿರುವ ಕೆ ದಾವೂದ್ ಇಬ್ರಾಹಿಂ ಒಡೆತನದ ಆಸ್ತಿಪಾಸ್ತಿಗಳನ್ನು ಬ್ರಿಟನ್ ಸರಕಾರ ಮುಟ್ಟುಗೋಲು ಹಾಕಿಕೊಂಡಿದ್ದು ಇದೊಂದು ಮಹತ್ತರ ಸೀಮೋಲ್ಲಂಘನದ ಕ್ರಮವೆಂದು ತಿಳಿಯಲಾಗಿದೆ.
61ರ ಹರೆಯದ ಮಾಫಿಯಾ ಬಾಸ್ ದಾವೂದ್, ಮುಂಬಯಿ ಸರಣಿ ಬಾಂಬ್ ಸ್ಫೋಟ ಪ್ರಕರಣದ ಮುಖ್ಯ ಆರೋಪಿಯಾಗಿದ್ದು 1993ರಿಂದ ಆತ ತಲೆಮರೆಸಿಕೊಂಡಿದ್ದಾನೆ.
2015ರಲ್ಲಿ ಭಾರತ ಸರಕಾರ ದಾವೂದ್‌ಗೆ ಲಂಡನ್‌ನಲ್ಲಿ ಸೇರಿರುವ ಆಸ್ತಿಗಳ ಕುರಿತಾದ ಸಮಗ್ರ ಕಡತವನ್ನು ಬ್ರಿಟನ್ ಸರಕಾರಕ್ಕೆ ನೀಡಿತ್ತು.
ಪಾಕಿಸ್ಥಾನದ ಕರಾಚಿಯಲ್ಲಿ ಮೂರು ದಾಖಲೀಕೃತ ವಿಳಾಸಗಳಲ್ಲಿ ನೆಲೆಸಿರುವನೆಂದು ತಿಳಿಯಲಾಗಿರುವ ದಾವೂದ್ ಗೆ ಬ್ರಿಟನ್‌ನಲ್ಲಿ ಹಲವು ಆಸ್ತಿಗಳಿವೆ. ಹಣಕಾಸು ನಿಷೇಧಗಳ ಸಮಗ್ರ ಪಟ್ಟಿಯನ್ನು ಬ್ರಿಟನ್ ಸರಕಾರದ ಕಂದಾಯ ಇಲಾಖೆ ಈಚೆಗೆ ತಾಜಾಗೊಳಿಸಿದ್ದು ಆ ಪಟ್ಟಿಯಲ್ಲಿ ದಾವೂದ್ ಹೆಸರು ದಾಖಲಾಗಿರುವುದು ಕಂಡು ಬರುತ್ತದೆ.
ದಾವೂದ್‌ಗೆ ಸುಮಾರು 21ಕ್ಕೂ ಹೆಚ್ಚು ಅಲಿಯಾಸ್ ಹೆಸರುಗಳಿವೆ ಮತ್ತು ಬ್ರಿಟನ್‌ನಲ್ಲೇ ಆತನಿಗೆ 6.7 ಶತಕೋಟಿ ಡಾಲರ್ ಮೌಲ್ಯದ ಆಸ್ತಿ ಇದೆ.
ವಾರ್ಕ್‌ವಿಕ್‌ಶಯರ್‌ನಲ್ಲಿ ದಾವೂದ್‌ಗೆ ಬೃಹತ್ ಹೊಟೇಲ್ ಇದೆ. ಅಂತೆಯೇ ಮಿಡ್ ಲ್ಯಾಂಡ್ಸ್ ಆದ್ಯಂತ ಆತನಿಗೆ ಹಲವಾರು ವಸತಿ ಆಸ್ತಿಗಳಿವೆ ಎಂದು ಗೊತ್ತಾಗಿದೆ. ದಾವೂದ್‌ಗೆ ಅಲ್ ಕಾಯಿದಾ ನಂಟು ಕೂಡ ಇರುವುದು ಬಹಿರಂಗವಾಗಿದೆ.
ಬ್ರಿಟನ್ ಸರಕಾರ ಸಿದ್ಧಪಡಿಸಿರುವ ಹಣಕಾಸು ನಿಷೇಧಗಳ ಪಟ್ಟಿಯಲ್ಲಿರುವ ಏಕೈಕ ಭಾರತೀಯ ಪ್ರಜೆಯಾಗಿರುವ ದಾವೂದ್ 21 ಅಲಿಯಾಸ್‌ಗಳನ್ನು ಹೊಂದಿರುವ ಭೂಗತ ಪಾತಕ ಜಗತ್ತಿನ ಡಾನ್ ಎನಿಸಿಕೊಂಡಿದ್ದಾನೆ.