ನವದೆಹಲಿ: ಸಾಲು, ಸಾಲು ಹಬ್ಬಗಳ ನಡುವೆ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆ ಮತ್ತು ಬೋನಸ್ ನೀಡಿದ ನಂತರ ಇದೀಗ ಗ್ರ್ಯಾಚ್ಯುಟಿ ಮತ್ತು ಪಿಂಚಣಿ ಬಗ್ಗೆ ಕೇಂದ್ರ ಸರ್ಕಾರ ಮತ್ತೊಂದು ಕಹಿ ಸುದ್ದಿ ಘೋಷಿಸಿದೆ.
ಇದನ್ನೂ ಓದಿ:ಹಿಜಾಬ್ ಧರಿಸಿದ ಮಹಿಳೆ ಭಾರತದ ಪ್ರಧಾನಿಯಾಗಬೇಕೆಂದು ಬಯಸುತ್ತೇನೆ: ಒವೈಸಿ
ಈ ಹೊಸ ಕಾಯ್ದೆ ಕೇಂದ್ರ ಸರ್ಕಾರಿ ನೌಕರರಿಗೆ ಅನ್ವಯವಾಗಲಿದ್ದು, ಅದೇ ರೀತಿ ರಾಜ್ಯ ಸರ್ಕಾರಗಳು ಕೂಡಾ ಇದನ್ನು ಜಾರಿಗೊಳಿಸಲಿದೆ. ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ಕಾಯ್ದೆ 2021ರ ಅನ್ವಯ, ಕೇಂದ್ರ ಸರ್ಕಾರಿ ನೌಕರರು ತಮ್ಮ ಕರ್ತವ್ಯದ ವೇಳೆ ನಿರ್ಲಕ್ಷ್ಯದಿಂದ ಅಥವಾ ಗಂಭೀರ ಪ್ರಕರಣಗಳಲ್ಲಿ ದೋಷಿ ಎಂದು ಸಾಬೀತಾದರೆ ನಿವೃತ್ತ ಕೇಂದ್ರ ಸರ್ಕಾರಿ ನೌಕರರ ಪಿಂಚಣಿ ಮತ್ತು ಗ್ರ್ಯಾಚ್ಯುಟಿಯನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.
ತಿದ್ದುಪಡಿ ಕಾಯ್ದೆಯಲ್ಲಿ ನಿವೃತ್ತಿ ಹೊಂದಿದ ಉದ್ಯೋಗಿಯ ಪಿಂಚಣಿ ಮತ್ತು ಗ್ರ್ಯಾಚ್ಯುಟಿಯನ್ನು ತಡೆ ಹಿಡಿಯಬಹುದಾಗಿದೆ ಎಂದು ತಿಳಿಸಿದೆ. ಪರಿಷ್ಕೃತ ಕಾಯ್ದೆ 8ರ ಅನ್ವಯ, ಕೇಂದ್ರ ಸರ್ಕಾರದ ಉದ್ಯೋಗದಲ್ಲಿದ್ದ ಸಂದರ್ಭದಲ್ಲಿ ಯಾವುದೇ ಗಂಭೀರ ಪ್ರಕರಣದಲ್ಲಿ ದೋಷಿ ಎಂದು ಕಂಡುಬಂದಲ್ಲಿ ನಿವೃತ್ತಿ ಸಂದರ್ಭದಲ್ಲಿ ಪಿಂಚಣಿ ಮತ್ತು ಗ್ರ್ಯಾಚ್ಯುಟಿಯನ್ನು ತಡೆಹಿಡಿಯಲಾಗುತ್ತದೆ ಎಂದು ವರದಿ ವಿವರಿಸಿದೆ.
ಪಿಂಚಣಿ ಅಥವಾ ಗ್ರ್ಯಾಚ್ಯುಟಿಯನ್ನು ಅನಿರ್ದಿಷ್ಟಾವಧಿ ಅಥವಾ ಪೂರ್ವ ನಿರ್ಧರಿತ ಸಮಯದವರೆಗೆ ಸರ್ಕಾರ ತಡೆಹಿಡಿಯಬಹುದಾಗಿದೆ. ಅಷ್ಟೇ ಅಲ್ಲ ಯಾವುದೇ ಹಣಕಾಸಿನ ನಷ್ಟದ ಪೂರ್ಣ ಅಥವಾ ಭಾಗಶಃ ಮರುಪಡೆವಿಕೆಗೆ ಪಿಂಚಣಿ ಅಥವಾ ಗ್ರ್ಯಾಚ್ಯುಟಿಯನ್ನು ತಡೆಹಿಡಿಯುವಂತೆ ಆದೇಶ ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ ಎಂದು ವರದಿ ತಿಳಿಸಿದೆ.