Advertisement

ಬೇಕೆಂಬುದು ಕಾಯ ಗುಣ, ಬೇಡೆಂಬುದು ವೈರಾಗ್ಯ

11:45 AM Mar 12, 2020 | Naveen |

ಬೀದರ: ದೇವರು ನಗೆಮೊಗದ ಅರಸ. ನಾವು ಗಂಟು ಮುಖದವರಾದರೆ ದೇವರಿಗೆ ಪ್ರಿಯರಾಗಲು ಸಾಧ್ಯವಿಲ್ಲ. ದೇವಕೃಪೆಗೆ ಪಾತ್ರರಾಗಬೇಕಾದರೆ ಸಂತೃಪ್ತರಾಗಿ ನಗು ನಗುತ್ತಾ ಜೀವಿಸುವುದನ್ನು ಕಲಿಯಬೇಕು ಎಂದು ಲಿಂಗಾಯತ ಮಹಾಮಠದ ಅಕ್ಕ ಅನ್ನಪೂರ್ಣ ತಾಯಿ ಹೇಳಿದರು.

Advertisement

ನಗರದ ಶರಣ ಉದ್ಯಾನದಲ್ಲಿ ಸೋಮವಾರ ಸಂಜೆ ಜರುಗಿದ 245ನೇ ಶರಣ ಸಂಗಮ ಮತ್ತು ನಗೆಹಬ್ಬ ಕಾರ್ಯಕ್ರಮದಲ್ಲಿ ಅನುಭಾವ ನೀಡಿದ ಅವರು, ಬೇಕೆಂಬುದು ಕಾಯ ಗುಣವಾದರೆ ಬೇಡೆಂಬುದು ವೈರಾಗ್ಯ. ಈ ಉಭಯವನ್ನೂ ಅತಿಗಳೆದವನೇ ಶರಣ. ಬಂದಿದ್ದು ಬರಲಿ ಸದ್ಗುರುವಿನ ದಯೆ ಇರಲೆಂಬುದು ಶರಣ ನಿಲುವು ಎಂದು ನುಡಿದರು.

ನಗು ಆರೋಗ್ಯದ ಕೀಲಿ ಕೈ. ಸದಾ ನಗುತ್ತಿರುವುದರಿಂದ ರೋಗ ನಿರೋಧಕ ಶಕ್ತಿ ಉತ್ಪನ್ನವಾಗುತ್ತದೆ. ದೀರ್ಘಾಯುಷ್ಯ ಪ್ರಾಪ್ತಿವಾಗುತ್ತದೆ. ಎಲ್ಲ ಯೋಗಗಳಲ್ಲಿ ನಗುವ ಯೋಗವು ಬಹು ಮುಖ್ಯವಾದದ್ದೆಂದು ಹಾಸ್ಯ ಚಟಾಕಿಗಳೊಂದಿಗೆ ವಿವರಿಸಿದರು.

ನಗೆಹಬ್ಬ ಉದ್ಘಾಟಿಸಿ ಮಾತನಾಡಿದ ಡಾ| ಜಗನ್ನಾಥ ಹೆಬ್ಟಾಳೆ ಮಾತನಾಡಿ, ವಚನಗಳು ಬೇರೆಯಲ್ಲ ಜನಪದ ಬೇರೆಯಲ್ಲ. ಜನಪದಗಳಲ್ಲಿ ಮಣ್ಣಿನ ವಾಸನೆಯ ಜ್ಞಾನವಿದೆ. ಮುಂಬರುವ ದಿನಗಳಲ್ಲಿ ಬೀದರ ನಗರದಲ್ಲಿ “ಅಂತಾರಾಷ್ಟ್ರಿಯ ಜನಪದ ಉತ್ಸವ’ ಆಯೋಜಿಸಲು ಯೋಜಿಸಲಾಗಿದೆ ಎಂದು ಹೇಳಿದರು.

ಸಮಾಜ ಸೇವಕ ಗುರುನಾಥ ಕೊಳ್ಳುರು ಮತ್ತು ಜಿಪಂನ ಮುಖ್ಯ ಲೆಕ್ಕಾಧಿಕಾರಿ ದೀಪುಕುಮಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಗಂಗಪ್ಪ ಸಾವ್ಲೆ ಅಧ್ಯಕ್ಷತೆ ವಹಿಸಿದ್ದರು.

Advertisement

ವಿದ್ಯಾನಗರ ನೀಲಮ್ಮನ ಬಳಗದ ವಿದ್ಯಾವತಿ ಖಪಲೆ ಷಟ್‌ ಸ್ಥಲ ಧ್ವಜಾರೋಹಣ ಮಾಡಿದರು. ನಿವೃತ್ತ ಅಭಿಯಂತರರು ಸಂಗಶೆಟ್ಟಿ ಮಾನಕಾರಿ ಮತ್ತು ರಾಜಮ್ಮ ಚಿಕ್ಕಪೇಟೆ ಉಪಸ್ಥಿತರಿದ್ದರು.

ನಕ್ಕು ನಲಿದ ಶರಣ ಸಂಕುಲ: ಮೊಬೈಲ್‌ ಮಲ್ಲ ಖ್ಯಾತಿಯ ಧಾರವಾಡದ ಮಲ್ಲಪ್ಪ ಹೊಂಗಲ್‌ ಅವರು ಮೊಬೈಲ್‌ ಬಳಕೆಯ ಅತಿರೇಕಗಳು ಮತ್ತು ಮಕ್ಕಳ ಸ್ವಾತಂತ್ರ್ಯ ಭಾಷಣಗಳ ಪ್ರಸಂಗಗಳನ್ನು ಉಲ್ಲೇಖೀಸುತ್ತಲೆ ಹಾಸ್ಯ ಚಟಾಕಿಗಳನ್ನು ಹಾರಿಸಿದರು. ನೆರೆದಿದ್ದ ಶರಣ ಸಂಕುಲ ನಕ್ಕು ನಕ್ಕು ನಲಿದಾಡಿದರು. ತಾನೇನೂ ಕಮ್ಮಿಯಿಲ್ಲ ಎನ್ನುವಂತೆ ಬೀದರನ ಹಾಸ್ಯ ಕಲಾವಿದ ನವಲಿಂಗ ಪಾಟೀಲರು ನಗುವಿನ ಪ್ರಕಾರ, ಅಳುವಿನ ವಿಧಗಳು, ದೈನಂದಿನ ಬದುಕಿನಲ್ಲನ ಹಾಸ್ಯ ಪ್ರಸಂಗಳನ್ನು ಹೇಳುತ್ತಲೆ ನಗಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಜಾನಪದ ಲೋಕಸಿರಿ ಪ್ರಶಸ್ತಿ ಪುರಸ್ಕೃತ ಡಾ| ಜಗನ್ನಾಥ ಹೆಬ್ಟಾಳೆ, ರಾಜ್ಯ ಲೋಕೋತ್ಸವ ಪ್ರಶಸ್ತಿ ಪುರಸ್ಕೃತ ನವಲಿಂಗ ಪಾಟೀಲ ಮತ್ತು ರಾಜ್ಯ ಬೀಜ ನಿಗಮದ ನಿವೃತ್ತ ಪ್ರಧಾನ ವ್ಯವಸ್ಥಾಪಕ ಶರಣಪ್ಪ ಚಿಮಕೋಡೆ ಅವರನ್ನು ಸನ್ಮಾನಿಸಲಾಯಿತು. ನಿರ್ಮಲಾ ಮಸೂದೆ ಸ್ವಾಗತಿಸಿದರು.

ವಿಜಯಲಕ್ಷ್ಮಿ ಪಾಟೀಲ ನಿರೂಪಿಸಿದರು. ಲಾಡಗೇರಿ ಎಸ್‌ಪಿಎಸ್‌ ಶಿಶು ಮಂದಿರದ ಮಕ್ಕಳ ದೇಶಭಕ್ತಿ ನೃತ್ಯ ಗಮನ ಸೆಳೆಯಿತು. ಕೋಳಾರ ಗ್ರಾಮದ ಶರಣೆಯರ ಕೋಲಾಟ ಸಭಿಕರನ್ನು ರಂಜಿಸಿತು.

Advertisement

Udayavani is now on Telegram. Click here to join our channel and stay updated with the latest news.

Next