Advertisement

ಭಾರತಕ್ಕೆ ಬೈಡೆನ್‌ ಭರವಸೆ

09:15 AM Nov 09, 2020 | mahesh |

ವಾಷಿಂಗ್ಟನ್‌/ ಹೊಸದಿಲ್ಲಿ: ಭಾರೀ ಹಣಾಹಣಿ ಮಧ್ಯೆ ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡೆನ್‌, ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್‌ ಆಯ್ಕೆಯಾಗಿದ್ದು, ಇವರಿಂದ ಭಾರತಕ್ಕೇನು ಅನುಕೂಲ ಎಂಬ ಚರ್ಚೆ ಆರಂಭವಾಗಿದೆ. “ಅಮೆರಿಕ ಫ‌ಸ್ಟ್‌’ ನೀತಿಯಡಿ ಹಾಲಿ ಅಧ್ಯಕ್ಷ ಟ್ರಂಪ್‌ ಎಚ್‌1ಬಿ ವೀಸಾ ಮತ್ತು ವಲಸೆ ನೀತಿಗಳಿಗೆ ನಿರ್ಬಂಧ ಹೇರಿದ್ದರು. ಬೈಡೆನ್‌ ಈ ನೀತಿಗಳನ್ನು ಸಡಿಲಿಸುವ ಸಾಧ್ಯತೆ ಇದ್ದು, ಅಸಂಖ್ಯಾತ ಭಾರತೀಯರ “ಅಮೆರಿಕನ್‌ ಡ್ರೀಮ್‌’ ಚಿಗುರೊಡೆಯುವ ಸಾಧ್ಯತೆ ಇದೆ.

Advertisement

ಮೂಲಗಳ ಪ್ರಕಾರ ಬೈಡೆನ್‌ ಆಡಳಿತವು ದಾಖಲೆಗಳಿಲ್ಲದೆ ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತದ 5 ಲಕ್ಷ ಮಂದಿ ಸೇರಿ 1.10 ಕೋಟಿ ಮಂದಿಗೆ ಪೌರತ್ವ ನೀಡುವ ಸಾಧ್ಯತೆ ಇದೆ. ಜತೆಗೆ ವಾರ್ಷಿಕವಾಗಿ 95 ಸಾವಿರ ನಿರಾಶ್ರಿತರಿಗೆ ಅಮೆರಿಕ ಪ್ರವೇಶಿಸಲು ಅವಕಾಶ ನೀಡುವ ಸಾಧ್ಯತೆ ಇದೆ.

ಚುನಾವಣ ಪ್ರಚಾರದ ವೇಳೆಯೇ ಬೈಡೆನ್‌ ಅವರು ಭಾರತ ಸಹಿತ ವಿವಿಧ ದೇಶಗಳ ವಲಸಿಗರಿಗೆ ಪೌರತ್ವ ನೀಡುವ ಬಗ್ಗೆ ಪಾಲಿಸಿ ಡಾಕ್ಯುಮೆಂಟ್‌ ಸಿದ್ಧಪಡಿಸಿದ್ದರು. ಇದರ ಅನ್ವಯ ಭಾರತದ 5 ಲಕ್ಷ ಅಕ್ರಮ ವಲಸಿಗರಿಗೆ ಪೌರತ್ವ ಸಿಗುವ ಸಾಧ್ಯತೆ ಇದೆ.

ಈ ಪೌರತ್ವ ನೀತಿಯಲ್ಲಿ ಪ್ರಮುಖವಾಗಿ ಕುಟುಂಬ ಆಧರಿತ ವಲಸೆ ಮತ್ತು ಕೌಟುಂಬಿಕ ಒಗ್ಗಟ್ಟಿನ ಸಂರಕ್ಷಣೆಗೆ ಆದ್ಯತೆ ನೀಡುವ ಸಾಧ್ಯತೆ ಇದೆ. ಟ್ರಂಪ್‌ ಕಾಲದಲ್ಲಿ ಸ್ಥಗಿತಗೊಂಡಿದ್ದ ಗ್ರೀನ್‌ ಕಾರ್ಡ್‌ ಹೋಲ್ಡರ್ಸ್‌ಗೆ ಪೌರತ್ವ ನೀಡುವ ಕಾರ್ಯವನ್ನು ಬೈಡೆನ್‌ ಆರಂಭಿಸಲಿದ್ದಾರೆ. ಗ್ರೀನ್‌ ಕಾರ್ಡ್‌ ಹೊಂದಿರುವವರಿಗೆ ಉದ್ಯೋಗ ಆಧರಿತ ವೀಸಾ ನೀಡಲಾಗುತ್ತಿದ್ದು, ಇವರು ಅಮೆರಿಕದ ಶಾಶ್ವತ ಪೌರತ್ವ ಪಡೆಯಬಹುದಾಗಿದೆ.
ಬೈಡೆನ್‌ ಆಡಳಿತವು ಶಾಶ್ವತವಾಗಿ ಅಮೆರಿಕದಲ್ಲಿ ನೆಲೆಸಲು ಬರುವವರಿಗೆ ನೀಡುವ ವೀಸಾ ಸಂಖ್ಯೆ ಹೆಚ್ಚಿಸುವ ಸಾಧ್ಯತೆ ಇದೆ.

ಮುಸ್ಲಿಂ ನಿಷೇಧ ವಾಪಸ್‌
ಟ್ರಂಪ್‌ ಆಡಳಿತದ ಅವಧಿಯಲ್ಲಿ ಕೆಲವು ಮುಸ್ಲಿಂ ಬಾಹುಳ್ಯವಿರುವ ದೇಶಗಳ ಜನರ ವಲಸೆಗೆ ನಿಷೇಧ ಹೇರಲಾಗಿತ್ತು. ಬೈಡೆನ್‌ ಆಡಳಿತ ಈ ನಿಷೇಧವನ್ನು ತೆಗೆದುಹಾಕುವ ಸಾಧ್ಯತೆ ಇದೆ.

Advertisement

ಭಾರತ: ಹೂಡಿಕೆ ಹೆಚ್ಚಳ?
ಬೈಡೆನ್‌ ಆಡಳಿತದಲ್ಲಿ ಕಾರ್ಪೊರೆಟ್‌ದಾರರಿಗೆ ಹೆಚ್ಚಿನ ತೆರಿಗೆ ವಿಧಿಸುವ ಸಾಧ್ಯತೆ ಇದೆ. ಈ ನಿರ್ಧಾರ ಜಾರಿಯಾದರೆ ಭಾರತದಲ್ಲಿ ಅಮೆರಿಕದ ಹೂಡಿಕೆ ಹೆಚ್ಚಾಗಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ. ಸದ್ಯ ಅಮೆರಿಕದಲ್ಲಿ ಕಾರ್ಪೊರೆಟ್‌ ತೆರಿಗೆ ಶೇ.21ರಷ್ಟಿದ್ದು, ಇದನ್ನು ಶೇ.28ಕ್ಕೆ ಏರಿಸುವ ಸಾಧ್ಯವಿದೆ. ಆಗ ಹೂಡಿಕೆದಾರರು ಹೆಚ್ಚಿನ ಲಾಭಾಂಶಕ್ಕಾಗಿ ಭಾರತದತ್ತ ಮುಖ ಮಾಡುವ ಸಾಧ್ಯತೆ ಇದೆ.

ಕನ್ನಡಿಗ ವಿವೇಕ್‌ ಮೂರ್ತಿಗೆ ಹೊಣೆ?
ಬೈಡೆನ್‌ ಆಡಳಿತದಲ್ಲಿ ಕನ್ನಡಿಗ ಡಾ| ವಿವೇಕ್‌ ಮೂರ್ತಿಗೆ ಕೋವಿಡ್‌ ಕಾರ್ಯಪಡೆಯ ಹೊಣೆ ಸಿಗುವ ಸಾಧ್ಯತೆ ಇದೆ. ಈ ಸಂಬಂಧ ಸೋಮವಾರವೇ ನಿಯೋಜಿತ ಅಧ್ಯಕ್ಷ ಬೈಡೆನ್‌ ಘೋಷಣೆ ಮಾಡಲಿದ್ದಾರೆ. ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಕೊರೊನಾ ನಿಯಂತ್ರಣಕ್ಕೆ ಮುಂದಾಗಿರುವ ಬೈಡೆನ್‌, ಖ್ಯಾತ ಸರ್ಜನ್‌ ಡಾ| ವಿವೇಕ್‌ ಮೂರ್ತಿ ಮತ್ತು ಆಹಾರ ಮತ್ತು ಔಷಧ ಆಡಳಿತ ಇಲಾಖೆಯ ನಿವೃತ್ತ ಆಯುಕ್ತ ಡೆವಿಡ್‌ ಕೆಲ್ಸರ್‌ಗೆ ಕಾರ್ಯಪಡೆಯ ಹೊಣೆ ನೀಡಲಿದ್ದಾರೆ.

ಇರಾನ್‌ ಅಧ್ಯಕ್ಷರ ಕರೆ
ಅಚ್ಚರಿಯ ಬೆಳವಣಿಗೆಯಲ್ಲಿ ಇರಾನ್‌ ಅಧ್ಯಕ್ಷ ಹಸನ್‌ ರೋಹಾನಿ ಅವರು ಬೈಡೆನ್‌ಗೆ ಕರೆ ಮಾಡಿ ಅಭಿನಂದಿಸಿದ್ದಾರೆ. ಜತೆಗೆ ಎರಡೂ ದೇಶಗಳ ನಡುವೆ ಇರುವ ಭಿನ್ನಾಭಿಪ್ರಾಯ ನಿವಾರಿಸಿಕೊಳ್ಳುವ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ.

ಐದು ವಲಸೆ ನಿಯಮಗಳಿಗೆ ತಿದ್ದುಪಡಿ
1 ಜನವರಿಯಲ್ಲಿ ಅಧಿಕಾರ ವಹಿಸಿಕೊಳ್ಳಲಿರುವ ಬೈಡೆನ್‌ ಮೊದಲು ಮಾಡುವ ಕೆಲಸವೇ ವಲಸೆ ನೀತಿಗೆ ಇರುವ ನಿರ್ಬಂಧ ತೆಗೆದುಹಾಕುವುದು. ಅಂದರೆ ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ 1.10 ಕೋಟಿ ಮಂದಿಗೆ ಪೌರತ್ವ ನೀಡುವುದು.

2 ಹದಿಮೂರು ಮುಸ್ಲಿಂ ಅಥವಾ ಆಫ್ರಿಕಾ ದೇಶಗಳ ಜನರಿಗೆ ಹೇರಲಾಗಿರುವ ಪ್ರಯಾಣ ನಿಷೇಧದ ವಾಪಸಾತಿ. 2017ರಲ್ಲಿ ಡೊನಾಲ್ಡ್‌ ಟ್ರಂಪ್‌ ಈ ದೇಶಗಳ ಜನರಿಗೆ ನಿರ್ಬಂಧ ಹೇರಿದ್ದರು.

3 ಕಾನೂನುಬದ್ಧ ವಲಸಿಗರಿಗೆ ಅಮೆರಿಕ ಪ್ರವೇಶಕ್ಕೆ ಅನುಮತಿ ನೀಡುವುದು.

4 ಕುಶಲ ಕೆಲಸಗಾರರ ಪ್ರವೇಶಕ್ಕೆ ಹೇರಲಾಗಿದ್ದ ನಿರ್ಬಂಧ ವಾಪಸ್‌ ತೆಗೆದುಕೊಳ್ಳುವ ಸಾಧ್ಯತೆ. ಇದರಿಂದ ಅಸಂಖ್ಯಾತ ಭಾರತೀಯರಿಗೆ ಅನುಕೂಲ.

5 ವರ್ಷಕ್ಕೆ 95 ಸಾವಿರ ನಿರಾಶ್ರಿತರಿಗೆ ಅಮೆರಿಕ ಪ್ರವೇಶಿಸಲು ಅನುಮತಿ. ಒಬಾಮಾ ಕಾಲದಲ್ಲಿ ವರ್ಷಕ್ಕೆ 1.25 ಲಕ್ಷ ಮಂದಿಗೆ ಅವಕಾಶ ನೀಡಲಾಗುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next