ಬೀದರ: ತಾಯಂದಿರು ಮಕ್ಕಳ ಆಸಕ್ತಿ ಅರಿತುಕೊಳ್ಳಬೇಕು. ಪರೀಕ್ಷೆಯಲ್ಲಿನ ಅಂಕಗಳ ಆಧಾರದ ಮೇಲೆ ಮಕ್ಕಳ ಬುದ್ಧಿಮಟ್ಟ ಅಳೆಯಬಾರದು. ಅವರ ಆಸಕ್ತಿಗೆ ಅನುಗುಣವಾಗಿ ಮಾರ್ಗದರ್ಶನ ನೀಡುವ ಜವಾಬ್ದಾರಿ ಪಾಲಕರದ್ದಾಗಿದೆ ಎಂದು ಹೈದ್ರಾಬಾದ್‌ನ ಡೈವರ್‌ಸಿಟಿ ದ ಪ್ಲೇಸ್ಕೂಲ್ ಸಂಸ್ಥಾಪಕ ನಿರ್ದೇಶಕಿ ಮೇಹೆಕ್ ವಲೆಚಾ ಸಲಹೆ ನೀಡಿದರು.
ನಗರದ ಜ್ಞಾನಸುಧಾ ವಿದ್ಯಾಲಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ತಾಯಂದಿರ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಯಂದಿರು ಮಕ್ಕಳಿಗೆ ಬಾಲ್ಯದಲ್ಲಿಯೇ ಶಿಸ್ತು, ಸಂಯಮ ಹಾಗೂ ಇನ್ನೊಬ್ಬರನ್ನು ಗೌರವಿಸುವ ಭಾವನೆ ಬೆಳೆಸಬೇಕು. ಮಕ್ಕಳೊಂದಿಗೆ ಅಕ್ಕರೆಯಿಂದ ಮಾತನಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದರು.
ಜ್ಞಾನಸುಧಾ ಶಿಕ್ಷಣ ಸಂಸ್ಥೆ ಅಧ್ಯಕ್ಷೆ ಡಾ| ಪೂರ್ಣಿಮಾ ಜಿ. ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳೆವಣಿಗೆಯಲ್ಲಿ ಶಾಲೆಯಂತೆ ಪಾಲಕರ ಪಾತ್ರವೂ ಅಷ್ಟೇ ಪ್ರಮುಖವಾಗಿದೆ. ಹೀಗಾಗಿ ಮಕ್ಕಳಿಗೆ ಮನೆಯಲ್ಲಿ ಪಾಲಕರು ಒಳ್ಳೆಯ ಸಂಸ್ಕಾರ ನೀಡಬೇಕು. ಅವರಲ್ಲಿ ಆತ್ಮವಿಶ್ವಾಸ ಬೆಳೆಸಬೇಕು. ಮನೆಯಲ್ಲಿ ಮಕ್ಕಳು ಓದುತ್ತ ಕುಳಿತಿದ್ದರೆ ಅವರೊಂದಿಗೆ ತಾಯಂದಿರು ಕೂಡ ಯಾವುದಾರೊಂದು ಪುಸಕ್ತ ಓದುತ್ತ ಕುಳಿತುಕೊಳ್ಳಬೇಕು. ಇದರಿಂದ ಮಕ್ಕಳಲ್ಲಿ ಓದುವ ಆಸಕ್ತಿ ಮತ್ತಷ್ಟು ಹೆಚ್ಚಾಗುತ್ತದೆ ಎಂದರು.
ವಿವಿಧ ರೀತಿಯ ಪಠ್ಯೇತರ ಚಟುವಟಿಕೆಗಳು ಮಕ್ಕಳಲ್ಲಿ ಕ್ರಿಯಾಶೀಲತೆ ಬೆಳೆಸುವಲ್ಲಿ ಸಹಕಾರಿಯಾಗಿವೆ. ಆದ್ದರಿಂದ ಪಾಲಕರು ಮಕ್ಕಳಿಗೆ ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಸಂಸ್ಥೆ ನಿರ್ದೇಶಕ ಮುನೇಶ್ವರ ಲಾಖಾ ಮಾತನಾಡಿ, ಪಾಲಕರು ಮಕ್ಕಳ ಮುಂದೆ ಜಗಳ ಮಾಡಿದರೆ ಅವರ ಮೇಲೆ ಬಹಳಷ್ಟು ದುಷ್ಪರಿಣಾಮ ಬೀರುತ್ತದೆ. ಇದರಿಂದ ಅವರಲ್ಲಿ ಕೋಪದ ಭಾವನೆ ಹೆಚ್ಚಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಪಾಲಕರು ಮಕ್ಕಳ ಮುಂದೆ ಜಗಳ ಮಾಡಬಾರದು. ಅವರಿಗೆ ಕೆಟ್ಟ ಪದಗಳು ಬಳಸಿ ಸಿಟ್ಟಿಗೆ ಬರಬಾರದು. ಒಂದು ವೇಳೆ ಆ ರೀತಿ ಮಾಡಿದರೆ ಆ ಕೆಟ್ಟ ಪದಗಳನ್ನೇ ಮಗು ಕಲಿತುಕೊಳ್ಳುತ್ತದೆ. ಮಕ್ಕಳೊಂದಿಗೆ ಗೌರವಯುತವಾಗಿ ಮಾತನಾಡಬೇಕು. ಆಗ ಮಾತ್ರ ಅವರಲ್ಲಿ ಮಾನವೀಯ ಮೌಲ್ಯ ವೃದ್ಧಿಯಾಗುತ್ತದೆ. ಮಕ್ಕಳ ಮುಂದೆ ಧರ್ಮ, ಜಾತಿ, ಭಾಷೆಗಳ ಬಗ್ಗೆ ದ್ವೇಷ ಭಾವನೆ ಹೆಚ್ಚಾಗುವಂತಹ ರೀತಿಯಲ್ಲಿ ಮಾತನಾಡಬಾರದು ಎಂದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಸುನೀತಾ ಸ್ವಾಮಿ, ಉಪಪ್ರಾಚಾರ್ಯ ಕಲ್ಪನಾ, ಮೇಲ್ವಿಚಾರಕರಾದ ರಜನಿ, ಮಧು ಪಾಟೀಲ, ಪ್ರಾಚಾರ್ಯರಾದ ಕಾವೇರಿ, ಸುಧಾ ಇದ್ದರು.