ಉಳಿದೆಲ್ಲಾ ದೇವಾಲಯಗಳಲ್ಲೂ ನಿಂತಿರುವ ಆಂಜನೇಯನ ಮೂರ್ತಿಗಳನ್ನಷ್ಟೇ ನಾವೆಲ್ಲ ನೋಡಿರುತ್ತೇವೆ. ಆದರೆ ಇಲ್ಲಿ ಆಂಜನೇಯನ ಮೂರ್ತಿ ಮಲಗಿದ ಸ್ಥಿತಿಯಲ್ಲಿದೆ. ಈ ದೇವಾಲಯಕ್ಕೆ ಮೇಲ್ಛಾವಣಿಯೂ ಇಲ್ಲ…
ಕಲಿಯುಗದಲ್ಲಿ ಹನುಮಂತನನ್ನು ಆರಾಧಿಸಿದರೆ ಶನಿಭಾದೆ ಇರದೆಂದು ಹಲವರ ನಂಬಿಕೆ. ಬಹಳ ಜನ ಅಂಜನೇಯನನ್ನು ಆರಾಧಿಸುತ್ತಾರೆ. ಅಂತೆಯೇ ಪುರಾತನ ಹಿನ್ನೆಲೆ ಹೊಂದಿದ ಅಂಜನೇಯ ದೇವಸ್ಥಾನಗಳು ಹಲವಾರು ಇದೆ.
ಅಂಥ ದೇವಸ್ಥಾನಗಳಲ್ಲಿ ಒಂದು ಶ್ರೀ ಬಿದ್ದಾಂಜನೇಯ ದೇವಸ್ಥಾನ. ತುಮಕೂರು ಜಿಲ್ಲೆ ಗುಬ್ಬಿತಾಲ್ಲೂಕಿನಲ್ಲಿರುವ ಈ ದೇವಸ್ಥಾನಕ್ಕೆ ಸುಮಾರು ನಾನೂರು ವರ್ಷಗಳ ಇತಿಹಾಸವಿದೆ. ಜೀವನದಲ್ಲಿ ನೊಂದು ಬೆಂದು ಹತಾಶರಾಗಿ ಬಿದ್ದು ಹೋದ ಭಕ್ತರನ್ನು ಈ ಬಿದ್ದಾಂಜನೇಯ ಎತ್ತಿ ಉದ್ಧರಿಸುತ್ತಾನೆ ಎಂಬ ನಂಬಿಕೆ ಇದೆ.
ಬೇರೆ ಎಲ್ಲಾ ದೇವಸ್ಥಾನಗಳಲ್ಲಿರುವಂತೆ ಇಲ್ಲಿ ಆಂಜನೇಯನ ಮೂರ್ತಿ ನಿಂತುಕೊಂಡಿರದೆ ಮಲಗಿದ ಸ್ಥಿತಿಯಲ್ಲಿರುವುದೇ ಇಲ್ಲಿನ ವಿಶೇಷ. ಅದಕ್ಕೇ ಬಿದ್ದಾಂಜನೇಯ ಎಂಬ ಹೆಸರು ಬಂದಿರಲೂ ಬಹುದು. ಅಷ್ಟೇ ಅಲ್ಲ, ಹನುಮಂತನ ಮೂರ್ತಿ ಆಕಾಶವನ್ನು ನೋಡುತ್ತಿದ್ದು ದೇವಸ್ಥಾನಕ್ಕೆ ಮೇಲ್ಚಾವಣಿ ಇರುವುದಿಲ್ಲ. ಈ ದೇವಾಲಯದ ಕುರಿತು ಹೀಗೊಂದು ಕಥೆಯಿದೆ. ಬಹಳ ಹಿಂದೆ ಇಲ್ಲೆಲ್ಲ ದಟ್ಟವಾದ ಕಾಡು ಇತ್ತಂತೆ. ದನಕಾಯುವ ಹುಡುಗರು ಒಮ್ಮೆ ದನ ಮೇಯಿಸಿಕೊಂಡು ಬಂದಾಗ ಕಾಡಿನಲ್ಲಿ ಒಣಗಿದ ತರಗೆಲೆಗಳಿಂದ ಮಣ್ಣಿನಿಂದ ಮುಚ್ಚಿ ಹೋಗಿದ್ದ ಒಂದು ಮೂರ್ತಿಯನ್ನು ನೋಡುತ್ತಾರೆ. ಅಲ್ಲೇ ಪಕ್ಕದ ಕೊಳದಿಂದ ನೀರನ್ನು ತಂದು ತೊಳೆದಾಗ, ಮಲಗಿರುವ ಸ್ಥಿತಿಯಲ್ಲಿರುವ ಅಂಜನೇಯನ ಮೂರ್ತಿ ದೊರೆಯುತ್ತದೆ. ದನ ಕಾಯುವ ಹುಡುಗರು ಅಲ್ಲೇ, ಕೊಳದಲ್ಲಿ ಸಿಗುವ ನೀರಿನಿಂದ ಪ್ರತಿದಿನವೂ ಅದಕ್ಕೆ ಅಭಿಷೇಕ ಮಾಡಿ, ಅಲ್ಲೇ ಸಿಗುವ ಹೂವಿನಿಂದ ಪೂಜೆ ಮಾಡಿ, ಮನೆಯಿಂದ ತಂದ ಬುತ್ತಿಯನ್ನೇ ನೈವೇದ್ಯ ಮಾಡಿ ತಾವೂ ತಿನ್ನುತ್ತಿದ್ದರು. ಮುಂದೆ ಅದೇ ಊರಿನ ಪ್ರಮುಖರೊಬ್ಬರಿಗೆ ಕನಸಿನಲ್ಲಿ ಪ್ರತ್ಯೇಕ್ಷವಾದ ದೇವರು, ತನಗೆ ದೇವಸ್ಥಾನ ಕಟ್ಟಿಸಬೇಕೆಂದು ಆದೇಶಿಸಿತಂತೆ. ಅಷ್ಟೇ ಅಲ್ಲ, ಆ ದೇವಸ್ಥಾನಕ್ಕೆ ಚಾವಣಿ ಇರಕೂಡದೆಂದು, ನಾನು ಬಿಸಿಲಲ್ಲಿ ಒಣಗಬೇಕು ಹಾಗೂ ಮಳೆಯಲ್ಲಿ ನೆನೆಯಬೇಕೆಂದೂ ಹೇಳಿತಂತೆ. ಹಾಗಾಗಿ, ಇಲ್ಲಿರುವ ದೇವಸ್ಥಾನಕ್ಕೆ ಮೇಲ್ಚಾವಣಿ ಇಲ್ಲ. ಒಮ್ಮೆ ದೇವಸ್ಥಾನಕ್ಕೆ ತಗಡಿನ ಚಾವಣಿಯನ್ನು ಹೊದೆಸಿದಾಗ ಆ ವರ್ಷ ಗುಬ್ಬಿ ತಾಲ್ಲೂಕಿನ ಪೂರ್ತಿ ಮಳೆಯಾಗದೆ, ಬರದ ಛಾಯೆ ಆವರಿಸಿತ್ತು. ಆಗ ಊರಿನ ಹಿರಿಯರ ಆದೇಶದ ಮೇರೆಗೆ ಛಾವಣಿ ತೆಗೆದ ನಂತರವೇ ಮಳೆ ಬಂದಿತ್ತೆಂದು ಈ ಭಾಗದ ಜನ ಹೇಳುತ್ತಾರೆ. ಆಂಜನೇಯ ಮೂರ್ತಿಯ ಹಿಂಭಾಗದಲ್ಲಿ ಗಣೇಶನ ಸಣ್ಣ ವಿಗ್ರಹವನ್ನು ಸ್ಥಾಪಿಸಲಾಗಿದೆ. ಈ ದೇವಸ್ಥಾನದಲ್ಲಿ ಗರ್ಭಗುಡಿಯ ಬದಲು ಅಯತಾಕಾರದ ಎರಡು ಮೆಟ್ಟಿಲುಗಳಿರುವ ತೊಟ್ಟಿಯಂತಿದ್ದು, ಅಲ್ಲೇ ಆಂಜನೇಯನನ್ನು ಪ್ರತಿಷ್ಟಾಪಿಸಲಾಗಿದ್ದು ಮೂರ್ತಿ ಆಕಾಶದ ಕಡೆ ತಲೆ ಮಾಡಿದೆ.
ಈ ಪ್ರದೇಶಕ್ಕೆ ರಾಮಾಯಣದ ನಂಟೂ ಇದೆ. ಹಿಂದೆ ಈ ಪ್ರದೇಶಕ್ಕೆ ಜನಕಪುರಿ ಎಂಬ ಹೆಸರಿತ್ತು. ವನವಾಸದ ಕಾಲದಲ್ಲಿ ರಾಮ ಲಕÏ$¾ಣರು ಇದೇ ಮಾರ್ಗವಾಗಿ ಹೋಗಿದ್ದರೆಂದು ಪ್ರತೀತಿ ಇದೆ. ಈ ದೇವಸ್ಥಾನಕ್ಕೆ ಬಂದು ತಮ್ಮ ಕಷ್ಟಗಳನ್ನು ಪರಿಹರಿಸಿಕೊಂಡ ಭಕ್ತರು ಅನೇಕರಿದ್ದಾರೆ. ಚಿತ್ರನಟ ಡಾ ರಾಜ್‌ಕುಮಾರ್ ಸಹ ಈ ದೇವಸ್ಥಾನಕ್ಕೆ ಆಗಮಿಸಿದ್ದರಂತೆ. ಇತ್ತೀಚೆಗೆ ರಾಘವೇಂದ್ರ ರಾಜ್‌ಕುಮಾರ್ ಸಹ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಶ್ರಾವಣಮಾಸದ ಶನಿವಾರಗಳು, ರಾಮನವಮಿ ಹಾಗೂ ಹನುಮಜಂಯಂತಿಯನ್ನು ಇಲ್ಲಿ ವಿಶೇಷವಾಗಿ ಆಚರಿಸುತ್ತಾರೆ. ಬಿ ಹೆಚ್ ರಸ್ತೆಯಲ್ಲಿ ಹೋಗುವ ಪ್ರಯಾಣಿಕರು ಈ ದೇವಸ್ಥಾನಕ್ಕೆ ಭೇಟಿಕೊಡದೇ ಮುಂದೆ ಹೋಗುವುದಿಲ್ಲ.
ಪ್ರಕಾಶ್ ಕೆ ನಾಡಿಗ್, ತುಮಕೂರು