Advertisement

ಅನಧಿಕೃತ ಧಾರ್ಮಿಕ ಕೇಂದ್ರಗಳಿಗೆ ಕಂಟಕ

12:01 PM Mar 05, 2020 | Naveen |

ಬೀದರ: ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ಧಾರ್ಮಿಕ ಕಟ್ಟಡಗಳಿಗೆ ಇದೀಗ ಕಂಟಕ ಶುರುವಾಗಿದೆ. ಸುಪ್ರೀಂ ಕೋರ್ಟ್‌ ಆದೇಶದನ್ವಯ ಬೀದರ ನಗರದಲ್ಲಿ ಬಿಗಿ ಬಂದೋಬಸ್ತ್ನಲ್ಲಿ ಕಟ್ಟಡಗಳ ತೆರವು ಕಾರ್ಯಾಚರಣೆ ಆರಂಭವಾಗಿದ್ದು, ಇದರಿಂದ ಅನಧಿಕೃತವಾಗಿ ನೆಲೆ ಕಂಡ ಧಾರ್ಮಿಕ ಕೇಂದ್ರಗಳು ಸ್ಥಳ ಬಿಟ್ಟು ಕದಲಬೇಕಾದ ಸ್ಥಿತಿ ಎದುರಾಗಿದೆ.

Advertisement

ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ, ಉದ್ಯಾನ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ 18 ಧಾರ್ಮಿಕ ಕಟ್ಟಡಗಳನ್ನು ನಗರಸಭೆ ಪಟ್ಟಿ ಮಾಡಿದೆ. ನ್ಯಾಯಾಲಯದ ಆದೇಶ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನದಂತೆ 2009ರ ನಂತರ ನಿರ್ಮಾಣವಾದ ದೇವಸ್ಥಾನ, ಚರ್ಚ್‌ ಹಾಗೂ ಇತರ ಧಾರ್ಮಿಕ ಕೇಂದ್ರಗಳ ಕಟ್ಟಡಗಳು ತೆರವು ಪಟ್ಟಿಯಲ್ಲಿ ಸೇರಿವೆ. ಮಂಗಳವಾರ ನಗರಸಭೆಯಿಂದ 6 ಧಾರ್ಮಿಕ ಕೇಂದ್ರಗಳನ್ನು ತೆರವು ಮಾಡಲಾಗಿದೆ. ಧಾರ್ಮಿಕ ಕಟ್ಟಡ, ಕಟ್ಟೆಗಳನ್ನು ಅಕ್ರಮವಾಗಿ ನಿರ್ಮಿಸಿರುವ ಕುರಿತು ಕೆಲವು ಬಾರಿ ನಗರಸಭೆಯಿಂದ ಈ ಹಿಂದೆ ಸೂಚನೆ ನೀಡಲಾಗಿತ್ತು. ಆದರೆ, ಅದಕ್ಕೆ ಯಾವುದೇ ರೀತಿಯಲ್ಲಿ ಸ್ಪಂದನೆ ಸಿಗದ ಹಿನ್ನಲೆಯಲ್ಲಿ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ. ನಗರಸಭೆ ಪೌರಾಯುಕ್ತ ಬಿ. ಬಸಪ್ಪ ಮತ್ತು ತಹಶೀಲ್ದಾರ್‌ ಕೀರ್ತಿ ಚಾಲಕ ಅವರ ನೇತೃತ್ವದಲ್ಲಿ ಮಂಗಳವಾರ ಬಿಗಿ ಪೊಲೀಸ್‌ ಬಂದೋಬಸ್ತ್ನಲ್ಲಿ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಕೆಲವು ಕಡೆ ಕಾರ್ಯಾಚರಣೆಗೆ ಸ್ಥಳೀಯ ನಿವಾಸಿಗಳಿಂದ ವಿರೋಧ ವ್ಯಕ್ತವಾಗಿತ್ತಾದರೂ ನಂತರ ಕೋರ್ಟ್‌ ಆದೇಶ ಕುರಿತು ಮನವೊಲಿಕೆ ಬಳಿಕ ತೆರವು ಪ್ರಕ್ರಿಯೆಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ನಗರದ ಯಾವ್ಯಾವ ಕೇಂದ್ರ: ನಗರಸಭೆ ವ್ಯಾಪ್ತಿಯಲ್ಲಿ ನಿರ್ಮಿಸಲಾಗಿರುವ 18 ಧಾರ್ಮಿಕ ಕೇಂದ್ರಗಳಲ್ಲಿ 7 ದೇವಸ್ಥಾನ, 1 ಚರ್ಚ್‌ ಮತ್ತು 10 ಇತರೆ ಕಟ್ಟೆಗಳು ಸೇರಿವೆ. ಇದರಲ್ಲಿ ಎಸ್‌ಬಿಎಚ್‌ ಬ್ಯಾಂಕ್‌ ಕಾಲೋನಿ ಉದ್ಯಾನದ ರಾಮಲಿಂಗೇಶ್ವರ ಮಂದಿರ, ಟಿಡಿಬಿ ಕಾಲೋನಿ ಕ್ರಾಸ್‌ (ಪ್ಲಾಟ್‌ಫಾರ್ಮ್), ಶಹಾಪುರ ಗೇಟ್‌ನ ಅಂಬೇಡ್ಕರ (ಪ್ಲಾಟ್‌ಫಾರ್ಮ್), ಗರೀಬ್‌ ಕಾಲೋನಿ ಕಟ್ಟೆ- ಧ್ವಜ, ಕಾನನ ಕಾಲೋನಿ ಕ್ರಾಸ್‌ (ಧ್ವಜ), ಮೈಲೂರು ಸಿಎಂಸಿ ಕಾಲೋನಿ ಅಂಬೇಡ್ಕರ್‌ ಭಾವಚಿತ್ರ, ಕ್ರಾಸ್‌ ಕಟ್ಟೆ ಮತ್ತು ಅಂಬೇಡ್ಕರ್‌ (ಪ್ಲಾಟ್‌ ಫಾರ್ಮ್), ಮೈಲೂರು ಉದ್ಯಾನ ಹಸಿರು ಧ್ವಜ (ಪ್ಲಾಟ್‌ಫಾರ್ಮ್), ವಡ್ಡರ ಕಾಲೋನಿ ಸಿದ್ರಾಮೇಶ್ವರ ಚೌಕ್‌, ಸಾಯಿ ನಗರದ ಚರ್ಚ್‌, ನೌಬಾದ್‌ನ ತಲಾಟಿ ಲೇಔಟ್‌ನ ಹನುಮಾನ ಮಂದಿರ ಮತ್ತು ಗಣೇಶ ಮಂದಿರ, ಕೆಐಎಡಿಬಿ ಲೇಔಟ್‌ನ ಹನುಮಾನ ಮಂದಿರ, ನೌಬಾದ್‌ ತರಬೇತಿ ಕೇಂದ್ರದ ಬಳಿಯ ಶಿವಶರಣ ಮಾದಾರ ಚನ್ನಯ್ಯ ಭಾವಚಿತ್ರ, ಆಟೋ ನಗರದ ಬಲಭೀಮ ಮಂದಿರ ಮತ್ತು ಹೆಗ್ಗೆ ಲೇಔಟ್‌ ನ ಹನುಮಾನ ಮಂದಿರ ಪಟ್ಟಿಯಲ್ಲಿವೆ.

ಮಂಗಳವಾರ ನೌಬಾದ್‌ ಸಾಯಿ ನಗರದ ಚರ್ಚ್‌, ಸೈಯಾದ್ರಿ ಲೇಔಟ್‌ನ ಗಣೇಶ ಮಂದಿರ, ಆಟೋ ನಗರದ ಜೈ ಶ್ರೀ ಬಲಭೀಮ ಮಂದಿರ, ತಲಾಟಿ ಲೇಔಟ್‌ನ ಗಣೇಶ ಮಂದಿರ, ಕೆಐಎಡಿಬಿ ಲೇಔಟ್‌ ಮತ್ತು ಬಿಎಸ್‌ಎಸ್‌ಕೆ ಲೇಔಟ್‌ನ ಹನುಮಾನ ಮಂದಿರಗಳನ್ನು ತೆರವು ಮಾಡಲಾಗಿದೆ. ಉಳಿದ ಧಾರ್ಮಿಕ ಕೇಂದ್ರಗಳನ್ನು ಪಿಯುಸಿ ಪರೀಕ್ಷೆ ಬಳಿಕ ತೆರವುಗೊಳಿಸಲು ನಗರಸಭೆ ನಿರ್ಧರಿಸಿದೆ. ಕಾರ್ಯಾಚರಣೆ ವೇಳೆ ಸ್ಥಳೀಯ ಸಾರ್ವಜನಿಕರಿಂದ ಪ್ರತಿರೋಧ ವ್ಯಕ್ತವಾಗುವ ಸಾಧ್ಯತೆ ಹೆಚ್ಚಿದೆ.

ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಲಾಗಿರುವ 18 ಧಾರ್ಮಿಕ ಕಟ್ಟಡಗಳ ಪಟ್ಟಿ ಮಾಡಲಾಗಿದ್ದು, ಮಂಗಳವಾರ 6 ಕಟ್ಟಡಗಳನ್ನು ತೆರವು ಮಾಡಲಾಗಿದೆ. ಇನ್ನುಳಿದ ಕೇಂದ್ರಗಳ ಕಾರ್ಯಾಚರಣೆಯನ್ನು ಪಿಯಸಿ ಪರೀಕ್ಷೆ ಬಳಿಕ ಕೈಗೊಳ್ಳಲಾಗುವುದು. ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸಿದ ಬಳಿಕ ದೇವರ ವಿಗ್ರಹ ಮತ್ತು ಸಾಮಗ್ರಿಗಳು ನಗರಸಭೆ ವಶಕ್ಕೆ ಪಡೆದುಕೊಂಡಿದ್ದು, ಸ್ಥಳೀಯ ನಿವಾಸಿಗರು ಕೇಳಿದರೇ ಅವರಿಂದ ಮುಚ್ಚಳಿಕೆ ಬರೆದುಕೊಂಡು
ಅವರ ಸುಪರ್ಧಿಗೆ ನೀಡಲಾಗುವುದು.
ಬಿ. ಬಸಪ್ಪ,
ನಗರಸಭೆ ಪೌರಾಯುಕ್ತ

Advertisement

„ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next