Advertisement
ಮಳೆಗಾಲ ಬಂತೆಂದರೆ ಸಾಕು ಸೊಳ್ಳೆಗಳ ಸಾಮ್ರಾಜ್ಯ ನಿರ್ಮಾಣವಾಗುತ್ತದೆ. ಇದಕ್ಕೆ ಪ್ರಮುಖ ಕಾರಣವೆನಿಸುವುದು ನಗರವನ್ನು ಸುತ್ತುವರಿದು ಹರಿಯುವ ಬಿದಿರಹಳ್ಳ ಎನ್ನುವ ರಾಜಕಾಲುವೆ. ಈ ಕಾಲುವೆ ನಗರದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಿಂದ ಹಾದು ಹೋಗಿ ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆಯ ತನಕ ಗಮನಿಸಿದರೆ ಇದರಲ್ಲಿ ಉತ್ಪಾದಿತವಾಗುವ ಸೊಳ್ಳೆಗಳು ಸಾಂಕ್ರಾಮಿಕ ರೋಗ ಹರಡುವಷ್ಟು ಮಟ್ಟಿಗೆ ಕೊಳಚೆ ತುಂಬಿ ಹರಿಯುತ್ತಿದೆ. ನಗರದ ಹೊಟೇಲ್ಗಳ ತ್ಯಾಜ್ಯವೇ ಹೂಳು ತುಂಬಿರುವುದಕ್ಕೆ ಪ್ರಮುಖ ಕಾರಣವಾಗಿದೆ. ಉಳಿದಂತೆ ಸ್ಥಳೀಯ ಮನೆ, ಅಂಗಡಿಗಳ ತ್ಯಾಜ್ಯ ಈ ಕಾಲುವೆಯನ್ನು ಪ್ರತಿನಿತ್ಯ ಸೇರುತ್ತದೆ.
ಈ ಬಿದಿರಹಳ್ಳ ರಾಜ ಕಾಲುವೆಯ ಹೂಳೆತ್ತದೆ ಇದ್ದರೆ ಈ ಬಾರಿ ಮಳೆಗಾಲ ದಲ್ಲಿ ನಗರದಲ್ಲಿ ಕೃತಕ ನೆರೆ ಉಂಟು ಮಾಡುವುದರಲ್ಲಿ ಯಾವುದೇ ಸಂದೇಹ ಇಲ್ಲ. ಅಷ್ಟೊಂದು ಹೂಳು ತುಂಬಿಕೊಂಡಿದೆ. ಜತೆಗೆ ಈ ರಾಜಕಾಲುವೆ ಯಲ್ಲಿ ಅಂಗಡಿ ಮತ್ತು ಮನೆಗಳ ಕಸ, ಪುತ್ತೂರಿನ ವಿವಿಧ ಹೊಟೇಲ್ಗಳ ತ್ಯಾಜ್ಯ ತುಂಬಿಕೊಂಡಿದೆ. ಸಾಂಕ್ರಾಮಿಕ ರೋಗಗಳ ಕೊಡುಗೆ ನೀಡಲು ಈ ರಾಜಕಾಲುವೆ ಸಾಕು ಎನ್ನುವುದು ಈ ರಾಜಕಾಲುವೆಯ ಪಕ್ಕದಲ್ಲಿ ವಾಸ ಮಾಡುವ ಸ್ಥಳೀಯರ ಅಭಿಪ್ರಾಯ.
Related Articles
ಆದ್ಯತೆಯಾಗಲಿ
ನಗರಸಭೆ 30 ಲಕ್ಷ ರೂ. ಅನುದಾನದಲ್ಲಿ ತೋಡುಗಳ ಹಾಗೂ ಚರಂಡಿಗಳ ಹೂಳೆತ್ತಲು ಯೋಜನೆ ಹಮ್ಮಿಕೊಂಡು ಕಾಮಗಾರಿ ಆರಂಭಿಸಿತ್ತು. ಆದರೆ ಈ ರಾಜ ಕಾಲುವೆಯ ಸಂಪೂರ್ಣ ಸ್ವಚ್ಛತೆಯ ಕುರಿತು ಗಂಭೀರ ಯೋಚನೆಯೇ ಮಾಡಿಲ್ಲ. ಬಿದಿರ ಹಳ್ಳ ರಾಜಕಾಲುವೆಯಲ್ಲಿ ತುಂಬಿರುವ ಹೂಳು ಮತ್ತು ಕೊಳಚೆ ಸ್ವಚ್ಛ ಮಾಡುವುದು ನಗರಸಭೆಯ ಪ್ರಮುಖ ಆದ್ಯತೆ ಆಗಬೇಕಾಗಿದೆ.
ಕೃತಕ ನೆರೆಯ ಭೀತಿ
ಬಿದಿರಹಳ್ಳ ಕಾಲುವೆಯ ಹೂಳೆತ್ತುವ ಕೆಲಸಕ್ಕೆ ಸಂಬಂಧಪಟ್ಟ ಇಲಾಖೆ ತತ್‌ಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಈಗಾಗಲೇ ತುಂಬಿರುವ ತ್ಯಾಜ್ಯದಿಂದಾಗಿ ಕಾಲುವೆ ಬ್ಲಾಕ್ ಆಗಿ ಸ್ಥಳೀಯ ಮನೆ, ರಸ್ತೆಗಳಿಗೆ ಕೃತಕ ನೆರೆ ಬರುವ ಸಂಭವವಿದೆ.
-ಲೋಕೇಶ್ ಅಲುಂಬುಡ ಸಾಮಾಜಿಕ ಕಾರ್ಯಕರ್ತ
Advertisement