Advertisement

ಮಣ್ಣು ನಂಬಿ ಮಾದರಿ ರೈತನಾದ ಕಾಶಿಲಿಂಗ

11:40 AM Nov 28, 2019 | Naveen |

ಶಶಿಕಾಂತ ಬಂಬುಳಗೆ
ಬೀದರ:
ಕೈ ತುಂಬಾ ಸಂಬಳದ ಕೆಲಸ ಬಿಟ್ಟು ಬಂದು ಕೃಷಿ ಕಾಯಕದಲ್ಲೇ ಖುಷಿ ಕಂಡ ಪದವೀಧರ ಯುವಕನ ಯಶೋಗಾಥೆ ಇದು. ಬೆಳೆಗೆ ವೈಜ್ಞಾನಿಕ ಬೆಲೆ ಸಿಗದೇ ಹಾಕಿದ್ದ ಬಂಡವಾಳವೂ ಕೈ ಸೇರದೇ ಕಂಗೆಟ್ಟಿರುವ ಅನ್ನದಾತರ ನಡುವೆ ಬಿಸಲೂ ರಿನ ಈ ರೈತ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.

Advertisement

ಬೀದರ ಸಮೀಪದ ಚಿಟ್ಟಾ ಗ್ರಾಮದ ಕಾಶಿಲಿಂಗ ಅಗ್ರಹಾರ ಕೃಷಿಯಲ್ಲಿ ಬದುಕನ್ನು ಬಂಗಾರ ಮಾಡಿಕೊಂಡಿರುವ ಯುವ ರೈತ. ಬಿಎಸ್ಸಿ ಕೃಷಿ ಪದವೀಧರ ಆಗಿರುವ ಕಾಶಿಲಿಂಗ ಸ್ವಾವಲಂಬಿ ಜೀವನಕ್ಕಾಗಿ ಒಳ್ಳೆಯ ಉದ್ಯೋಗವನ್ನೇ ತೊರೆದಿದ್ದಾರೆ. ಕೃಷಿ ಬದುಕು ಕಟ್ಟಿಕೊಡಲ್ಲ ಎಂದು ರೈತರು ಉದ್ಯೋಗ ಅರಸಿ ನಗರ ಸೇರುತ್ತಿದ್ದರೆ, ಇವರು ಆ ಕೃಷಿಯಲ್ಲೇ ಸಾಧನೆ ಮಾಡಬೇಕೆಂಬ ಛಲ ಹೊಂದಿ ಯಶಸ್ಸು ಕಾಣುತ್ತಿದ್ದಾರೆ. ನಾಲ್ಕು ವರ್ಷದಿಂದ ನಡೆಯುತ್ತಿರುವ ಇವರ ಕೃಷಿ ಕಾಯಕಕ್ಕೆ ಪದವೀಧರ ಪತ್ನಿ ಬೆನ್ನೆಲುಬಾಗಿದ್ದಾರೆ.

ತಮ್ಮ 10 ಎಕರೆ ಭೂಮಿಯಲ್ಲಿ ಕಬ್ಬು, ತರಕಾರಿ ಹಣ್ಣು ಸೇರಿದಂತೆ ವಿಭಿನ್ನ ಬೆಳೆಗಳನ್ನು ಬೆಳೆದು ವರ್ಷಕ್ಕೆ ಲಕ್ಷಾಂತರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ಕಾಶಿಲಿಂಗ ಅಳವಡಿಸಿಕೊಂಡಿರುವ ಸಮಗ್ರ ಕೃಷಿ ಪದ್ಧತಿಯ ತೋಟ ಇಂದು ರೈತರು, ಕೃಷಿ ವಿದ್ಯಾರ್ಥಿಗಳಿಗೆ ತರಬೇತಿ ಕೇಂದ್ರವಾಗಿ ಪರಿವರ್ತನೆ ಆಗಿದೆ. ಒಟ್ಟು ಭೂಮಿ ಪೈಕಿ 1.5 ಎಕರೆಯಲ್ಲಿ ಕಬ್ಬು, 3 ಎಕರೆ ದಾಳಿಂಬೆ, 2.5 ಎಕರೆ ಶುಂಠಿ, 3 ಎಕರೆಯಲ್ಲಿ ಹಿರೇಕಾಯಿ, ಅರ್ಧ ಎಕರೆಯಲ್ಲಿ ದೊಣ್ಣೆ ಮೆಣಸಿನಕಾಯಿ, ಟೊಮ್ಯಾಟೋ ಬೆಳೆಯುತ್ತಿದ್ದಾರೆ. ಕೃಷಿ ಜತೆಗೆ ಹೈನುಗಾರಿಕೆಯನ್ನು ಉಪ ಕಸುಬು ಮಾಡಿಕೊಂಡಿದ್ದಾರೆ. ವರ್ಷಕ್ಕೆ 18 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ.

ಋತುಗಳ ಆಧಾರದ ಮೇಲೆ ಬೆಳೆ: ಮಣ್ಣಿನ ಸದೃಢತೆ ಹೆಚ್ಚಿಸಿಕೊಂಡು ನೀರಿನ ಸದ್ಬಳಕೆ ಮತ್ತು ಸಾವಯವ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಲಭ್ಯ ಭೂಮಿಯಲ್ಲೇ ಕಾಶಿಲಿಂಗ ಲಾಭದಾಯಕ ಬೆಳೆ ಬೆಳೆದು ಪ್ರಗತಿಪರ ರೈತ ಎನಿಸಿಕೊಂಡಿದ್ದಾರೆ. ಸರ್ಕಾರದ ಹಸಿರು ಮನೆ, ಕೃಷಿ ಹೊಂಡ, ಹನಿ ನೀರಾವರಿ ಯೋಜನೆಯ ಸದ್ಬಳಕೆ ಮಾಡಿಕೊಂಡಿದ್ದಾರೆ.

ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಹಿನ್ನೆಲೆಯಲ್ಲಿ ಋತುಗಳ ಆಧಾರದ ಮೇಲೆ ಬೆಳೆಯನ್ನು ಪಡೆಯುತ್ತಿದ್ದಾರೆ. ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿ ಸತ್ವ ಕಳೆದುಕೊಳ್ಳುತ್ತಿದೆ. ಇದನ್ನು ಮನಗಂಡಿರುವ ರೈತ ಸಾವಯವ ಕೃಷಿ ಪದ್ಧತಿಗೆ ಹೆಚ್ಚು ಒತ್ತು ಕೊಡುತ್ತಿದ್ದಾರೆ. ಭೂಮಿಯ ಫಲವತ್ತತೆ ಹೆಚ್ಚಿಸಿಕೊಳ್ಳಲು ಹಸಿರು ಎಲೆ ಗೊಬ್ಬರ ಮತ್ತು ಸಸಿಗಳಿಗೆ ಸೂಕ್ಷ್ಮಾಣು ಜೀವ
ಕೊಡಲು ಸಾವಯವ ಗೊಬ್ಬರ, ಜೀವಾಮೃತದ ಬಳಕೆ ಮಾಡುತ್ತಾರೆ.

Advertisement

ಹೈನುಗಾರಿಕೆಯಿಂದ ಆದಾಯ ಪಡೆಯುವುದರ ಜತೆಗೆ ಸಾವಯವ ಕೃಷಿಗೆ ಲಾಭ ಮಾಡಿಕೊಳ್ಳುತ್ತಿದ್ದಾರೆ. ಎರಡೂವರೆ ಎಕರೆಯಲ್ಲಿ 150 ಕ್ವಿಂಟಲ್‌ ಶುಂಠಿ ಬೆಳೆದು 15 ಲಕ್ಷ ಆದಾಯ ಪಡೆದರೆ, ಒಂದು ಎಕರೆಯಲ್ಲಿ 80ರಿಂದ 85 ಟನ್‌ ಕಬ್ಬು ಉತ್ಪಾದಿಸುತ್ತಿದ್ದಾರೆ. ರಾಸಾಯನಿಕ ಮುಕ್ತ ಕೃಷಿ ಹಿನ್ನೆಲೆಯಲ್ಲಿ ಇವರು ಬೆಳೆಯುವ ತರಕಾರಿಗೆ ಹೆಚ್ಚು ಬೇಡಿಕೆಯೂ ಇದೆ. ತಡೋಳಾದ ಶ್ರೀ ರಾಜೇಶ್ವರ ಶಿವಾಚಾರ್ಯರು ಮತ್ತು ಕೃಷಿ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದಾರೆ. ಕಾಶಿಲಿಂಗರ ಫಾರ್ಮ್ ಮಿನಿ ವಿಶ್ವವಿದ್ಯಾಲಯ ಆಗಿದ್ದು, ಕುಲಪತಿಗಳು, ಕೃಷಿ ಅಧಿಕಾರಿಗಳು, ವಿಜ್ಞಾನಿಗಳು ಭೇಟಿ ನೀಡಿ ರೈತನ ಬೆನ್ನು ತಟ್ಟಿದ್ದರೆ, ವಿದ್ಯಾರ್ಥಿಗಳು ಅಗತ್ಯ ಮಾಹಿತಿ ಪಡೆಯುತ್ತಿದ್ದಾರೆ. ಕೃಷಿಯ ಪರಿಶ್ರಮಕ್ಕಾಗಿ ಕಾಶಿಲಿಂಗ ಅವರಿಗೆ ರಾಜ್ಯ ಸರ್ಕಾರದ ಕೃಷಿ ಪಂಡಿತ ಮತ್ತು ಸಾವಯವ ರೈತ ಪ್ರಶಸ್ತಿ ಸೇರಿದಂತೆ ಸಂಘ ಸಂಸ್ಥೆಗಳ ಸಮ್ಮಾನಕ್ಕೆ ಪಾತ್ರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next