ನವದೆಹಲಿ: ಸರ್ಕಾರಿ ಪ್ರಾಯೋಜಿತ ಹಾಗೂ ಅನುದಾನಿತ ಶಾಲೆಗಳಿಗೆ 2016ರಲ್ಲಿ ಮಾಡಿದ್ದ ಶಿಕ್ಷಕರ ನೇಮಕಾತಿಯನ್ನು ಕೋಲ್ಕತಾ ಹೈಕೋರ್ಟ್ ರದ್ದುಗೊಳಿಸಿದ್ದು, ಇದು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾದಂತಾಗಿದೆ.
ಇದನ್ನೂ ಓದಿ:Court: ಅತ್ಯಾಚಾರಕ್ಕೊಳಗಾದ 14 ವರ್ಷದ ಅಪ್ರಾಪ್ತೆಯ ಗರ್ಭಪಾತಕ್ಕೆ ಸುಪ್ರೀಂಕೋರ್ಟ್ ಅನುಮತಿ
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ನೇಮಕಗೊಂಡಿದ್ದ ಸುಮಾರು 25,753 ಶಿಕ್ಷಕರು ಇದೀಗ ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದು, ಜೊತೆಗೆ ಕರ್ತವ್ಯಕ್ಕೆ ಹಾಜರಾಗಿದ್ದ ದಿನದಿಂದ ಹಿಡಿದು ಈವರೆಗೆ ಪಡೆದ ಸಂಬಳವನ್ನು ಶೇ.12ರಷ್ಟು ಬಡ್ಡಿದರದೊಂದಿಗೆ ವಾಪಸ್ ಮರಳಿಸುವಂತೆ ಹೈಕೋರ್ಟ್ ಸಂದೇಶ ರವಾನಿಸಿದೆ.
ಖಾಲಿ OMR ಶೀಟ್ ಸಲ್ಲಿಸಿದ ನಂತರ ಕಾನೂನು ಬಾಹಿರವಾಗಿ ನೇಮಕಗೊಂಡ ಶಾಲಾ ಶಿಕ್ಷಕರು ನಾಲ್ಕು ವಾರಗಳಲ್ಲಿ ತಮ್ಮ ವೇತನ ಹಿಂದಿರುಗಿಸಬೇಕು ಎಂದು ನ್ಯಾಯಮೂರ್ತಿ ದೇಬಂಗ್ಸು ಬಸಾಕ್ ಮತ್ತು ನ್ಯಾಯಮೂರ್ತಿ ಶಬ್ಬರ್ ರಶೀದಿ ಅವರನ್ನೊಳಗೊಂಡ ಪೀಠ ಆದೇಶ ನೀಡಿದೆ. ಅಷ್ಟೇ ಅಲ್ಲ ಈ ಶಿಕ್ಷಕರ ಸಂಬಳ ವಸೂಲಿ ಮಾಡುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗೆ ವಹಿಸಲಾಗಿದೆ.
ಏತನ್ಮಧ್ಯೆ ನೇಮಕಾತಿಯಲ್ಲಿ ತರಬೇತಿಗೆ ಆಯ್ಕೆಯಾಗಿದ್ದ ಸೋಮ ದಾಸ್ ಎಂಬಾತ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಮಾನವೀಯತೆ ದೃಷ್ಠಿಯಿಂದ ಆತನನ್ನು ಕೆಲಸದಲ್ಲಿ ಮುಂದುವರಿಯುವಂತೆ ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ, ಈ ಪ್ರಕರಣದ ಕುರಿತು ನೇಮಕಾತಿ ಪ್ರಕ್ರಿಯ ಬಗ್ಗೆ ಸಿಬಿಐ ತನಿಖೆ ನಡೆಸಿ, ಮೂರು ತಿಂಗಳೊಳಗೆ ವರದಿ ಒಪ್ಪಿಸುವಂತೆ ತಿಳಿಸಿತ್ತು, ವೆಸ್ಟ್ ಬೆಂಗಾಲ್ ಸ್ಕೂಲ್ ಸರ್ವೀಸ್ ಕಮಿಷನ್ (ಡಬ್ಲ್ಯುಬಿ ಎಸ್ ಎಎಸ್ ಸಿ) ಹೊಸದಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸುವಂತೆ ಸೂಚನೆ ನೀಡಿದೆ.
ಕೋಲ್ಕತಾ ಹೈಕೋರ್ಟ್ ತೀರ್ಪಿನ ವಿರುದ್ಧ ಪಶ್ಚಿಮಬಂಗಾಳ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ. ಈಗಾಗಲೇ ಶಿಕ್ಷಕರ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಮತ್ತು ಮಾಜಿ ಅಧಿಕಾರಿಗಳು ಜೈಲಿನಲ್ಲಿದ್ದಾರೆ.