Advertisement

ಪ್ರಕೃತಿ ವಿರುದ್ಧ ಚಟುವಟಿಕೆಯಿಂದ ಸಮಸ್ಯೆ

05:42 PM Apr 27, 2019 | Naveen |

ಬೀದರ: ಅಭಿವೃದ್ಧಿ ಕಾರ್ಯಗಳ ಹೆಸರಲ್ಲಿ ಪ್ರಕೃತಿ ಮೇಲೆ ಭಾರೀ ದುಷ್ಟರಿಣಾಮ ಬೀರುತ್ತಿದೆ. ಪ್ರಕೃತಿ ವಿರುದ್ಧ ಮಾನವ ಮಾಡುತ್ತಿರುವ ಚಟುವಟಿಕೆಗಳಿಂದ ಇಂದು ವಿಶ್ವವೇ ಹಲವು ಜ್ವಲಂತ ಸಮಸ್ಯೆ ಎದುರಿಸುವಂತಾಗಿದೆ ಎಂದು ಭಾರತ ವಿಕಾಸ ಸಂಗಮ ಸಂಸ್ಥೆ ಸಂಸ್ಥಾಪಕ ಕೆ.ಎನ್‌. ಗೋವಿಂದಾಚಾರ್ಯ ವಿಷಾದಿಸಿದರು.

Advertisement

ತಾಲೂಕಿನ ಚಟನಳ್ಳಿ ಗ್ರಾಮದ ಸಮೀಪ ಮಹಾದೇವ ನಾಗೂರೆ ತೋಟದಲ್ಲಿ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ವಿಕಾಸ ಅಕಾಡೆಮಿ ಆಶ್ರಯದಲ್ಲಿ ಏರ್ಪಡಿಸಿದ್ದ ಪಂಚಗವ್ಯ ಚಿಕಿತ್ಸಾ ಸೇವಾ ಕೇಂದ್ರ ಹಾಗೂ ಪ್ರಶಿಕ್ಷಣ ಕೇಂದ್ರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಆಕಾಶ, ವಾಯು, ಅಗ್ನಿ, ಜಲ ಮತ್ತು ಪೃಥ್ವಿ ಎಂಬ ಪಂಚಭೂತಗಳಲ್ಲಿ ಅಸಮತೋಲನ ಉಂಟಾಗುತ್ತಿದೆ. ಇದು ಹಲವು ಸಮಸ್ಯೆಗೆ ಕಾರಣವಾಗಿದೆ. ಮಾನವನ ಕೃತ್ಯಗಳು ಮಾನವನ ಅಳಿವಿಗೆ ಕಾರಣ ಕೂಡ ಆಗಬಹುದು. ವಾಯು ಮಾಲಿನ್ಯ, ಜಲ ಮಾಲಿನ್ಯ, ಶಬ್ದ ಮಾಲಿನ್ಯ ಪ್ರತಿನಿತ್ಯ ಹೆಚ್ಚುತ್ತಿದ್ದು, ಬೇಸಾಯದ ಹೆಸರಿನಲ್ಲಿ ಮಣ್ಣಿಗೆ ರಸಗೊಬ್ಬರ ರೂಪದಲ್ಲಿ ವಿಷ ಸೇರಿಸಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪಂಚಭೂತಗಳು ಅವುಗಳ ಮೂಲ ಸ್ವಭಾವದಂತೆ ಇರುವಂತೆ ನೋಡಿಕೊಳ್ಳಲು ಅಭಿವೃದ್ಧಿ ಸೇರಿದಂತೆ ಎಲ್ಲ ಚಟುವಟಿಕೆಗಳು ಪ್ರಕೃತಿಗೆ ಹತ್ತಿರವಾಗಿರುವಂತೆ ಮನುಷ್ಯರು ನೋಡಿಕೊಳ್ಳಬೇಕು. ಪ್ರಕೃತಿ ಉಳಿದರೆ ಮಾತ್ರ ಮಾನವ ಉಳಿಯುತ್ತಾನೆ ಎನ್ನುವುದನ್ನು ತಿಳಿದು ಪರಿಸರ ಕಾಪಾಡುವ ಕೆಲಸಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸಲಹೆ ನೀಡಿದರು.

ಗೋವುಗಳ ಸಂಖ್ಯೆ ಕಡಿಮೆಯಾಗಿರುವುದು ರೈತರನ್ನು ಆರ್ಥಿಕ ಸಂಕಷ್ಟಕ್ಕೆ ದೂಡುತ್ತಿದೆ. 200 ವರ್ಷ ಹಿಂದಿನವರೆಗೆ ಭಾರತ ಇಡೀ ವಿಶ್ವದಲ್ಲಿ ಶ್ರೀಮಂತ ರಾಷ್ಟ್ರವಾಗಿತ್ತು. ಆಗ ದೇಶದ ಜನಸಂಖ್ಯೆ ಮತ್ತು ಗೋವುಗಳ ಸಂಖ್ಯೆಯಲ್ಲಿ ಹೆಚ್ಚಿನ ಅಂತರ ಇರಲಿಲ್ಲ. ಗೋಮಾತೆ ಸಂರಕ್ಷಣೆಯಲ್ಲಿ ನಿರ್ಲಕ್ಷ್ಯ ತೋರಿದ್ದರಿಂದ ಗೋವುಗಳ ಸಂಖ್ಯೆ ಕ್ಷೀಣಿಸಿದೆ. ಗೋವಿನಿಂದ ಮಾನವನಿಗೆ ಅನೇಕ ರೀತಿಯ ಉಪಯೋಗಗಳಿವೆ ಎಂದು ತಿಳಿಸಿದರು.

Advertisement

ಮನುಷ್ಯ ಮತ್ತು ಪ್ರಾಣಿಗಳಲ್ಲಿರುವ ಮುಖ್ಯ ಭೇದ ಸಂಸ್ಕಾರ. ಪ್ರಾಣಿಗಳಿಗೆ ಸಂಸ್ಕಾರ ಇರುವುದಿಲ್ಲ. ಸಂಬಂಧಗಳೂ ತಿಳಿದಿರುವುದಿಲ್ಲ. ಮನುಷ್ಯನ ವಿಷಯ ಬೇರೆ. ತಾಯಿ, ಅಕ್ಕ, ಅತ್ತಿಗೆ ಹೀಗೆ ಮಹಿಳೆಯನ್ನು ಬೇರೆ ಬೇರೆ ರೂಪದಲ್ಲಿ ನೋಡುವ, ಆಯಾ ಸಂಬಂಧಕ್ಕೆ ಅನುಗುಣವಾಗಿ ನಡೆದುಕೊಳ್ಳುವ ಸಂಸ್ಕಾರ ಮನುಷ್ಯನಲ್ಲಿರುತ್ತದೆ. ಇದಕ್ಕೆ ಮುಖ್ಯ ಕಾರಣ ತಾಯಿ ಮನೆಯಲ್ಲಿ ನೀಡುವ ಸಂಸ್ಕಾರ ಎಂದು ಹೇಳಿದರು.

ವಿಕಾಸ ಅಕಾಡೆಮಿ ಮುಖ್ಯಸ್ಥ ಡಾ| ಬಸವರಾಜ ಪಾಟೀಲ್ ಸೇಡಂ ಮಾತನಾಡಿ, ಭೂಮಾತೆ, ಗೋಮಾತೆ ಮತ್ತು ಮನೆಯೊಳಗಿನ ತಾಯಿ ನಡುವೆ ಅವಿನಾಭಾವ ಸಂಬಂಧವಿದೆ. ಈ ಸೃಷ್ಟಿ ಕಾರ್ಯ ನಡೆಯುತ್ತಿರುವುದೇ ಈ ಮೂವರಿಂದ ಎಂದರು. ಆಯುಷ್ಯ ಹೆಚ್ಚಿದೆ. ಆದರೆ, ಜೀವನಪೂರ್ತಿ ದುಡಿದಿದ್ದನ್ನು ಆರೋಗ್ಯ ರಕ್ಷಣೆಗೆ ವೆಚ್ಚ ಮಾಡುವ ಸ್ಥಿತಿ ಇಂದು ನಿರ್ಮಾಣವಾಗಿರುವುದು ಬೇಸರ ತರುತ್ತಿದೆ ಎಂದರು.

ತಡೋಳಾದ ರಾಜೇಶ್ವರ ಶಿವಾಚಾರ್ಯರು ಮಾತನಾಡಿ, ಸುಖೀ ಜೀವನ ಮರು ವ್ಯಾಖ್ಯಾನ ಮಾಡುವ ಸಂದರ್ಭ ಬಂದಿದೆ. ಕಾರು, ಬಂಗಲೆ, ಚಿನ್ನಾಭರಣ, ಹಣ ಇದ್ದವರೇ ಸುಖೀಗಳು ಎನ್ನಲಾಗುತ್ತಿದೆ. ಆದರೆ, ವಾಸ್ತವಿಕವಾಗಿ ಇದಿಷ್ಟೇ ಇದ್ದವರು ಸುಖೀಗಳಲ್ಲ. ಹೊಟ್ಟೆ ತುಂಬ ಊಟ, ಕಣ್ತುಂಬ ನಿದ್ದೆ ಮತ್ತು ಆರೋಗ್ಯಪೂರ್ಣ ಶರೀರ ಹೊಂದಿದವರೇ ನಿಜವಾದ ಅರ್ಥದಲ್ಲಿ ಸುಖೀಗಳು ಎಂದ ಅವರು, ಅಪಾರ ಪ್ರಮಾಣದ ಸಂಪತ್ತು ಹೊಂದಿದವರಲ್ಲಿ ಆರೋಗ್ಯ ಸಂಪತ್ತು ಇರುವುದಿಲ್ಲ. ಪ್ರಕೃತಿಗೆ ವಿರುದ್ಧವಾಗಿ ಬದುಕುತ್ತಿರುವುದರಿಂದಲೇ ಸಮಸ್ಯೆ ಎದುರಾಗಿವೆ ಎಂದರು.

ನಾಂದೇಡ್‌ನ‌ ವಿಷ್ಣು ಭೋಸ್ಲೆ ಪಂಚಗವ್ಯ ಉತ್ಪನ್ನಕುರಿತು ಮಾಹಿತಿ ನೀಡಿದರು. ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ರೇವಣಸಿದ್ದಪ್ಪ ಜಲಾದೆ ಪ್ರಾಸ್ತಾವಿಕ ಮಾತನಾಡಿದರು.

ಕೃಷಿ ವಿಭಾಗದ ಸಂಚಾಲಕ ಮಹಾದೇವ ನಾಗೂರೆ ಸ್ವಾಗತಿಸಿದರು. ಶಾಂತರೆಡ್ಡಿ, ಗ್ರಾಮೀಣ ಸಂಚಾಲಕ ರವಿ ಶಂಭು ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next