ಬೀದರ: ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿ ಡಾ| ಎಚ್.ಆರ್.ಮಹಾದೇವ ಅವರ ಅಧ್ಯಕ್ಷತೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಯಿತು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ನಿರ್ಮಿತಿ ಕೇಂದ್ರ ಸೇರಿದಂತೆ ವಿವಿಧ ಇಲಾಖೆಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಧಿಕಾರಿಗಳು, ನಿಗದಿಪಡಿಸಿದ ಗುರಿಯಂತೆ ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲೆಯ 108 ಶಾಲೆಗಳಲ್ಲಿ ತೀವ್ರ ನಿಗಾ ಕಲಿಕಾ ತರಗತಿಗಳನ್ನು ತೆರೆಯುವ ಯೋಜನೆಗೆ ಸಂಬಂ ಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಕೆಲಸ ಬೇಗ ಪೂರ್ಣಗೊಳಿಸಿ ಆರ್ಥಿಕ ಮತ್ತು ಭೌತಿಕ ಸಾಧನೆಯಾಗುವಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಎಲ್ಲ ತಾಲೂಕುಗಳಲ್ಲಿ ಕಾಮಗಾರಿಗಳು ವಿಳಂಬವಾಗಿ ನಡೆಯುತ್ತಿರುವುದಕ್ಕೆ ಅಸಮಾಧಾನಗೊಂಡ ಜಿಲ್ಲಾಧಿಕಾರಿಯವರು ಹಳೆಯ ಕಾಮಗಾರಿ ಗಳನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡುವಂತಿಲ್ಲ. ಚಾಲ್ತಿಯಲ್ಲಿರುವ ಕೆಲಸಗಳನ್ನು ಚುರುಕುಗೊಳಿಸಿ ಅನುದಾನ ಖರ್ಚು ಮಾಡುವಂತೆ ಸೂಚಿಸಿದರು.
ಲೋಕೋಪಯೋಗಿ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಸಾಕಷ್ಟು ಯೋಜನೆಗಳಿವೆ. ಈಗಾಗಲೇ ನಡೆಯುತ್ತಿರುವ ಕೆಲಸಗಳನ್ನು ಆದಷ್ಟು ಶೀಘ್ರ ಮುಗಿಸಬೇಕು. ಹಾಗೂ ಇನ್ನೂ ಆರಂಭವಾಗದ ಕೆಲಸಗಳನ್ನು ತುರ್ತಾಗಿ ಆರಂಭಿಸಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕೆಕೆಆರ್‌ಡಿಬಿ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ಪ್ರತಿನಿತ್ಯ ಪ್ರಗತಿ ವರದಿ ಸಲ್ಲಿಸಬೇಕು. ಆರ್ಥಿಕ ಪ್ರಗತಿ ಸಾಧನೆಯಾದಲ್ಲಿ ಕೂಡಲೇ ಆ ಬಗ್ಗೆ ವೆಬ್ ಸೈಟ್‌ನಲ್ಲಿ ಮಾಹಿತಿ ದಾಖಲಿಸಬೇಕು ಎಂದು ಅಧಿ ಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಞಾನೇಂದ್ರಕುಮಾರ ಗಂಗವಾರ, ಅಪರ ಜಿಲ್ಲಾಧಿಕಾರಿ ರುದ್ರೇಶ್ ಗಾಳಿ, ನಗರಸಭೆ ಪೌರಾಯುಕ್ತ ಬಿ.ಬಸಪ್ಪ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.