ಬೀದರ: ರಣಭೀಕರ ಕೋವಿಡ್ ಹೋಟೆಲ್ ಉದ್ಯಮವನ್ನೇ ಪಾತಾಳಕ್ಕೆ ತಳ್ಳಿದೆ. ಲಾಕ್‌ಡೌನ್ ಸಡಿಲಗೊಳಿಸಿ ಬಹುತೇಕ ಆರ್ಥಿಕ ಚಟುವಟಿಕೆ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿರುವ ಸರ್ಕಾರ ಹೋಟೆಲ್‌ಗಳ ಮೇಲಿನ ನಿರ್ಬಂಧ ಮಾತ್ರ ಮುಂದುವರಿಸಿದ್ದು, ಇದರಿಂದ ಮಾಲೀಕರು ಮತ್ತು ಕಾರ್ಮಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದಂತಾಗಿದೆ.
ಲಾಕ್‌ಡೌನ್ ತೆರವು ಬಳಿಕ ಸಾರಿಗೆ, ರೈಲು ಸಂಚಾರ, ಸಲೂನ್ ಸೇರಿದಂತೆ ಬಹುತೇಕ ಸೇವೆ ಆರಂಭಿಸಿದೆ. ಆದರೆ, ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಸೇವೆ ಪುನರಾರಂಭಕ್ಕೆ ಬ್ರೇಕ್ ಹಾಕಿದೆ. ಕೇವಲ ಪಾರ್ಸಲ್ ಗೆ ಮಾತ್ರ ಅವಕಾಶ ನೀಡಿದೆ. ಹಾಗಾಗಿ ಹಲವು ಉದ್ಯಮಿಗಳು ಇನ್ನು ಹೋಟೆಲ್‌ಗಳ ಬಾಗಿಲನ್ನೇ ತೆರೆದಿಲ್ಲ. ಈ ಉದ್ಯಮದ ಮೇಲೆ ಜೀವನ ಕಟ್ಟಿಕೊಂಡವರು ಲಾಕ್‌ಡೌನ್‌ನಿಂದ ಈಗಾಗಲೇ ಕೆಲಸ ಕಳೆದುಕೊಂಡು ಪರಿತಪಿಸುತ್ತಿದ್ದಾರೆ. ಈಗಲೂ ನಿಯಮಗಳನ್ನು ಮುಂದುವರಿಸಿದ್ದರಿಂದ ಕೈಯಲ್ಲಿ ಕಾಸಿಲ್ಲದೇ, ತಿನ್ನಲು ಊಟವಿಲ್ಲದೇ ಬಹುತೇಕ ಕಾರ್ಮಿಕರು ಬೀದಿಗೆ ಬೀಳುವಂತಾಗಿದೆ.
ಪಾರ್ಸಲ್‌ಗೆ ಮಾತ್ರ ಅನುಮತಿ: ಬೀದರ ನಗರದಲ್ಲಿ 100 ಸೇರಿದಂತೆ ಜಿಲ್ಲಾದ್ಯಂತ 500ಕ್ಕೂ ಹೆಚ್ಚು ಟಿμನ್ ಮತ್ತು ಊಟದ ಹೋಟೆಲ್‌ಗಳಿವೆ. ಲಾಕ್‌ಡೌನ್ ಸಡಿಲಿಕೆ ನಂತರವೂ ಸಾಕಷ್ಟು ನಿಯಮಗಳೊಂದಿಗೆ ಪಾರ್ಸಲ್ ವ್ಯವಸ್ಥೆಗೆ ಮಾತ್ರ ಅನುಮತಿ ನೀಡಲಾಗಿದೆ. ಊಟವನ್ನು ಪಾರ್ಸಲ್ ಒಯ್ದು ತಿನ್ನುವುದು ಸ್ವಲ್ಪ ಕಷ್ಟ. ಹಾಗಾಗಿ ಒಂದೆರಡು ಹೋಟೆಲ್‌ಗಳು ಬಿಟ್ಟರೆ ಉಳಿದ ಕಡೆಗಳಲ್ಲಿ ಬೆಳಗ್ಗೆಯ ಉಪಹಾರ ಮಾತ್ರ ಸಿಗುತ್ತಿದೆ. ಇದರಿಂದಾಗಿ ಈ ಹಿಂದಿಗಿಂತ ಶೇ. 20 ರಿಂದ 30 ಮಾತ್ರ ವ್ಯಾಪಾರ ಆಗುತ್ತಿದ್ದು, ಆಹಾರ ಸಾಮಗ್ರಿ ಮತ್ತು ಕಾರ್ಮಿಕರ ಕೂಲಿಗೆ ಸಾಕಾಗುತ್ತಿದೆ.
ಆರ್ಥಿಕ ನಷ್ಟದಿಂದಾಗಿ ಅರ್ಧದಷ್ಟು ಕೆಲಸಗಾರರನ್ನು ಅನಿವಾರ್ಯವಾಗಿ ತೆಗೆದು ಹಾಕುವಂತಾಗಿದೆ. ಕೋವಿಡ್ ಸೋಂಕು ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೆ ಹೋಟೆಲ್ ಉದ್ಯಮ ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳೇ ಇಲ್ಲವಾಗಿದೆ. ಕಟ್ಟಡಗಳನ್ನು ಲೀಸ್ ಅಥವಾ ಬಾಡಿಗೆ ಆಧಾರದಲ್ಲಿ ಪಡೆದು ಹೋಟೆಲ್, ರೆಸ್ಟೋರೆಂಟ್ ನಡೆಸುತ್ತಿದ್ದವರಿಗೆ ಬಾಡಿಗೆಯನ್ನೂ ಕಟ್ಟಲಾಗದೇ, ಬ್ಯಾಂಕ್‌ಗಳ ಸಾಲ ಪಾವತಿಸಲು ಆಗದೇ ತಲೆಮರೆಸಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಸಂದಿಗ್ಧತೆಯಿಂದ ಕೆಲವರು ಈ ಉದ್ಯಮವೇ ಸಾಕು ಎಂಬ ತೀರ್ಮಾನಕ್ಕೂ ಬರುತ್ತಿದ್ದಾರೆ.
ಲಾಕ್‌ಡೌನ್‌ನಿಂದ ನೆಲಕಚ್ಚಿರುವ ಹೋಟೆಲ್ ಉದ್ಯಮ ಚೇತರಿಕೆಗೆ ಸರ್ಕಾರ ಚಿಂತನೆ ನಡೆಸಬೇಕಿದೆ. ಸೋಂಕು ಹರಡದಂತೆ ಮುನ್ನೆಚ್ಚರಿಕೆ ಹೆಜ್ಜೆಯನ್ನಿಡುವ ಜತೆಗೆ ಉದ್ಯಮ ಉತ್ತೇಜನಕ್ಕೆ ಆರ್ಥಿಕ ನೆರವು ಒದಗಿಸಿ ಹೋಟೆಲ್ ಮಾಲೀಕರು ಮತ್ತು ಕಾರ್ಮಿಕರ ಹಿತ ಕಾಪಾಡಬೇಕಾದ ಅಗತ್ಯವಿದೆ.
ಸೆಲ್ಫ್ ಸರ್ವಿಸ್‌ಗೆ ಅವಕಾಶ ಕಲ್ಪಿಸಿ
ಈಗಾಗಲೇ ಬಾರ್‌ಗಳಲ್ಲಿ ಮದ್ಯ ಮಾರಾಟಕ್ಕೂ ಅನುಮತಿ ನೀಡಿದಂತೆ ಹೋಟೆಲ್ ಗಳಲ್ಲಿ ಪಾರ್ಸಲ್ ಜತೆಗೆ ಸೆಲ್ಫ್ ಸರ್ವಿಸ್ ಸೇವೆ ಒದಗಿಸುವುದಕ್ಕಾದರೂ ಅವಕಾಶ ಕಲ್ಪಿಸಬೇಕು. ಬಾರ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸವಾಲಿನ ಕೆಲಸ. ಆದರೆ ಹೋಟೆಲ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಕಷ್ಟು ಅವಕಾಶಗಳಿವೆ ಎನ್ನುತ್ತಾರೆ ಕೆಲ ಹೋಟೆಲ್ ಉದ್ಯಮಿಗಳು.
ಶಶಿಕಾಂತ ಬಂಬುಳಗೆ