ಬೀದರ್: ದಲಿತರ ಬಗ್ಗೆ ಪ್ರಸ್ತಾಪಿಸಿ ಕೊಲೆ ಮತ್ತು ಭ್ರಷ್ಟಾಚಾರದ ಕುರಿತು ಸುಳ್ಳು ಆರೋಪ ಹೊರಿಸಿ ನನ್ನ ತೇಜೋವಧೆ ಮಾಡುತ್ತಿರುವ ಸಂಸದ ಭಗವಂತ ಖೂಬಾ ವಿರುದ್ಧ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸುತ್ತೇನೆ ಮತ್ತು ಮಾನನಷ್ಟ ಮೊಕದ್ದಮೆಯನ್ನೂ ಹೂಡುತ್ತೇನೆ ಎಂದು ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖೂಬಾ ತಮ್ಮದೇ ಪಕ್ಷದ ರಾಜ್ಯ ಸರ್ಕಾರ ಇದ್ದಾಗ, ತಮ್ಮ ಪ್ರಭಾವ ಬೀರಿ ತಮ್ಮ ಸೋದರನಿಗೆ ಬ್ರಿಮ್ಸ್ ಆಸ್ಪತ್ರೆಯ ಸ್ವಚ್ಛತಾ ಸಿಬ್ಬಂದಿಯ ಹೊರಗುತ್ತಿಗೆ ಕೊಡಿಸಿದರು. ಬಡ ಹೊರಗುತ್ತಿಗೆ ದಲಿತ ಕಾರ್ಮಿಕರಿಗೆ ಕನಿಷ್ಠ 16 ಸಾವಿರ ರೂ. ಸಂಬಳ ಕೊಡಬೇಕು. ಆದರೆ, ಕೇವಲ 5-6 ಸಾವಿರ ರೂಪಾಯಿ ಸಂಬಳ ನೀಡಿ ಬಡ ದಲಿತರ ಹೊಟ್ಟೆ ಮೇಲೆ ಹೊಡೆದಿದ್ದಾರೆ ಎಂದರು.
ಕಾರ್ಮಿಕರ ಹಣ ಲೂಟಿ ಹೊಡೆದವರಾರು?: ಕಾರ್ಮಿಕರ ಪಿ.ಎಫ್ ಮತ್ತು ಇ.ಎಸ್.ಐ ಹಣ ಕಟ್ಟಿಲ್ಲ. ಈ ಬಗ್ಗೆ ದಲಿತ ಸಂಘಟನೆಗಳೇ ದೂರು ನೀಡಿವೆ. ಈ ದೂರಿನ ಆಧಾರದ ಮೇಲೆ ಸಹಾಯಕ ಕಾರ್ಮಿಕ ಆಯುಕ್ತರು 2021ರಲ್ಲಿ ನೋಟಿಸ್ ನೀಡಿ, 1948ರ ಕನಿಷ್ಠ ವೇತನ ಕಾಯಿದೆ ಉಲ್ಲಂಘನೆಯಾಗಿದೆ. 7 ದಿನಗಳ ಒಳಗಾಗಿ ಬಾಕಿ ಹಣ 38 ಲಕ್ಷ ರೂ ಕಾರ್ಮಿಕರಿಗೆ ಪಾವತಿಸಲು ಸೂಚಿಸಿದ್ದಾರೆ. ದಲಿತರ ಹಣ ಲೂಟಿ ಹೊಡೆದಿರುವ ಖೂಬಾರನ್ನು ಈ ಬಾರಿ ಎಲ್ಲ ದಲಿತ ಮತದಾರರೂ ತಿರಸ್ಕರಿಸುತ್ತಾರೆ ಎಂದರು.
ನನಗೆ ಹೈಕೋರ್ಟ್ 5 ಲಕ್ಷ ದಂಡ ಹಾಕಿತ್ತು ಎಂದು ಹೇಳಿರುವ ಸಂಸದರಿಗೆ ಕಾನೂನಿನ ಅರಿವಿಲ್ಲ. ದಂಡ ಯಾವುದು ಕಾಸ್ಟ್ ಯಾವುದೂ ಎಂದೂ ಗೊತ್ತಿಲ್ಲ. ನನ್ನ ಮೇಲೆ ಒಂದು ಚುನಾವಣೆ ತಕರಾರು ಅರ್ಜಿ ಇತ್ತು. ನಾನು ಕೋವಿಡ್ ಕಾಲದಲ್ಲಿ ನ್ಯಾಯಾಲಯಕ್ಕೆ ಗೈರು ಹಾಜರಾದೆ ಎಂದು ನನಗೆ 5 ಲಕ್ಷ ಕಾಸ್ಟ್ ಹಾಕಿ ಅದನ್ನು ಸಿಎಂ ಪರಿಹಾರ ನಿಧಿಗೆ ಕೊಡಲು ನ್ಯಾಯಾಲಯ ಹೇಳಿತ್ತು. ವಿಷಯ ಗೊತ್ತಿಲ್ಲದೆ ಜನರಿಗೆ ತಪ್ಪು ಮಾಹಿತಿ ಕೊಡುತ್ತಾರೆ. ಇವರಿಗೆ ಗಣಿ ಇಲಾಖೆ 60 ಲಕ್ಷ ಬಾಕಿ ಕಟ್ಟಿಲ್ಲವೆಂದು ದಂಡ ಹಾಕಿದೆ. ಆ ಬಗ್ಗೆ ಮಾತನಾಡಲಿ. ಇವರಿಗೆ ನಮ್ಮ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ ಪ್ರಶ್ನಿಸಿದರು.
ಹಗರಣ ಬಯಲಿಗೆಳೆದಿದ್ದೇ ನಮ್ಮ ತಂದೆ: ನಮ್ಮ ತಂದೆ ಭೀಮಣ್ಣ ಖಂಡ್ರೆ ಸ್ವಾತಂತ್ರ್ಯ ಹೋರಾಟಗಾರರು, ಶತಾಯುಷಿಯ ಬಗ್ಗೆ ಸುಳ್ಳು ಆರೋಪ ಮಾಡುತ್ತಾರೆ. ಆ ನೈತಿಕತೆ ಅವರಿಗಿಲ್ಲ. ನನ್ನ ತಂದೆ ಸಾರಿಗೆ ಸಚಿವರಾಗಿದ್ದಾಗ ನಕಲಿ ಬಸ್ ಟಿಕೆಟ್ ಹಗರಣವನ್ನು ಅವರೇ ಬಯಲಿಗೆಳೆದು ತಪ್ಪಿತಸ್ಥರಿಗೆ. ತಕ್ಕ ಶಿಕ್ಷೆ ಕೊಡಿಸಿದರು. ಸದನದ ಕಲಾಪದಲ್ಲಿ ಈ ಎಲ್ಲದರ ಬಗ್ಗೆಯೂ ಉಲ್ಲೇಖ ಇದೆ. ಹೋಗಿ ಅದನ್ನು ತೆಗೆಸಿ ನೋಡಲಿ ಎಂದರು.
ರಾಜಕೀಯಕ್ಕೆ ಯುವಕರು ಬರಬೇಕು, ಅತ್ಯಂತ ಕಿರಿಯ ವಯಸ್ಸಿನ ಸಂಸತ್ ಸದಸ್ಯನನ್ನು ಆರಿಸಿ ಕಳಿಸಿದ ಹಿರಿಮೆ ಬೀದರ್ ಕ್ಷೇತ್ರದ್ದಾಗಬೇಕು ಎಂದು ಕ್ಷೇತ್ರದ ಮತದಾರರು ತೀರ್ಮಾನ ಮಾಡಿದ್ದಾರೆ. ಕ್ಷೇತ್ರಕ್ಕೆ ಶೂನ್ಯ ಕೊಡುಗೆ ನೀಡಿರುವ ಖೂಬಾ ಅವರಿಗೆ ವಿಶ್ರಾಂತಿ ಕೊಟ್ಟು ಮನೆಯಲ್ಲಿ ಕೂರಿಸಲಿದ್ದಾರೆ. ಹೀಗಾಗಿ ಸಾಗರ್ ಖಂಡ್ರೆ ಪ್ರಚಂಡ ಬಹುಮತದಿಂದ ಜಯ ಸಾಧಿಸುತ್ತಾರೆ. ಗೆದ್ದ ಬಳಿಕ 24*7 ಕ್ಷೇತ್ರದ ಜನರ ಸೇವೆ ಮಾಡುತ್ತಾರೆ ಎಂದು ಈಶ್ವರ ಖಂಡ್ರೆ ಭರವಸೆ ನೀಡಿದರು.