ಬೀದರ: ಗಡಿನಾಡು ಬೀದರನಲ್ಲಿ ರಕ್ಕಸ ಕೋವಿಡ್ ದಿನ ಕಳೆದಂತೆ ತನ್ನ ಕಬಂದಬಾಹು ಚಾಚುತ್ತಿದ್ದು, ಸಾವಿನ ರಣಕೇಕೆ ಹಾಕುತ್ತಿದೆ. ಈ ಆತಂಕದ ನಡುವೆ ನಿಗದಿತ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19ಗೆ ಚಿಕಿತ್ಸೆ ನೀಡಬೇಕೆಂಬ ಸರ್ಕಾರದ ಆದೇಶ ಜನರಲ್ಲಿ ನೆಮ್ಮದಿ ತರಿಸಿದ್ದರೆ, ಖಾಸಗಿ ಕ್ಲಿನಿಕ್‌ಗಳಿಗೆ ಭೀತಿ ಶುರುವಾಗಿದೆ.
ರಾಜ್ಯದಲ್ಲಿ ಕೋವಿಡ್ ಆರ್ಭಟ ಹೆಚ್ಚಳ ಹಿನ್ನಲೆಯಲ್ಲಿ ಸರ್ಕಾರ ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾಯಿತ 483 ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿದ್ದು, ಅದರಲ್ಲಿ ಬೀದರ ನಗರದ 13 ಮತ್ತು ಬಸವಕಲ್ಯಾಣದ 1 ಕ್ಲಿನಿಕ್ ಸೇರಿ ಜಿಲ್ಲೆಯಲ್ಲಿ ಒಟ್ಟು 14 ಆಸ್ಪತ್ರೆಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ ಗುರುತಿಸಲಾಗಿದೆ.
ಕೋವಿಡ್-19 ವಿಪತ್ತಿನ ವೇಳೆ ರೋಗಿಗಳಿಗೆ ಚಿಕಿತ್ಸೆ ನೀಡುವುದು ನಮ್ಮ ಕರ್ತವ್ಯ. ಆದರೆ, ಸೋಂಕಿತರು ಚಿಕಿತ್ಸೆಗೆ ಬಂದರೆ ನಮ್ಮ ಕ್ಲಿನಿಕ್ ಗಳ ಗತಿ ಏನು ಎಂದು ಖಾಸಗಿ ಆಸ್ಪತ್ರೆಗಳ ವಲಯದಲ್ಲಿ ಅಪಸ್ವರ ಕೇಳಿ ಬರುತ್ತಿವೆ. ಬೀದರ ಜಿಲ್ಲೆಯಲ್ಲಿ ಪಾಸಿಟಿವ್ ಸಂಖ್ಯೆ 500ರ ಗಡಿ ದಾಟಿದ್ದರೂ ಗುಣಮುಖರಾದವರ ಸಂಖ್ಯೆ ಶೇ.80ರಷ್ಟು ಇರುವುದು ನೆಮ್ಮದಿಯ ಬೆಳವಣಿಗೆ. ಆದರೆ, ಸೋಂಕಿಗೆ ಬಲಿಯಾದವರ ಸಂಖ್ಯೆ 19ಕ್ಕೆ ಏರಿಕೆಯಾಗಿ ಬೆಂಗಳೂರು ಬಳಿಕ ರಾಜ್ಯದಲ್ಲಿ 2ನೇ ಸ್ಥಾನದಲ್ಲಿರುವುದು ತೀವ್ರ ಆಘಾತವನ್ನುಂಟು ಮಾಡಿದೆ. 300 ಹಾಸಿಗೆಯ ಹಳೆ ಬ್ರಿಮ್ಸ್ ಕಟ್ಟಡವನ್ನು ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತಿಸಲಾಗಿದ್ದು, ಸೋಂಕಿತರು ಹೆಚ್ಚಾದರೆ ಖಾಸಗಿ ಕ್ಲಿನಿಕ್‌ಗಳನ್ನು ಬಳಸಿಕೊಳ್ಳುವ ಸರ್ಕಾರದ ನಿರ್ಧಾರದಿಂದ ಆತಂಕಗೊಂಡಿದ್ದಾರೆ.
ಏಕೆ ಅಪಸ್ವರ?:
ಸರ್ಕಾರ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ನೀಡುವ ವಿಷಯದಲ್ಲಿ ಪೂರ್ವಾಪರ ಯೋಚಿಸದೆ ಕ್ಲಿನಿಕ್‌ಗಳನ್ನು ಆಯ್ಕೆ ಮಾಡಿದೆ. ಮುಖ್ಯವಾಗಿ ಜಿಲ್ಲೆಯಲ್ಲಿ 4 ಕಣ್ಣಿನ ಆಸ್ಪತ್ರೆಗಳನ್ನು ಪಟ್ಟಿಯಲ್ಲಿ ಸೇರಿಸಿದೆ. ಕೆಲವೊಂದು ಸಿಂಗಲ್ ಸ್ಪೆಷಾಲಿಟಿಯ ಸಾಮಾನ್ಯ ಆಸ್ಪತ್ರೆಗಳಿದ್ದು, ಅಲ್ಲಿ ಅಗತ್ಯ ಸಿಬ್ಬಂದಿ, ಚಿಕಿತ್ಸಾ ಸಲಕರಣೆಗಳ ಕೊರತೆ ಇದೆ. ಪೂರ್ವ ವ್ಯವಸ್ಥೆಗಳಿಲ್ಲದಂಥ ಕ್ಲಿನಿಕ್‌ಗಳಲ್ಲಿ ಕೋವಿಡ್ ಮಹಾಮಾರಿಗೆ ಚಿಕಿತ್ಸೆ ನೀಡುವುದು ಕಷ್ಟಕರ ಎಂಬ ಅಪಸ್ವರ ಕೇಳಿಬರುತ್ತಿದೆ.
ಇನ್ನು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಅತಿ ಸೂಕ್ಷ್ಮವಾಗಿರುವುದರಿಮದ ಎಚ್ಚರಿಕೆ ಬಹು ಮುಖ್ಯವಾಗಿದೆ. ಸಿಂಗಲ್ ಕಟ್ಟಡಗಳನ್ನು ಹೊಂದಿರುವ ಖಾಸಗಿ ಕ್ಲಿನಿಕ್‌ಗಳಿಗೆ ಇದು ದೊಡ್ಡ ಸವಾಲಾಗಲಿದೆ. ಮುಖ್ಯವಾಗಿ ಒಬ್ಬನೇ ಕೋವಿಡ್ ಸೋಂಕಿತ ಆಸ್ಪತ್ರೆಗೆ ದಾಖಲಾದರೂ ಬೇರೆ ಯಾವ ರೋಗಿಗಳು ಸಹ ನಮ್ಮ ಆಸ್ಪತ್ರೆಗಳತ್ತ ಮುಖ ಮಾಡುವುದಿಲ್ಲ. ಇಂಥ ಸಂದರ್ಭದಲ್ಲಿ ಕೋವಿಡ್ ರೋಗಿಗಳನ್ನಷ್ಟೇ ಗಮನಿಸಿ ಆಸ್ಪತ್ರೆ ನಡೆಸುವುದಾದರೂ ಹೇಗೆ ಎಂಬುದು ಖಾಸಗಿ ಆಸ್ಪತ್ರೆಗಳವರ ಅಳಲಾಗಿದೆ.
ಶಶಿಕಾಂತ ಬಂಬುಳಗೆ