ಬೀದರ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಞಾನೇಂದ್ರಕುಮಾರ ಗಂಗವಾರ್ ಅವರು ಶುಕ್ರವಾರ ಔರಾದ ತಾಲೂಕಿನ ಮರಖಲ್, ಕೌಠಾ(ಬಿ), ಜೋಜನಾ, ಠಾಣಾಕುಶನೂರ, ಬಂಗಾರಕುಮಟಾ, ದಾಬಕಾ ಗ್ರಾಮ ಪಂಚಾಯತ್ ಕಚೇರಿಗಳು ಸೇರಿದಂತೆ ವಿವಿಧೆಡೆ ಅನಿರೀಕ್ಷಿತ ಭೇಟಿ ನೀಡಿ, ಅಧಿಕಾರಿಗಳ ಕಾರ್ಯವೈಖರಿ ಪರಿಶೀಲಿಸಿದರು.
ಮರಕಲ್ ಗ್ರಾಮ ಪಂಚಾಯಿತಿಗೆ ತೆರಳಿದ ಸಿಇಒ ಅವರು, ಸಿಬ್ಬಂದಿಯ ಹಾಜರಾತಿಯ ಬಗ್ಗೆ ಮಾಹಿತಿ ಪಡೆದರು. ದಾಖಲಾತಿಗಳನ್ನು ಪರಿಶೀಲಿಸಿ, ವಿವಿಧ ಕೆಲಸ ಕಾರ್ಯಗಳಿಗಾಗಿ ಕಚೇರಿಗೆ ಬರುವ ಸಾರ್ವಜನಿಕರಿಗೆ ಸೂಕ್ತ ಸ್ಪಂದನೆ ನೀಡಬೇಕು. ಯಾವುದೇ ಕೆಲಸಗಳು ಬಾಕಿ ಇರದಂತೆ ನೋಡಿಕೊಳ್ಳಬೇಕು ಎಂದು ಪಿಡಿಒಗೆ ನಿರ್ದೇಶನ ನೀಡಿದರು.
ಜೋಜನಾ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಗ್ರಾಮದಲ್ಲಿ ಅಳವಡಿಸಲಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ವೀಕ್ಷಿಸಿದರು. ಅಂಗನವಾಡಿ ಕೇಂದ್ರಕ್ಕೆ ಕೇಂದ್ರಕ್ಕೆ ಭೇಟಿ ನೀಡಿ, ಮಕ್ಕಳ ಹಾಜರಾತಿ, ಪೌಷ್ಟಿಕ ಆಹಾರ ನಿರ್ವಹಣೆ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯಿಂದ ಮಾಹಿತಿ ಪಡೆದರು.
ಗ್ರಾಮದಲ್ಲಿರುವ ಅಪೌಷ್ಟಿಕ ಮಕ್ಕಳ ಸಂಖ್ಯೆಯ ಬಗ್ಗೆ ಸೂಕ್ತ ಮಾಹಿತಿ ನೀಡದ ಕಾರಣ ಸಿಡಿಮಿಡಿಗೊಂಡ ಸಿಇಒ ಅವರು, ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕುವಂತೆ ತಾಪಂ ಇಒಗೆ ಸೂಚಿಸಿದರು. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ತೆರಳಿ, ಮಕ್ಕಳು ಮತ್ತು ಶಿಕ್ಷಕರ ಹಾಜರಾತಿಯನ್ನು ಪರಿಶೀಲಿಸಿದರು. ಮಕ್ಕಳನ್ನು ಮಾತನಾಡಿಸಿ, ಅವರ ಸಮಸ್ಯೆಗಳನ್ನು ಆಲಿಸಿದರು. ಪಠ್ಯ ಚಟುವಟಿಕೆಗಳು ಸರಿಯಾಗಿ ನಡೆಯಬೇಕು. ಮಧ್ಯಾಹ್ನದ ಬಿಸಿಯೂಟ, ಮಕ್ಕಳಿಗೆ ಹಾಲು ವಿತರಣೆ ಸೂಕ್ತವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಶಾಲೆಯ ಮುಖ್ಯಗುರುಗಳಿಗೆ ಸೂಚನೆ ನೀಡಿದರು.
ಬಿಸಿಯೂಟದ ಕೋಣೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರಿಂದ ಮಕ್ಕಳು ಭಯಪಡುತ್ತಿದ್ದಾರೆ ಎಂದು ಶಿಕ್ಷಕರು ತಿಳಿಸಿದಾಗ, ಸಿಇಒ ಅವರು ಮಾತನಾಡಿ, ಒಂದು ಅಡುಗೆ ಮತ್ತು ಎರಡು ತರಗತಿ ಕೋಣೆಗಳ ನಿರ್ಮಾಣಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ಗ್ರಾಮದ ಕೆರೆ ಕಾಮಗಾರಿಯನ್ನು ವೀಕ್ಷಿಸಿದರು.
ಬಳಿಕ ಕೋರೆಕಲ್ ಗ್ರಾಮದ ಕೆರೆ, ಏಕಂಬಾ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕವನ್ನು ಪರಿಶೀಲಿಸಿದರು. ಔರಾದ ತಾಪಂ ಕಚೇರಿಗೆ ಭೇಟಿ ನೀಡಿ, ವ್ಯವಸ್ಥೆಯನ್ನು ಪರಿಶೀಲಿಸಿದರು. ಇದೇ ವೇಳೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿ, ಬಾಕಿ ಉಳಿದಿರುವ ಎಲ್ಲ ಕೆಲಸಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು. ಈ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.