ಬೀದರ: ಕೋವಿಡ್ ವೈರಸ್ ತಡೆಗಾಗಿ ಜಿಲ್ಲೆಯಲ್ಲಿ ಲಾಕ್‌ಡೌನ್ ಜಾರಿಗೊಳಿಸಿದ ನಂತರ ಬ್ರಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗುವ ಒಳ ರೋಗಿಗಳು ಮತ್ತು ಹೊರ ರೋಗಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ತಗ್ಗಿದೆ. ಬೇಸಿಗೆ ಸಂದರ್ಭದಲ್ಲಿ ಜ್ವರದಂತಹ ವಿವಿಧ ರೋಗಗಳು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಿದರೂ ಮಹಾಮಾರಿ ಸೋಂಕಿನ ಭೀತಿಯಿಂದ ದೂರ ಉಳಿಯುತ್ತಿದ್ದಾರೆ.
ದಿನ ಬೆಳಗಾದರೆ ಸಾಕು ಜಿಲ್ಲಾ ಆಸ್ಪತ್ರೆಗಳಲ್ಲಿ ತಪಾಸಣೆಗಾಗಿ ಹೊರ ರೋಗಿಗಳ ಜನಗುಂಗಳಿಯೇ ಇರುತ್ತಿತ್ತು. ಒಳ ರೋಗಿಗಳ ದಾಖಲಾತಿ ಸಹ ಹೆಚ್ಚಿರುತ್ತಿತ್ತು. ಆದರೆ, ದೇಶದಲ್ಲೆಡೆ ತಲ್ಲಣ ಸೃಷ್ಟಿಸಿರುವ ಕೊರೊನಾ ಜನರಲ್ಲಿ ಇಷ್ಟೊಂದು ಆತಂಕ ತಂದೊಡ್ಡಿದೆ ಎಂದರೆ ರೋಗಗಳು ಉಲ್ಬಣವಾದರೂ ಸಹ ಅಸ್ಪತ್ರೆಗಳತ್ತ ರೋಗಿಗಳು ಮುಖ ಮಾಡುತ್ತಿಲ್ಲ. ಇನ್ನೊಂದೆಡೆ ತುರ್ತು ಸೇವೆಗಳಷ್ಟೇ ಲಭ್ಯ ಎಂದು ಹೇಳಿ ಖಾಸಗಿ ಕ್ಲಿನಿಕ್‌ಗಳು ಸಹ ಗೇಟ್‌ಗೆ ಬೀಗ ಹಾಕಿವೆ. ಹಾಗಾಗಿ ಸಣ್ಣ ಪುಟ್ಟ ರೋಗಕ್ಕೆ ಮೆಡಿಕಲ್‌ಗಳಲ್ಲಿ ಔಷಧಗಳನ್ನೇ ಪಡೆದು ಸುಧಾರಿಸಿಕೊಳ್ಳುತ್ತಿದ್ದರೆ, ಶಸ್ತ್ರ ಚಿಕಿತ್ಸೆ ಮಾಡಿಕೊಳ್ಳುವವರು ಸಹ ಮುಂದೆ ನೋಡಿದರಾಯ್ತು ಎನ್ನುತ್ತಿದ್ದಾರೆ. ಇದಕ್ಕೆ ಅಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಬರುವವರ ದಾಖಲೆಗಳೇ ಸಾಕ್ಷಿಯಾಗಿದೆ.
ಜಿಲ್ಲಾ ಕೇಂದ್ರ ಬ್ರಿಮ್ಸ್ ಆಸ್ಪತ್ರೆಯಲ್ಲಿ ಪ್ರತಿ ನಿತ್ಯ ಸರಾಸರಿ 1300ರಿಂದ 1500 ಹೊರ ರೋಗಿಗಳು ಆಗಮಿಸಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇದೀಗ ಕೋವಿಡ್ ಪರಿಣಾಮವಾಗಿ ಆಸ್ಪತ್ರೆಗೆ ಭೇಟಿ ನೀಡುವ ಹೊರ ರೋಗಿಗಳ ಸಂಖ್ಯೆ 200-300ಕ್ಕೆ ಇಳಿದಿದೆ. ಶೇಕಡವಾರು ಲೆಕ್ಕಾಚಾರದಲ್ಲಿ ಶೇ. 70ರಷ್ಟು ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಕೇವಲ ಹೆರಿಗೆ ಮತ್ತು ಇತರ ಗಂಭೀರ ಕಾಯಿಲೆಗಳಿದ್ದರೇ ಮಾತ್ರ ಚಿಕಿತ್ಸೆಗೆ ಆಗಮಿಸುತ್ತಿದ್ದಾರೆ.
ಬ್ರಿಮ್ಸ್ ತುರ್ತು ಘಟಕದಲ್ಲಿ ನಿತ್ಯ ಅಪಘಾತಗಳಿಂದ ಗಾಯಗೊಂಡು ಚಿಕಿತ್ಸೆಗಾಗಿ ಹತ್ತಾರು ಜನ ದಾಖಲಾಗುತ್ತಿದ್ದರು. ಕೋವಿಡ್ ಆತಂಕದ ಜತೆಗೆ ಲಾಕ್‌ಡೌನ್‌ದಿಂದ ಬೈಕ್ ಸೇರಿದಂತೆ ಕಾರು, ದೊಡ್ಡ ವಾಹನಗಳ ಸಂಚಾರಕ್ಕೂ ಬ್ರೇಕ್ ಹಾಕಿರುವುದರಿಂದ ಅಪಘಾತಗಳ ಸಂಖ್ಯೆ ತೀರಾ ಕಡಿಮೆಯಾಗಿದೆ. ಇದರಿಂದ ಕೆಲವೊಮ್ಮೆ ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದ್ ಮತ್ತು ಸೊಲ್ಲಾಪುರಕ್ಕೆ ತೆರಳುತ್ತಿದ್ದ ಆಂಬುಲೆನ್ಸ್‌ಗಳ ಓಡಾಟವೂ ಇಲ್ಲವಾದಂತಾಗಿದೆ.
ಕೋವಿಡ್ ಸೋಂಕಿತರಿಗೆ ಚಕಿತ್ಸೆಗಾಗಿ ಹಳೆ ಬ್ರಿಮ್ಸ್ ಕಟ್ಟಡವನ್ನೇ ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದ್ದರೆ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಸೋಂಕಿತರ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ. ಜತೆಗೆ ಸೋಂಕು ಹರಡದಂತೆ ನೂತನ ಆಸ್ಪತ್ರೆಯಲ್ಲೂ ಅಗತ್ಯ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ. ಆದರೂ ರೋಗಿಗಳು ಭಯದಿಂದಾಗಿ ಆಸ್ಪತ್ರೆಗಳತ್ತ ಸುಳಿಯುತ್ತಿಲ್ಲ.
ಕೋವಿಡ್ ಸೋಂಕಿನ ಭೀತಿ, ಲಾಕ್‌ಡೌನ್ ಪರಿಣಾಮ ಬ್ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುವವರ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ. ನಿತ್ಯವೂ 1300-1500 ಜನ ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಇದೀಗ ಸಣ್ಣ ಪುಟ್ಟ ರೋಗಗಳಿಗೆ ಚಿಕಿತ್ಸೆ ಪಡೆಯಲು ಜನರೇ ಬರುತ್ತಿಲ್ಲ. ಹೀಗಾಗಿ ರೋಗಿಗಳ ಸಂಖ್ಯೆ 300ಕ್ಕೆ ಇಳಿದಿದೆ. ಶಸ್ತ್ರ ಚಿಕಿತ್ಸೆ ಪಡೆಯುತ್ತಿದ್ದವರ ಸಂಖ್ಯೆ ಸಹ ಕಡಿಮೆಯಾಗಿದೆ.
ಹೆಸರು ಹೇಳಲಿಚ್ಛಿಸದ ಬ್ರಿಮ್ಸ್‌ನ ಹಿರಿಯ ವೈದ್ಯ
ಶಶಿಕಾಂತ ಬಂಬುಳಗೆ