ಬೀದರ್ : ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಯುವಕನೋರ್ವ ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿರುವುದನ್ನು ವಿರೋಧಿಸಿ ಮುಸ್ಲಿಮರು ಸೋಮವಾರ ತಡ ರಾತ್ರಿ ದಿಢೀರನೇ ಪ್ರತಿಭಟನೆ ನಡೆಸಿದ ಘಟನೆ ಬಸವಕಲ್ಯಾಣದಲ್ಲಿ ನಡೆದಿದ್ದು, ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ವ್ಯಕ್ತಿಯನ್ನು ಬಂಧಿಸಿದ ಬಳಿಕ ಪ್ರತಿಭಟನೆ ಕೈಬಿಡಲಾಗಿದೆ.
ಬಸವಕಲ್ಯಾಣದ ಯುವಕ ವಾಟ್ಸಪ್ ಗ್ರೂಪ್ ನಲ್ಲಿ ಪೈಗಂಬರ್ ಅವರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದಾನೆ. ಈ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಗಾಂಧಿ ವೃತ್ತದಲ್ಲಿ ಜಮಾಯಿಸಿದ ನೂರಾರು ಜನ ಮುಸ್ಲಿಂ ಬಾಂಧವರು ದಿಢೀರನೆ ಪ್ರತಿಭಟನೆ ನಡೆಸಿದ್ದಾರೆ. ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಪೋಸ್ಟ್ ಶೇರ್ ಮಾಡಿದವನನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸಾಮಾನ್ಯರಿಗೆ ಅನ್ವಯವಾಗುವ ಕಾನೂನು ಗಾಂಧಿ ಕುಟುಂಬಕ್ಕೂ ಅನ್ವಯವಾಗುತ್ತದೆ: ತೇಜಸ್ವಿ ಸೂರ್ಯ
ಕೂಡಲೇ ಎಚ್ಚೆತ್ತ ಪೊಲೀಸರು ಪೋಸ್ಟ್ ಹಾಕಿದವನನ್ನು ವಶಕ್ಕೆ ಪಡೆದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್‌ಪಿ ಸೋಮಲಿಂಗ ಕುಂಬಾರ ಈಗಾಗಲೇ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.
ಪ್ರತಿಭಟನೆ ವೇಳೆ ಕೆಲ ಸಮಯ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರ ಸಮಯ ಪ್ರಜ್ಞೆಯಿಂದ ಘಟನೆ ತಿಳಿಗೊಂಡಿದೆ. ಮರು ದಿನ ಬುಧವಾರ ಘಟನೆಯನ್ನು ಖಂಡಿಸಿ ಬಸವಕಲ್ಯಾಣದ ಓಲ್ಡ್ ಸಿಟಿಯಲ್ಲಿ ಮುಸ್ಲಿಮರು ಕೆಲ ಕಾಲ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. ನಂತರ ವ್ಯಾಪಾರ ಆರಂಭಿಸಿದ್ದಾರೆ.