Advertisement

ಬೀದರ ಡಿಸಿಸಿ ಬ್ಯಾಂಕ್‌ ದೇಶಕ್ಕೆ ಮಾದರಿ: ಸ್ವಾಮಿ

03:38 PM Jan 23, 2022 | Team Udayavani |

 

Advertisement

ಬೀದರ: ಬೀದರ ಡಿಸಿಸಿ ಬ್ಯಾಂಕ್‌ ಗ್ರಾಹಕ ಸೇವೆಗಳನ್ನು ನೀಡುವಲ್ಲಿ ಮತ್ತು ಪ್ಯಾಕ್ಸ್‌ಗಳಿಗೆ ಮಾರ್ಗದರ್ಶನ ನೀಡುವುದರಲ್ಲಿ ದೇಶಕ್ಕೆ ಮಾದರಿಯಾಗಿದೆ ಎಂದು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಚನಬಸಯ್ನಾ ಸ್ವಾಮಿ ನುಡಿದರು.

ನಗರದ ಸಹಾರ್ದ ಸಂಸ್ಥೆಯಲ್ಲಿ ಕಲಬುರ್ಗಿ ಜಿಲ್ಲೆಯ ಪಿಕೆಪಿಎಸ್‌ ಅಧ್ಯಕ್ಷರಿಗೆ ನಬಾರ್ಡ್‌ ವತಿಯಿಂದ ನಡೆದ ರೈತರ ಆದಾಯ ವೃದ್ಧಿ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್‌ಗಳು ಕೂಡಾ ಪಿಕೆಪಿಎಸ್‌ ಮೂಲಕವೇ ರೈತರಿಗೆ ಸಾಲ ನೀಡುತ್ತಿದ್ದು, ಸ್ಥಳೀಯವಾಗಿಯೇ ವ್ಯವಹಾರ ನಡೆಸುತ್ತಾರೆ. ಎಲ್ಲಿ ಜನರಿದ್ದಾರೋ ಅಲ್ಲಿ ಮಾರುಕಟ್ಟೆ ಇದೆ, ಮಾರುಕಟ್ಟೆಯಲ್ಲಿ ಜನರಿಗೆ ಸಾಲ ಪಡೆಯುವ ಮತ್ತು ನೀಡುವ ಅವಕಾಶ ಇದೆ. ಇದನ್ನು ಸಹಕಾರಿಗಳು ಮನಗಂಡು ತಮ್ಮ ವ್ಯವಹಾರ ಹೆಚ್ಚಿಸಿಕೊಳ್ಳಬೇಕು ಎಂದರು.

ಶೇರು ಬಂಡವಾಳ ಎನ್ನುವುದು ಸಹಕಾರ ಸಂಘದ ಅಭಿವೃದ್ಧಿಗೆ ಬಹಳ ಮುಖ್ಯವಾಗಿದೆ. ಸಹಕಾರ ಸಂಘಗಳಲ್ಲಿ ಅದರ ಸದಸ್ಯರೇ ಆಸ್ತಿಗಳಾಗಿದ್ದಾರೆ. ಸದಸ್ಯರಿಂದ ಸದಸ್ಯರಿಗಾಗಿ ನಡೆಸಲ್ಪಡುವ ಸಂಸ್ಥೆಗಳಾಗಿ ಸಹಕಾರ ಸಂಸ್ಥೆಗಳು ಜಗತ್ತಿಗೆ ಸಮಾನತೆಯೊಂದಿಗೆ ಅಭಿವೃದ್ಧಿ ತತ್ವವನ್ನು ಪಾಲಿಸುತ್ತಿವೆ. ಹೆಚ್ಚು ಸದಸ್ಯರನ್ನು ಹೊಂದುವುದು ಅಥವಾ ಸದಸ್ಯರಿಗೆ ಹೆಚ್ಚೆಚ್ಚು ಸಾಲ ನೀಡಿಕೆಯಿಂದಲೂ ಶೇರು ಬಂಡವಾಳ ಹೆಚ್ಚಿಸಿಕೊಳ್ಳಬೇಕು. ಇದು ಯಾವುದೇ ಖರ್ಚಿಲ್ಲದ ಬಂಡವಾಳವಾಗಿದ್ದು, ಸಂಘದಲ್ಲಿ ಇದನ್ನು ವೃದ್ಧಿಸಬೇಕು ಎಂದು ಸಲಹೆ ಮಾಡಿದರು.

ಶೇರು ಬಂಡವಾಳ ಮತ್ತು ಠೇವಣಿಗಳಿಂದ ದೊರಕುವ ಬಂಡವಾಳಕ್ಕೆ ಬಹಳಷ್ಟು ವ್ಯತ್ಯಾಸಗಳಿವೆ. ಠೇವಣಿ ಹೆಚ್ಚು ಮಾಡಬೇಕೆಂದಿದ್ದರೆ ಜನರ ವಿಶ್ವಾಸ ಬಹಳ ಮುಖ್ಯ. ಪ್ರಾಮಾಣಿಕ ವ್ಯವಹಾರ, ಉತ್ತಮ ಸೇವೆ ಮತ್ತು ಸಮಯದಲ್ಲಿ ಠೇವಣಿ ಹಿಂತಿರುಗಿಸುವ ಭರವಸೆ ಇದ್ದಾಗ ಜನರು ವಿಶ್ವಾಸ ಹೊಂದುತ್ತಾರೆ. ವಿಶ್ವಾಸ ವೃದ್ಧಿಯಲ್ಲಿ ಸಮಯ ಪರಿಪಾಲನೆ ಮತ್ತು ಮಾಹಿತಿಯ ಶೇಖರಣೆ ದೊಡ್ಡ ಪಾತ್ರವಹಿಸುತ್ತದೆ. ಈಗಿನ ವಾತಾವರಣ ಸಹಕಾರ ಸಂಸ್ಥೆಗಳ ವ್ಯವಹಾರ ಅಭಿವೃದ್ಧಿಗೆ ಸೂಕ್ತವಾಗಿದ್ದು ಸಹಕಾರಿ ಸಂಘಗಳು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದರು.

Advertisement

ಬ್ಯಾಂಕ್‌ನ ಪ್ರಧಾನ ವ್ಯವಸ್ಥಾಪಕ ವಿಠಲ ರೆಡ್ಡಿ ಮಾತನಾಡಿ, ಸಂಘ ನಡೆಸುವಲ್ಲಿ ಸಿಇಒಗಳ ಜವಾಬ್ದಾರಿ ದೊಡ್ಡದಾಗಿದ್ದು, ಗ್ರಾಹಕರ ಮನವೊಲಿಸುವಲ್ಲಿ ಮಹತ್ತರವಾಗಿದೆ. ಸಿಇಒಗಳ ಅಧಿಕಾರ, ಜವಾಬ್ದಾರಿ ಮತ್ತು ವ್ಯಕ್ತಿತ್ವ ಚೆನ್ನಾಗಿದ್ದಾಗ ಜನರ ವಿಶ್ವಾಸ ಗಳಿಸಲು ಸಾಧ್ಯವಿದೆ. ಪ್ರತಿ ಊರಿನಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆ ಕಲ್ಪಿಸುವಲ್ಲಿ ಸಹಕಾರ ಸಂಘ ಪ್ರಮುಖ ಪಾತ್ರವಹಿಸಿದೆ. ಸಹಕಾರಿ ಸಂಘ ಎಲ್ಲರಿಗೂ ಸಾಲ ನೀಡುತ್ತದೆ. ಸಾಮಾಜಿಕ ನ್ಯಾಯ ಪಾಲನೆಯಾಗುತ್ತದೆ ಎಂದು ಹೇಳಿದರು.

ದಶಕಗಳ ಹಿಂದೆ ಬೆಳೆವಿಮೆ ಯೋಜನೆಯಲ್ಲಿ ಮತ್ತು ಸಹಕಾರಿ ಸಾಲ ವಿತರಣೆಯಲ್ಲಿ ಕಲಬುರ್ಗಿ ಮೊದಲ ಸ್ಥಾನದಲ್ಲಿತ್ತು. ಈಗ ಪಿಎಂಎಫ್‌ಬಿವೈ ಜಾರಿ ಬಳಿಕ ಬೀದರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗ್ಮಾರಪಳ್ಳಿ ಅವರು ಬ್ಯಾಂಕ್‌ನಿಂದಲೇ ಪ್ರೀಮಿಯಂ ತುಂಬಿಸುವ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದ್ದರಿಂದ ಬೆಳೆಹಾನಿ ಪರಿಹಾರವಾಗಿ 1.25 ಲಕ್ಷ ರೈತರಿಗೆ ಒಟ್ಟು 350 ಕೋಟಿಯಷ್ಟನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

ಸಿಇಒ ಮಹಾಜನ ಮಲ್ಲಿಕಾರ್ಜುನ ಅವರು ತರಬೇತಿಗಳು ಕೌಶಲಗಳನ್ನು ಕಲಿಯುವುದಕ್ಕೆ ಮಾತ್ರವಲ್ಲ ವಿಷಯಗಳನ್ನು ತಿಳಿದುಕೊಳ್ಳುವಲ್ಲೂ ಸಹಕಾರಿಯಾಗಿವೆ. ಗ್ರಾಹಕ ಸೇವೆಯ ಅಭಿವೃದ್ಧಿಗಾಗಿ ತರಬೇತಿಗಳು ಬೇಕಾಗಿವೆ ಎಂದು ಹೇಳಿದರು.

ಸಂಸ್ಥೆಯ ನಿರ್ದೇಶಕ ಸುಬ್ರಹ್ಮಣ್ಯ ಪ್ರಭು ಸ್ವಾಗತಿಸಿ ದರು. ಅನಿಲ ಪಿ. ಮತ್ತು ಮಹಾಲಿಂಗ ನಿರೂಪಿಸಿ ಉಪನ್ಯಾಸಕ ಎಸ್‌.ಜಿ ಪಾಟೀಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next