Advertisement

ನಿವೇಶನಕ್ಕಾಗಿ ಕಿತ್ತಾಟ ಮತ್ತೆ ತಾರಕಕ್ಕೆ

01:34 PM Dec 18, 2019 | Team Udayavani |

„ಶಶಿಕಾಂತ ಬಂಬುಳಗೆ
ಬೀದರ:
ರಾಜಕೀಯ ನಾಯಕರ ಪ್ರತಿಷ್ಠೆ, ಸ್ವಹಿತಾಸಕ್ತಿಯ ಲೆಕ್ಕಾಚಾರದಿಂದಾಗಿ ನಗರದಲ್ಲಿ ನಿರ್ಮಿಸಲು ಉದ್ದೇಶಿತ ಜಿಲ್ಲಾ ಕಚೇರಿಗಳ ಸಂಕೀರ್ಣ (ಜಿಲ್ಲಾಡಳಿತ ಭವನ)ದ ನಿವೇಶನಕ್ಕಾಗಿ ಕಿತ್ತಾಟ ಮತ್ತೆ ತಾರಕಕ್ಕೇರಿದೆ. ಇದರಿಂದ ಭವನಕ್ಕೆ ಮಂಜೂರಾದ ಕೋಟ್ಯಂತರ ರೂ. ಬಳಕೆಯಾಗದೇ ಕೊಳೆಯುತ್ತಿದ್ದು, ಜಿಲ್ಲೆಯ ಜನತೆ ಸೌಲಭ್ಯ ದೊರೆಯದೇ ಹೈರಾಣಾಗುವಂತಾಗಿದೆ.

Advertisement

ಒಂದೇ ಸೂರಿನಡಿ ಜನರಿಗೆ ಎಲ್ಲ ಸರ್ಕಾರಿ ಕಚೇರಿಗಳು ದೊರೆಯಬೇಕೆಂಬ ಉದ್ದೇಶದಿಂದ ನಗರದಲ್ಲಿ ಜಿಲ್ಲಾ ಸಂಕೀರ್ಣ ನಿರ್ಮಾಣಕ್ಕೆ ಏಳೆಂಟು ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಗಿದೆ. ಜಿಲ್ಲಾ ಕಚೇರಿಗಳ ಸಂಕೀರ್ಣಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿ 2 ವರ್ಷ ಕಳೆದರೂ ಇಂದಿಗೂ ಸ್ಥಳ ಗೊಂದಲದಲ್ಲಿಯೇ ಉಳಿದಿದೆ. ಸೋಮವಾರ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಮತ್ತು ಸಂಸದ ಭಗವಂತ ಖೂಬಾ ಅವರು ಇಲ್ಲಿನ ನೌಬಾದ್‌ನ ರೇಷ್ಮೆ ಇಲಾಖೆಗೆ ಭೇಟಿ ನೀಡಿ ನೂತನ ಕಟ್ಟಡಕ್ಕೆ ಈ ಜಾಗವೇ ಸೂಕ್ತ, ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಇದಕ್ಕೆ ಪರ-ವಿರೋಧದ ಮಾತುಗಳು ಕೇಳಿಬಂದಿದ್ದು, ಈಗ ಮತ್ತೂಂದು ವಿವಾದಕ್ಕೆ ಕಾರಣವಾಗಲಿದೆ.

ಈ ಹಿಂದೆ ಉಸ್ತುವಾರಿ ಸಚಿವರಾಗಿದ್ದ ಈಶ್ವರ ಖಂಡ್ರೆ ಸಂಕೀರ್ಣ ಕಟ್ಟಡವನ್ನು ನಗರ ಹೊರವಲಯದ ಮಾಮನಕೇರಿ ಬಳಿ ನಿರ್ಮಿಸಲು ಚಿಂತಿಸಿದ್ದರು. ಆದರೆ, ಇದರಲ್ಲಿ ಖಂಡ್ರೆ ಅವರ ಸ್ವಹಿತಾಸಕ್ತಿ ಇದೆ ಎಂದು ಸಂಸದ ಭಗವಂತ ಖೂಬಾ ಸೇರಿದಂತೆ ಜಿಲ್ಲೆಯ ಕೆಲ ಶಾಸಕರು ವಿರೋ ಧಿಸಿದ್ದರು. ಹಾಗಾಗಿ ಖಂಡ್ರೆ ಅನಿವಾರ್ಯವಾಗಿ ತಮ್ಮ ನಿಲುವು ಬದಲಿಸಬೇಕಾಯಿತು. ಇದಕ್ಕೂ ಮುನ್ನ ಚಿಕಪೇಟ್‌ ನಲ್ಲಿ ಜಾಗವನ್ನು ಸಹ ಕೈಬಿಡಲಾಯಿತು. ಇದಾದ ಬಳಿಕ ಕೆಲ ವರ್ಷಗಳಿಂದ ಜಿಲ್ಲಾ ಧಿಕಾರಿಗಳ ಕಚೇರಿಯ ಸ್ಥಳದಲ್ಲೇ ಜಿಲ್ಲಾ ಸಂಕೀರ್ಣ ನಿರ್ಮಿಸುವುದು ಸೂಕ್ತ ಎಂಬ ತಿರ್ಮಾನಕ್ಕೆ ಬರಲಾಗಿತ್ತು. ಇದಕ್ಕೆ ಜಿಲ್ಲೆಯ ರಾಜಕೀಯ ಮುಖಂಡರು ಸಮ್ಮತಿ ಸೂಚಿಸಿದ್ದರು.
2017ರ ಆ. 13ರಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು 48 ಕೋಟಿ ರೂ. ಅನುದಾನದ ಸಂಕೀರ್ಣಕ್ಕೆ ಶಂಕುಸ್ಥಾಪನೆ ಸಹ ನೆರವೇರಿಸಿದ್ದರು. ಆದರೆ, ಈವರೆಗೆ ಟೆಂಡರ್‌ ಪ್ರಕ್ರಿಯೆಗಳು ಮಾತ್ರ ನಡೆಯಲಿಲ್ಲ. ಈಗ ಮತ್ತೆ ಜಿಲ್ಲಾ ಸಂಕೀರ್ಣ ಜಾಗದ ವಿವಾದ
ಮುನ್ನೆಲೆಗೆ ಬಂದಿದೆ. ಉಸ್ತುವಾರಿ ಸಚಿವರು ರೇಷ್ಮೆ ಇಲಾಖೆ ಪರಿಸರದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಸ್ಥಳ ಬದಲಾಯಿಸಿರುವುದು ಜಿಲ್ಲೆಯ ರಾಜಕೀಯ ಮುಖಂಡರು ಮತ್ತು ಸಂಘ ಸಂಸ್ಥೆಗಳ ಆಕ್ರೋಶ ವ್ಯಕ್ತವಾಗಿದೆ. ಸಚಿವರು ಮತ್ತು ಅಧಿಕಾರಿಗಳು ಜನರ ಅನುಕೂಲಕ್ಕಿಂತ ಬೇರೆಯವರಿಗೆ ಲಾಭ ಮಾಡಿಕೊಡಲು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ನಗರದಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ನೌಬಾದ್‌ನಲ್ಲಿ ಜಿಲ್ಲಾ ಕಚೇರಿಗಳನ್ನು ಸ್ಥಾಪಿಸಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಜತೆಗೆ ವ್ಯಾಪಾರದ ಮೇಲೆಯೂ ಹೊಡೆತ ಬೀಳಲಿದೆ. ಹಾಗಾಗಿ ಸಧ್ಯ ಇರುವ ಜಿಲ್ಲಾ ಧಿಕಾರಿ ಕಚೇರಿ ಜತೆಗೆ ಸುತ್ತಲಿನ ಕಚೇರಿಗಳನ್ನು ಬಳಸಿಕೊಂಡು ನೂತನ ಜಿಲ್ಲಾ ಸಂಕೀರ್ಣ ನಿರ್ಮಿಸಬೇಕೆಂಬ ಒತ್ತಾಯ ಇದೆ. ಮತ್ತೆ ಕೆಲವರು ರೇಷ್ಮೆ ಇಲಾಖೆ ಸೂಕ್ತವಾಗಿದ್ದು, ಎರಡ್ಮೂರು ತಾಲೂಕುಗಳಿಗೆ ಅನೂಕೂಲ ಆಗಲಿದೆ ಎಂದರೆ, ಇನ್ನೂಬ್ಬರು ಯಾವುದೇ ಸ್ಥಳದಲ್ಲಾಗಲಿ ಶೀಘ್ರ ಕಟ್ಟಡ ನಿರ್ಮಾಣವಾಗಲಿ ಎಂದು ಆಗ್ರಹಿಸಿದ್ದಾರೆ.

ಜಾಗದ ವಿವಾದದಿಂದಾಗಿ ಹಲವು ವರ್ಷಗಳಿಂದ ಜಿಲ್ಲಾ ಕಚೇರಿಗಳ ಸಂಕೀರ್ಣ ನಿರ್ಮಾಣಕ್ಕೆ ಹಿನ್ನಡೆಯಾಗಿದ್ದು, ಜಿಲ್ಲೆಯ ಜನಪ್ರತಿನಿಧಿಗಳು, ಸಂಘ ಸಂಸ್ಥೆ ಮತ್ತು ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಸೂಕ್ತ ಸ್ಥಳವನ್ನು ಅಂತಿಮಗೊಳಿಸಿ, ಶೀಘ್ರ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸಬೇಕಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next