ಬೀದರ: ಗಡಿ ಜಿಲ್ಲೆ ಬೀದರನ ವಿವಿಧ ತಾಲೂಕುಗಳಲ್ಲಿ ಬುಧವಾರ 25ಕ್ಕೂ ಹೆಚ್ಚು ಮಹಾಮಾರಿ ಕೋವಿಡ್ ಸೋಂಕಿತರ ಪ್ರಕರಣಗಳು ಬೆಳಕಿಗೆ ಬಂದಿರುವುದನ್ನು ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳೇ ದೃಢಪಡಿಸಿದ್ದಾರೆ. ಆದರೆ, ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್‌ನಲ್ಲಿ ಪಾಟಿಸಿವ್ ಸಂಖ್ಯೆ ಶೂನ್ಯ ತೋರಿಸಿರುವುದು ಹಲವು ಅನುಮಾನ ಮತ್ತು ಆತಂಕ ಹೆಚ್ಚುವಂತೆ ಮಾಡಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ ಔರಾದ, ಭಾಲ್ಕಿ ಮತ್ತು ಬಸವಕಲ್ಯಾಣ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕೋವಿಡ್ ಸೋಂಕಿತರು ಪತ್ತೆಯಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಷ್ಟೇ ಅಲ್ಲ ಆಯಾ ಗ್ರಾಮಗಳನ್ನು ಸಿಲ್‌ಡೌನ್ ಸಹ ಮಾಡಲಾಗಿದೆ. ಆದರೆ, ಸಂಜೆ ಹೊತ್ತಿಗೆ ಬಿಡುಗಡೆ ಮಾಡಿರುವ ಬುಲೇಟಿನ್‌ನಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ಇರುವುದು ಉಲ್ಲೇಖವೇ ಆಗಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಸಹ ಸ್ಪಷ್ಟನೆ ನೀಡುತ್ತಿಲ್ಲ. ಕಳೆದೊಂದು ವಾರದಿಂದ ಮಹಾರಾಷ್ಟ್ರದ ನಂಟಿನಿಂದಾಗಿ ಜಿಲ್ಲೆಗೆ ಕಂಟಕವಾಗುತ್ತಿದ್ದು, ಸೋಂಕಿತರ ಸಂಖ್ಯೆಯೂ ಹೆಚ್ಚಾಗಿ ಈಗ ಬೀದರ ರಾಜ್ಯದ ಟಾಪ್ 10 ಜಿಲ್ಲೆಗಳ ಪಟ್ಟಿಗೆ ಸೇರಿರುವುದು ಭೀತಿಯನ್ನುಂಟು ಮಾಡುತ್ತಿದೆ.
ಜಿಲ್ಲೆಯಲ್ಲಿ ಇನ್ನೂ 5339 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರುವುದು ಬಾಕಿ ಇದೆ. ಮಹಾರಾಷ್ಟ್ರದ ಮುಂಬೈ ಮತ್ತು ಪುಣೆ ಸಂಪರ್ಕದಿಂದ ಬೀದರ ಜಿಲ್ಲೆಯ ಹಳ್ಳಿ ಹಳ್ಳಿಗೂ ವೈರಾಣು ಹಬ್ಬಿದ್ದು, ಬಸವಕಲ್ಯಾಣ, ಭಾಲ್ಕಿ ಮತ್ತು ಚಿಟಗುಪ್ಪ ತಾಲೂಕಿನಲ್ಲಿ ಅತಿಯಾಗಿ ಬಾಧಿಸುತ್ತಿರುವುದು ಕ್ಷೇತ್ರದ ಜನರಲ್ಲಿ ಆತಂಕ ಅಧಿಕವಾಗಿದೆ.
ಬೀದರ ಜಿಲ್ಲೆಯಲ್ಲಿ ಇನ್ನೂ ಕೊರೊನಾ ಶಂಕಿತ 5339 ಮಂದಿಯ ಗಂಟಲು ದ್ರವ ಪರೀಕ್ಷಾ ವರದಿ ಬರುವುದು ಬಾಕಿದೆ. ಈವರೆಗೆ 28,120 ಜನರ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 22606 ಮಂದಿಯದ್ದು ನೆಗೆಟಿವ್ ಬಂದಿದೆ. ಕೋವಿಡ್ ಶಂಕಿತ 106 ಜನರು ಬ್ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಬುಧವಾರ 70 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಹೇಲ್ತ್ ಬುಲೇಟಿನ್ ತಿಳಿಸಿದೆ.
23 ಕಂಟೈನ್ಮೆಂಟ್ ಝೋನ್: ಜಿಲ್ಲೆಯಲ್ಲಿ ಈಗ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆಯೂ 23ಕ್ಕೆ ಏರಿಕೆಯಾಗಿದೆ. ಬೀದರನ ಓಲ್ಡ್ ಸಿಟಿ, ಅಂಬೇಡ್ಕರ ಕಾಲೋನಿ, ಎದೇನ್ ಕಾಲೋನಿ, ಮೈಲೂರ, ವಿದ್ಯಾನಗರ, ಕುಂಬಾರವಾಡಾ(ಪಾಟೀಲ ನಗರ), ಗ್ರಾಮಗಳಾದ ಧನ್ನೂರ(ಕೆ) ವಾಡಿ, ಚಿಟಗುಪ್ಪದ ದತ್ತಗೀರ ಮೊಹೊಲ್ಲಾ, ಹುಣಸಗೇರಾ, ಚಳಕಾಪುರ, ಭಾತಂಬ್ರಾ, ಹಲ್ಸಿ(ಎಲ್), ಹಳ್ಳಿಖೇಡ(ಬಿ), ಉಜಳಂಬ, ಲಾಲಧರಿ ತಾಂಡಾ, ಹಣಕುಣಿ, ಕೋಹಿನೂರ, ಬೆಟಗೇರಾ, ಲಾಡವಂತಿ, ಗದ್ಲೇಗಾಂವ(ಕೆ), ಶಿರಗುರ, ಹತ್ಯಾಳ ಮತ್ತು ಹುಮನಾಬಾದನ ಜೋಶಿ ಗಲ್ಲಿಯಲ್ಲಿ ಲಾಕ್‌ಡೌನ್ ಮಾಡಲಾಗಿದೆ.