Advertisement

ಬಿಐಇಸಿ ಕೇಂದ್ರ ವ್ಯವಸ್ಥೆ ಅಂತಿಮ

07:38 AM Jul 26, 2020 | Suhan S |

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ (ಬಿಐಇಸಿ) ಕೋವಿಡ್ ಆರೈಕೆ ಕೇಂದ್ರ ತಯಾರಿ ಬಹುತೇಕ ಅಂತಿಮವಾಗಿದೆ.

Advertisement

ಬಿಐಇಸಿಯ ಐದು ಸಭಾಂಗಣದಲ್ಲಿ ಒಟ್ಟು 6,500 ಹಾಸಿಗೆ ಸಾಮರ್ಥ್ಯದ ಕೊರೊನಾ ಆರೈಕೆ ಕೇಂದ್ರ ನಿರ್ಮಿಸಲಾಗುತ್ತಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ವ್ಯವಸ್ಥೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಅನಾಹುತ ಸಂಭವಿಸದಂತೆ ಮುಂಜಾಗ್ರತಾ ಕ್ರಮ ವಹಿಸಬೇಕಾಗಿದ್ದು, ಅಗ್ನಿ ಶಾಮಕ ಇಲಾಖೆ ಮತ್ತು ಬೆಸ್ಕಾಂನಿಂದ ಪಾಲಿಕೆ ಸುರಕ್ಷತೆ ದೃಢೀಕರಣ ಪಡೆಯ ಬೇಕಿದೆ. ಈ ಸಂಬಂಧ ಅಗ್ನಿ ಶಾಮಕದಳ ಇಲಾಖೆಯ ಅಧಿಕಾರಿಗಳು ಶನಿವಾರ ಬಿಐಇಸಿ ಕೇಂದ್ರಕ್ಕೆ ಭೇಟಿ ನೀಡಿದ್ದು, ಕೆಲವು ನಿರ್ದಿಷ್ಟ ಬದಲಾವಣೆಗಳನ್ನು ಮಾಡಿ ಕೊಳ್ಳುವಂತೆ ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹೀಗಾಗಿ, ನಿಗದಿಯಂತೆ ಸೋಮವಾರ ಆರೈಕೆ ಕೇಂದ್ರ ಆರಂಭ ಗೊಳ್ಳುವ ಸಾಧ್ಯತೆ ಇದೆ. ಬಿಐಇಸಿ ಕೇಂದ್ರದಲ್ಲಿ ಫ್ಯಾನ್‌, ಮೊಬೈಲ್‌ ಚಾರ್ಜಿಂಗ್‌ ವ್ಯವಸ್ಥೆ, ಟಿವಿ, ಎಲ್‌ ಇಡಿ ಸೇರಿದಂತೆ ಬೃಹತ್‌ ಪ್ರಮಾಣದಲ್ಲಿ ವಿದ್ಯುತ್‌ ಸಂಪರ್ಕ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಬೆಸ್ಕಾಂ ಇಲಾಖೆಯೂ ಅನುಮತಿ ನೀಡಬೇಕಿದೆ. ಬೆಸ್ಕಾಂನಿಂದಲೂ ಅನುಮತಿ ಪಡೆದು ನಿಗದಿಯಂತೆ ಸೋಮವಾರ ಉದ್ಘಾಟನೆ ಮಾಡುವುದಾಗಿ ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.

ಬಿಐಇಸಿಯಲ್ಲಿ ತಾತ್ಕಾಲಿಕ ಅಗ್ನಿಶಾಮಕ ಠಾಣೆ : ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ (ಬಿಐಇಸಿ)ಕೇಂದ್ರದ ನಿರ್ಮಾಣ ಮಾಡಲಾಗಿರುವ ಕೋವಿಡ್‌ ಆರೈಕೆ ಕೇಂದ್ರದಲ್ಲಿ ಐದು ಸಾವಿರಕ್ಕೂ ಹೆಚ್ಚು ಜನರಿಗೆ ಆರೈಕೆ ನೀಡಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಇಲ್ಲಿ ತಾತ್ಕಾಲಿಕ ಅಗ್ನಿಶಾಮಕ ದಳದ ಠಾಣೆ ಆರಂಭಿಸಲಾಗುತ್ತಿದೆ. ಇನ್ನು ಸೋಂಕಿತರ ಆರೈಕೆಗೆ 250 ಮಂದಿ ವೈದ್ಯರು, 500 ಸ್ಟಾಫ್ ನರ್ಸ್‌ ಹಾಗೂ 700 ಜನ ಸಹಾಯಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿಬಿಎಂಪಿಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next