Advertisement

ಸೋಂಕು ಹರಡುವ ಭೀತಿ: ಓಲ್ಡ್‌ ಸಿಟಿ ಪೂರ್ಣ ಸ್ತಬ್ಧ

11:53 AM Apr 10, 2020 | Naveen |

ಬೀದರ: ಜಿಲ್ಲೆಯಲ್ಲಿ 10 ಕೊರೊನಾ ಪಾಸಿಟಿವ್‌ ಪ್ರಕರಣಗಳು ವರದಿಯಾಗಿ ಒಂದು ವಾರ ಕಳೆದಿದ್ದು, ಸೋಂಕಿತರು ಇರುವಂಥ ನಗರದ ಓಲ್ಡ್‌ ಸಿಟಿಯಲ್ಲಿ ಸಂಪೂರ್ಣ ನಿರ್ಬಂಧ ಮುಂದುವರಿದಿದೆ. ಜಿಲ್ಲೆಯಲ್ಲಿ ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಿದ್ದು, ಲಾಕ್‌ಡೌನ್‌ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಕೊರೊನಾ ಸೋಂಕಿತರಿಗೆ ವಿಶೇಷ ಘಟಕದಲ್ಲಿ ತಜ್ಞ ವೈದ್ಯರ ಮೂಲಕ ಚಿಕಿತ್ಸೆ ನೀಡಲಾಗುತ್ತಿದ್ದರೆ ಅವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 80ಕ್ಕೂ ಹೆಚ್ಚು ಜನರಿಗೆ ನಗರದ ಓಲ್ಡ್‌ ಸಿಟಿಯ ನೂರು ಹಾಸಿಗೆ ಆಸ್ಪತ್ರೆಯ ಐಸೋಲೇಟ್‌ನಲ್ಲಿ ವ್ಯವಸ್ಥೆ ಮಾಡಲಾಗಿದೆ.

Advertisement

ನಗರದ ಓಲ್ಡ್‌ ಸಿಟಿಯ ಪ್ರದೇಶದ 3 ಕಿ.ಮೀ ವ್ಯಾಪ್ತಿವರೆಗೆ ಕಂಟೈನ್ಮೆಂಟ್‌ ಏರಿಯಾ ಮತ್ತು 5 ಕಿ.ಮೀವರೆಗೆ ಬಫರ್‌ ಝೋನ್‌ ಎಂದು ಈಗಾಗಲೇ ಘೋಷಿಸಲಾಗಿದ್ದು, ಇಲ್ಲಿ ಎಲ್ಲ ಅಂಗಡಿ ಬಂದ್‌ ಮಾಡಿಸಿ, ಒಳಗಿನಿಂದ ಯಾರೂ ಹೊರಗೆ ಮತ್ತು ಹೊರಗಿನಿಂದ ಯಾರೂ ಒಳಗೆ ಬರದಂತೆ ಕ್ರಮ ಕೈಗೊಳ್ಳಲಾಗಿದೆ. ಆಗಾಗ ಅಗ್ನಿ ಶಾಮಕ ದಳದ ವಾಹನ ಮೂಲಕ ಔಷಧ ಸಿಂಪಡಣೆ ಮಾಡಲಾಗುತ್ತಿದೆ. ಇನ್ನೂ ಬಸವಕಲ್ಯಾಣ ಮತ್ತು ಮನ್ನಾಎಖ್ಖೆಳ್ಳಿಯಲ್ಲಿಯೂ ಸಂಪೂರ್ಣ ನಿಶ್ಯಬ್ದವಾಗಿದೆ. ಅವಶ್ಯಕ ವಸ್ತುಗಳಾದ ದವಸ ಧಾನ್ಯಗಳು, ಹಾಲು, ಹಣ್ಣು ಪೂರೈಕೆಗೆ ಜಿಲ್ಲಾಡಳಿತದಿಂದಲೇ ವ್ಯವಸ್ಥೆ ಮಾಡಲಾಗುತ್ತಿದ್ದು, ಇದಕ್ಕಾಗಿ ಸಹಾಯವಾಣಿ ಆರಂಭಿಸಲಾಗಿದೆ.

ಕೊರೊನಾದ ಹಾಟ್‌ಸ್ಪಾಟ್‌ ಎಂದೆನಿಸಿಕೊಂಡಿರುವ ನಗರದ ಓಲ್ಡ್‌ ಸಿಟಿಗೆ ಸಂಪರ್ಕ ಕಲ್ಪಿಸುವ ಎಲ್ಲ ಪ್ರಮುಖ ಮಾರ್ಗಗಳನ್ನು ಬ್ಯಾರಿಕೇಡ್‌ಗಳಿಂದ ಬಂದ್‌ ಮಾಡಿ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಈ ಪ್ರದೇಶದಲ್ಲಿ ಬಹುತೇಕ ಮನೆಗಳು ಬಾಗಿಲನ್ನು ಮುಚ್ಚಿಕೊಂಡು ಒಳಗೆ ಸೇರಿದ್ದಾರೆ. ತುರ್ತು ಕೆಲಸಗಳಿಗೆ ಮಾತ್ರ ಹೊರಗೆ ಬರಲು ಅವಕಾಶ ಮಾಡಿಕೊಡಲಾಗುತ್ತಿದೆ. ಇನ್ನೂ ಇಡೀ ನಗರದಲ್ಲಿಯೂ ಪರಿಸ್ಥಿತಿ ವಿಭಿನ್ನವಾಗಿರಲಿಲ್ಲ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಯಾರೂ ಮನೆಗಳಿಂದ ಹೊರಗೆ ಬರುತ್ತಿಲ್ಲ. ಬೆರಳೆಣಿಕೆಯಷ್ಟು ಮಂದಿ ಮಾತ್ರ ಸುತ್ತಾಡುತ್ತಿದ್ದಾರೆ. ಹಾಗಾಗಿ ಎಲ್ಲ ಪ್ರಮುಖ ರಸ್ತೆ, ವೃತ್ತಗಳು ಬಿಕೋ ಎನ್ನುತ್ತಿದ್ದವು. ಕಿರಾಣಿ, ಔಷಧ ಅಂಗಡಿಗಳು ಎರಡ್ಮೂರು ಗಂಟೆ ಹೊರತುಪಡಿಸಿದರೆ ಮುಚ್ಚಲಾಗುತ್ತಿದೆ. ಬಹುತೇಕ ಬಡಾವಣೆ ನಿವಾಸಿಗಳು ಹಳ್ಳಿಗಳ ಮಾದರಿಯಲ್ಲಿ ಸಂಪರ್ಕ ರಸ್ತೆಗಳಿಗೆ ಬೇಲಿ ಹಾಕಿಕೊಂಡು ನಿರ್ಬಂಧ ಹಾಕಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next