ದೇವದುರ್ಗ: ಕಲ್ಮಲದಿಂದ ತಿಂಥಿಣಿ ಬ್ರಿಜ್ ವರೆಗೆ ನಿರ್ಮಿಸಿದ ರಾಜ್ಯ ಹೆದ್ದಾರಿ ನಿರ್ವಹಣೆ ಕೊರತೆಯಿಂದ ಎಲ್ಲೆಂದರಲ್ಲಿ ಬಿರುಕು ಬಿಟ್ಟಿದೆ. ಪಟ್ಟಣದಲ್ಲಿ ರಸ್ತೆ ಮಧ್ಯೆ ಹಾಕಿದ ವಿಭಜಕ ಅಲ್ಲಲ್ಲಿ ಮುರಿದಿವೆ. ಕಬ್ಬಿಣ ಬಾಗಿ ತುಕ್ಕು ಹಿಡಿಯುತ್ತಿವೆ.
ಕರಿಗುಡ್ಡ ಗ್ರಾಮದ ಸರಕಾರಿ ಶಾಲೆಯ ಮುಂಭಾಗದ ರಸ್ತೆ ಮಧ್ಯೆ ಗುಂಡಿ ಬಿದ್ದಿದೆ. ಮಸರಕಲ್, ಸುಂಕೇಶ್ವರಹಾಳ, ಗಬ್ಬೂರ, ಜಾಲಹಳ್ಳಿ ಸೇರಿದಂತೆ ಇತರೆ ಗ್ರಾಮದ ಹೆದ್ದಾರಿ ರಸ್ತೆಯಲ್ಲಿ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಗುಂಡಿ ಬಿದ್ದು ಎರಡು ವರ್ಷ ಗತಿಸಿದರೂ ತಾತ್ಕಾಲಿಕವಾಗಿ ಮುಚ್ಚುವ ಕೆಲಸವನ್ನೂ ಮಾಡಲಾಗುತ್ತಿಲ್ಲ.
ಮುರಿದ ವಿಭಜಕ: ಪಟ್ಟಣದ ಬೂದಿ ಬಸವೇಶ್ವರ ಮಠದಿಂದ ಜೆಪಿ ವೃತ್ತವರೆಗೆ ರಸ್ತೆ ಮಧ್ಯೆ ಹಾಕಿದ ವಿಭಜಕ ಎಲ್ಲೆಂದರಲ್ಲಿ ಮುರಿದು ಬಿದ್ದಿವೆ. ಬಸ್ ನಿಲ್ದಾಣ, ಉಡುಪಿ ಹೋಟೆಲ್ ಮುಂಭಾಗ ವಿಭಜಕ ಕಬ್ಬಿಣ ಬಾಗಿದ್ದು, ತುಕ್ಕು ಹಿಡಿಯುತ್ತಿವೆ. ಈ ಕುರಿತು ಸಂಬಂಧಪಟ್ಟವರ ಗಮನಕ್ಕೆ ತರಲಾಗಿದ್ದರೂ ದುರಸ್ತಿ ಇರಲ್ಲಿ ಕಣ್ಣೆತ್ತಿ ನೋಡಿಲ್ಲ. ಹೀಗಾಗಿ ದಿನೇ ದಿನೆ ವಿಭಜಕ ಮುರಿದು ಹೋಗುತ್ತಿದೆ.
ಇನ್ನು ರಾಜ್ಯ ಹೆದ್ದಾರಿ ಕರಿಗುಡ್ಡ, ಬುಂಕಲದೊಡ್ಡಿ, ಕರಡಿಗುಡ್ಡ, ಕ್ಯಾದಿಗೇರದೊಡ್ಡಿ ಸೇರಿದಂತೆ ಇತರೆ ಗ್ರಾಮದ ಹೆದ್ದಾರಿ ರಸ್ತೆ ಪಕ್ಕದಲ್ಲೇ ತಿಪ್ಪೆ ಗುಂಡಿಗಳು ಹಾಕಲಾಗಿದೆ. ಈ ತಿಪ್ಪೆಗಳಿಂದ ಸುಗಮ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಹೆದ್ದಾರಿಯಲ್ಲಿ ತಿಪ್ಪೆಗಳು ಹಾಕದಂತೆ ಅಧಿಕಾರಿಗಳು ಜನರಿಗೆ ಜಾಗೃತಿ ಮೂಡಿಸಲು ವಿಫಲವಾಗಿದ್ದಾರೆ.
ಬಾಗಿದ ಜಾಲಿಮರಗಳು: ಹೆದ್ದಾರಿಗುಂಟ ಜಾಲಿಗಿಡಗಳುಇ ಬಾಗಿ ನಿಂತಿವೆ. ಎರಡ್ಮೂರು ತಿಂಗಳಿಂದ ಜಂಗಲ್ ಕಟ್ಟಿಂಗ್ ಮಾಡಲಾಗಿದೆ. ಅರೆಬರೆ ಕೈಗೊಂಡ ಕೆಲಸದಿಂದ ಜಾಲಿಮರಗಳು ಮತ್ತೆ ರಸ್ತೆಗೆ ಬಾಗಿ ನಿಂತಿವೆ.
*ನಾಗರಾಜ ತೇಲ್ಕರ್