ಬೀದರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ಆಯುಕ್ತ ಅನಿರುದ್ಧ ಶ್ರವಣ್ ಪಿ. ಅವರು ಗುರುವಾರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಜಿಲ್ಲೆಯಲ್ಲಿನ ಮಹಾತ್ಮಗಾಂಧಿ ನರೇಗಾ ಯೋಜನೆ ಕಾಮಗಾರಿಗಳ ಪರಿವೀಕ್ಷಣೆ ನಡೆಸಿದರು.
ನರೇಗಾ ಯೋಜನೆಯಡಿ ಅಂದಾಜು 8 ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿರುವ ಬಹಮನಿ ಅರಸರ ಕಾಲದ, ಅಷ್ಟೂರಿನ ಅಲ್ಲಮಪ್ರಭು ದೇವಾಲಯದ ಹತ್ತಿರದ ಪುರಾತನ ಕಲ್ಯಾಣಿಯ ಹೂಳೆತ್ತುವ ಮತ್ತು ಜೀರ್ಣೋದ್ಧಾರ ಕಾಮಗಾರಿ ವೀಕ್ಷಿಸಿದರು. ಬಳಿಕ ಅಷ್ಟೂರ ಗ್ರಾಮದ ನರೇಗಾದ ನೋಂದಾಯಿತ ಕೂಲಿಕಾರ್ಮಿಕರೊಂದಿಗೆ ಮಾತನಾಡಿದರು. ಕೂಲಿ ಪಾವತಿ, ಹಾಜರಾತಿಯ ಬಗ್ಗೆ ಫಲಾನುಭವಿಗಳೊಂದಿಗೆ ಚರ್ಚಿಸಿದರು.
ಬಳಿಕ ಅದೇ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯಿತಿಯಿಂದ ಅಂದಾಜು 13.26 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಗ್ರಾಮೀಣ ಗೋದಾಮುಗೆ ಭೇಟಿ ನೀಡಿದರು. ಗೋದಾಮು ಸದ್ಬಳಕೆಯಾಗಬೇಕು. ಇದರ ಪ್ರಯೋಜನವು ಗ್ರಾಮದ ರೈತರಿಗೆ ಸಿಗಬೇಕು. ಅಂಗನವಾಡಿ ಮತ್ತು ಇನ್ನಿತರ ಇಲಾಖೆಗಳು ಕೇಳಿದಲ್ಲಿ ಅವರಿಗೂ ಕೂಡ ಆಹಾರ ಧಾನ್ಯಗಳನ್ನು ಇಟ್ಟುಕೊಳ್ಳಲು ಇಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರಿಗೆ ಆಯುಕ್ತರು ತಿಳಿಸಿದರು. ಬಳಿಕ ಗ್ರಾಮ ಪಂಚಾಯಿತಿಗೆ ತೆರಳಿ ರಾಜೀವಗಾಂ ಧಿ ಸೇವಾ ಕೇಂದ್ರದ ಕಟ್ಟಡ ವೀಕ್ಷಿಸಿ, ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನರೇಗಾದಡಿ ವೈಯಕ್ತಿಕ ಫಲಾನುಭವಿಗಳು ನಿರ್ಮಿಸಿಕೊಂಡ ದನದ ಕೊಟ್ಟಿಗೆಯನ್ನು ಕೂಡ ನೋಡಿದರು. ಜೊತೆಗೆ ಪ್ಯಾಕೇಜ್ ರೀತಿಯಲ್ಲಿ ಕಾಂಪೋಸ್ಟ್ ತಯಾರಿಕಾ ಘಟಕ, ಅಜೋಲಾ ಬೆಳೆಗಾಗಿ ಪಿಟ್ ತಯಾರಿಸಲು ಹಾಗೂ ಕೃಷಿ ಹೊಂಡ ಮತ್ತು ಬದುವು ನಿರ್ಮಾಣದಂತಹ ಕಾಮಗಾರಿಗಳನ್ನು ಈ ವರ್ಷದಿಂದ ಜಾರಿಗೊಳಿಸಲು ಆಯುಕ್ತಾಲಯದಿಂದ ನಿರ್ದೇಶಿಸಿ, ಆದೇಶಿಸಲಾಗುವುದು ಎಂದು ಅವರು ಇದೆ ವೇಳೆ ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಬೀದರನ ಜ್ಞಾನೇಂದ್ರಕುಮಾರ ಗಂಗವಾರ, ಕಲಬುರಗಿಯ ಪಿ.ರಾಜಾ, ನರೇಗಾದ ನಿರ್ದೇಶಕರಾದ ಪಿ.ಕಾಂತರಾಜು, ಜಂಟಿ ನಿರ್ದೇಶಕರಾದ ಮಿರ್ಜಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸೂರ್ಯಕಾಂತ ಎಸ್., ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಧಿಕಾರಿ ಧನರಾಜ್ ಬೋರಾಳೆ, ತಾಲೂಕು ಪಂಚಾಯತ (ಗ್ರಾಮೀಣ ಉದ್ಯೋಗ) ಸಹಾಯಕ ನಿರ್ದೇಶಕರಾದ ಶರತಕುಮಾರ ಅಭಿಮಾನ, ಅಷ್ಟೂರ ಗ್ರಾಪಂ ಅಧ್ಯಕ್ಷರಾದ ಮಾದವರಾವ್ ಪಾಟೀಲ, ಗ್ರಾಪಂ ಸದಸ್ಯರಾದ ಸವಿತಾ ಬಿರಾದಾರ ಹಾಗೂ ಇತರರು ಇದ್ದರು.