ಬೀದರ: ಜಿಲ್ಲೆಯ ಯಾವುದೇ ತಾಲೂಕಿನಲ್ಲಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ಎಲ್ಲ ತಹಶೀಲ್ದಾರರು ಮತ್ತು ತಾಲೂಕು ಇಒಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಎಲ್ಲ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಯಾವುದೇ ಕಡೆಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಇದೆ ಎಂದು ಕಂಡು ಬಂದರೆ, ಕೂಡಲೇ ಅಲ್ಲಿ ಬೋರ್‌ವೆಲ್ ಕೊರೆಯಿಸಿ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಬೋರ್‌ವೆಲ್ ಕೊರೆಸಿದರೂ ನೀರು ಸಿಗದಿದ್ದಲ್ಲಿ ಅಂತ ಕಡೆಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸುವ ವ್ಯವಸ್ಥೆ ಮಾಡಬೇಕು ಎಂದು ಸಂಬಂಧಿ ಸಿದ ಅಧಿಕಾರಿಗಳಿಗೆ ಆದೇಶಿಸಿದರು.
ನಿವೃತ್ತಿ ವೇತನ ಮತ್ತು ಪ್ರಧಾನಮಂತ್ರಿ ಜನ್‌ಧನ್ ಯೋಜನೆಯಡಿ ಹಣ ಪಡೆದುಕೊಳ್ಳಲು ಜನರು ಬ್ಯಾಂಕ್‌ಗಳ ಎದುರು ಸಾಲಾಗಿ ನಿಲ್ಲುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿಲ್ಲ. ಹೀಗಾಗಿ ಆಯಾ ಖಾತೆದಾರರ ಮನೆ-ಮನೆಗೆ ಹಣ ತಲುಪಿಸುವ ವ್ಯವಸ್ಥೆ ತುರ್ತಾಗಿ ಮಾಡಬೇಕು ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್‌ಗೆ ತಿಳಿಸಿದರು. ಎಲ್ಲ ತಾಲೂಕಿನಲ್ಲಿ ಎಪಿಎಂಸಿ ಮಾರುಕಟ್ಟೆಗಳನ್ನು ಆರಂಭಿಸಲು ಆದೇಶಿಸಲಾಗಿದ್ದು, ಇನ್ನು ಕೆಲವು ಕಡೆಗಳಲ್ಲಿ ತೆರೆಯದಿರುವುದು ಕಂಡು ಬಂದಿದೆ. ಅಂತಲ್ಲಿ ಕೂಡಲೇ ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಎಲ್ಲ ತಾಲೂಕುಗಳ ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ 723 ನ್ಯಾಯಬೆಲೆ ಅಂಗಡಿಗಳಿದ್ದು, 402 ಪಡಿತರ ಅಂಗಡಿಗಳಿಗೆ ಅಗತ್ಯ ಆಹಾರಧಾನ್ಯ ಶೇಖರಿಸಲಾಗಿದೆ. 321 ಪಡಿತರ ಅಂಗಡಿಗಳಿಗೆ ಎಡ್ಮೂರು ದಿನಗಳಲ್ಲಿ ಆಹಾರ ಧಾನ್ಯ ಸರಬರಾಜು ಮಾಡಲಾಗುವುದು. ಈಗಾಗಲೇ ಶೇಖರಿಸಿದ್ದ ಪಡಿತರವನ್ನು ನಿಯಮಾನುಸಾರ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳು ಜಿಲ್ಲಾ ಧಿಕಾರಿಗಳಿಗೆ ಮಾಹಿತಿ ನೀಡಿದರು.
ಕೇಂದ್ರ ಸ್ಥಾನದಲ್ಲಿದ್ದು ಕೆಲಸ ನಿರ್ವಹಿಸಿ: ಎಲ್ಲ ತಾಲೂಕುಗಳಲ್ಲಿ ನಾಡ ತಹಶೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಪಡಿತರ ವಿತರಣೆ ಬಗ್ಗೆ ನಿಗಾ ವಹಿಸುವಂತೆ ನೋಡಿಕೊಳ್ಳಲು ಎಲ್ಲ ತಹಶೀಲ್ದಾರರಿಗೆ ಜಿಲ್ಲಾ ಧಿಕಾರಿಗಳು ಸೂಚಿಸಿದರು. ಸಿಇಒ ಗ್ಯಾನೇಂದ್ರಕುಮಾರ ಗಂಗವಾರ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.