Advertisement

ಸಾಮೂಹಿಕ ವಿವಾಹ ಸಿದ್ಧತೆಗೆ ಡಿಸಿ ಸೂಚನೆ

01:23 PM Mar 08, 2020 | Naveen |

ಬೀದರ: ಸಾರ್ವಜನಿಕರು ನಾವೆಲ್ಲರೂ ಒಂದೇ ಎಂದು ಸರಳತೆ ಮತ್ತು ಸಜ್ಜನಿಕೆಯನ್ನು ತೋರುವ ನಿಟ್ಟಿನಿಂದ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಪ್ರಮುಖ ದೇವಾಲಯಗಳಲ್ಲಿ ನಡೆಯುವ ಸಪ್ತಪದಿ ಸಾಮೂಹಿಕ ಸರಳ ವಿವಾಹಕ್ಕೆ ಅಗತ್ಯ ಸಿದ್ಧತೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ| ಎಚ್‌.ಆರ್‌.ಮಹಾದೇವ ಅವರು ಅಧಿಕಾರಿಗಳಿಗೆ ಸೂಚಿಸಿದರು.

Advertisement

ನಗರದಲ್ಲಿ ಸಪ್ತಪದಿ ವಿವಾಹ ಕಾರ್ಯಕ್ರಮದ ತಯಾರಿಗೆ ಸಂಬಂಧಿಸಿದಂತೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯಿಂದ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್‌ ಬಳಿಕ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳೊಂದಿಗೆ ವಿವಾಹ ಕಾರ್ಯಕ್ರಮದ ಸಿದ್ಧತೆ ಕುರಿತು ಚರ್ಚಿಸಿದರು.

ಈ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಸರ್ಕಾರದಿಂದ ಪ್ರಥಮವಾಗಿ 2019-20ನೇ ಸಾಲಿನಿಂದ ಜಾರಿಗೆ ತರಲಾಗುತಿದ್ದು, ಈ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಡೆಸುವ ಉದ್ದೇಶದಿಂದ ಮತ್ತು ಯಾವುದೇ
ಲೋಪಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಈ ಬಗ್ಗೆ ಬೀದರ ಹಾಗೂ ಬಸವಕಲ್ಯಾಣ ಸಹಾಯಕ ಆಯುಕ್ತರು, ತಹಶೀಲ್ದಾರರು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಗಮನ ಹರಿಸಬೇಕು ಎಂದು ತಿಳಿಸಿದರು.

ಮನುಷ್ಯನು ಸಂಘ ಮತ್ತು ಸಹಜ ಜೀವಿ. ಜೀವನದಲ್ಲಿ ಬಾಳ ಸಂಗಾತಿಯು ಅತ್ಯವಶ್ಯ. ಹಿಂದೂ ಧರ್ಮ ಶಾಸ್ತ್ರದ ಪ್ರಕಾರ ಮದುವೆ ಎಂಬುದು ಸಂಸಾರಿಕ ಬದುಕಿಗೆ ಬಹುಮುಖ್ಯ. ಎರಡು ಮನಸ್ಸುಗಳು ಹಾಗೂ ಎರಡು ಕುಟುಂಬಗಳು ಎಲ್ಲರ ಸಮ್ಮುಖದಲ್ಲಿ ಒಲುಮೆಯಿಂದ ಒಡಗೂಡಿ ಒಲವಿನಿಂದ ಒಡನಾಡುವ ಸಡಗರ ಸಮಾರಂಭದ ಸಮಯ ಇದಾಗಿದೆ. ಇಂತಹ ಸಂಸಾರಿಕ ಸಮಾಗಮದ ಸಾರ್ಥಕ ಸಂಭ್ರಮಕ್ಕೆ ರಾಜ್ಯ ಸರ್ಕಾರವು ಸ್ಪಂದಿಸುವ ಸುಮುಹೂರ್ತದ ಸಂದರ್ಭ ಇದಾಗಿದೆ. ಇದುವೇ ದತ್ತಿ ಇಲಾಖೆಯು ನಡೆಸುತ್ತಿರುವ ಸಾಮೂಹಿಕ ಸರಳ ಮದುವೆ ಸಪ್ತಪದಿ ವಿವಾಹ ಕಾರ್ಯಕ್ರಮವಾಗಿದೆ ಎಂದು ಹೇಳಿದರು.

ವಿವಾಹ ನಡೆಯುವ ದಿನಾಂಕ, ವಧು ವರರು ನೋಂದಾಯಿಸುವ ಕಡೆಯ ದಿನಾಂಕ, ನೋಂದಾಯಿಸಿಕೊಂಡಿರುವ ವಧು ವರರ ವಿವರಗಳನ್ನು ದೇವಾಲಯದಲ್ಲಿ ಪ್ರಕಟಿಸುವ ದಿನಾಂಕ, ವಧು ವರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕ, ಅಂತಿಮ ವಧು ವರರ ಪಟ್ಟಿ ಪ್ರಕಟಿಸುವ ದಿನಾಂಕ ಸೇರಿದಂತೆ ಇನ್ನಿತರ ಮಾಹಿತಿಯನ್ನು ಸಾರ್ವಜನಿಕರಿಗೆ ಪ್ರಚೂರಪಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

Advertisement

ಸಾಮೂಹಿಕ ವಿವಾಹಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನು ಸಂಪರ್ಕಿಸಿ, ಸದರಿ ಇಲಾಖೆಯಿಂದ ನೀಡುವ ಸಹಾಯಧನವನ್ನು ಸಹ ಸಾಮೂಹಿಕ ವಿವಾಹ ಸಂದರ್ಭದಲ್ಲಿ ವಿತರಿಸಬೇಕು. ವಿವಾಹಗಳನ್ನು ಸ್ಥಳೀಯ ಹಿಂದೂ ಸಂಪ್ರದಾಯದಂತೆ ನಡೆಸಬೇಕು. ವಿವಾಹದ ಬಗ್ಗೆ ಎಲ್ಲ ದೇವಾಲಯಗಳಲ್ಲಿ ಹೆಚ್ಚಿನ ಪ್ರಚಾರ ಮಾಡಬೇಕು. ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರ ಸೂಚನೆಯನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಇದೇ ವೇಳೆ ಅಧಿ ಕಾರಿಗಳಿಗೆ ಸಲಹೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತ ಅಕ್ಷಯ್‌ ಶ್ರೀಧರ್‌, ಭೂಮಾಪನ ಇಲಾಖೆಯ ಉಪ ನಿರ್ದೇಶಕ ಬಿ.ಎಸ್‌. ವೇಣುಗೋಪಾಲ, ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next