ಬೀದರ: ಒಂದೆಡೆ ಕೋವಿಡ್ ಸಾವಿನ ರಣಕೇಕೆ ಮತ್ತೊಂದೆಡೆ ಸೂರ್ಯಾಘಾತದಿಂದ ತಲ್ಲಣ ಎದುರಿಸುತ್ತಿರುವ ಜಿಲ್ಲೆಯ ಜನರಿಗೆ ಈಗ ನೀರಿನ ಅಭಾವ ಕಾಡುತ್ತಿದೆ. ಮಳೆ ಕೊರತೆಯಿಂದ ಅಂತರ್ಜಲ ಮಟ್ಟ 600 ಅಡಿ ಆಳಕ್ಕೆ ಕುಸಿದಿದ್ದು, ನದಿ- ಕೆರೆಗಳ ಒಡಲು ಬರಿದಾಗಿದೆ. ಹಾಗಾಗಿ ಜಿಲ್ಲೆಯ 63 ಗ್ರಾಮಗಳಿಗೆ ಖಾಸಗಿ ಕೊಳವೆಬಾವಿ, 29 ಗ್ರಾಮಕ್ಕೆ ಟ್ಯಾಂಕ್ ನೀರೇ ಗತಿಯಾಗಿದೆ.
ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ನೀರಿನ ಹಾಹಾಕಾರ ಹೆಚ್ಚಾಗಿದೆ. ಬಿಸಿಲಿನ ಪ್ರಖರತೆ ನೀರಿನ ಸಮಸ್ಯೆ ಜತೆಯಾಗಿ ತಂದೊಡ್ಡಿರುವುದು ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನೂ ಕೋವಿಡ್ ಲಾಕ್‌ಡೌನ್‌ದಿಂದಾಗಿ ಕಳೆದೆರಡು ತಿಂಗಳಿಂದ ನಗರಗಳಿಗೆ ವಲಸೆ ಹೋಗಿದ್ದ ಜಿಲ್ಲೆಯ ಜನ ಸ್ವ ಗ್ರಾಮಗಳಿಗೆ ಆಗಮಿಸಿದ್ದಾರೆ. ನೀರಿನ ಕೊರತೆ ತೀವ್ರತೆ ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.
ಕೋವಿಡ್ ಆತಂಕಕ್ಕೂ ಮುನ್ನವೇ ಜಿಲ್ಲಾಡಳಿತ ಹಾಗೂ ಜಿಪಂ ನೀರಿನ ಸಮಸ್ಯೆಗಳು ಎದುರಾಗಬಲ್ಲ ಗ್ರಾಮಗಳ ಕುರಿತು ಆಯಾ ಗ್ರಾಪಂಗಳಿಂದ ಮಾಹಿತಿ ಪಡೆದಿದ್ದವು. ಜತೆಗೆ ಮಾರ್ಚ್‌ನಲ್ಲಿ ನಿರಂತರ ಸಭೆ ನಡೆಸಿ ಸಮಸ್ಯಾತ್ಮಕ ಗ್ರಾಮಗಳ ಪಟ್ಟಿ ಮಾಡಿ ಅಗತ್ಯ ಕಡೆಗಳಲ್ಲಿ ಟ್ಯಾಂಕರ್ ಮೂಲಕ ಹಾಗೂ ಲಭ್ಯವಿರುವ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಪಟ್ಟಿಯಿಂದ ಹೊರ ಉಳಿದ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಒಂದೆರಡು ಕೊಡ ನೀರಿಗಾಗಿ ಸರತಿ ಸಾಲಿನಲ್ಲಿ ಗಂಟೆಗಳ ಕಾಲ ಕಾಯಬೇಕಾದ ಸ್ಥಿತಿ ಇದೆ. ಪ್ರತಿ ವರ್ಷದಂತೆ ಭಾಲ್ಕಿ ಮತ್ತು ಔರಾದ ತಾಲೂಕಿನಲ್ಲಿ ನೀರಿನ ಸಂಕಷ್ಟ ಹೆಚ್ಚಾಗಿದೆ.
ಜಿಪಂ ಗ್ರಾಮೀಣ ಮತ್ತು ಕುಡಿಯುವ ನೀರಿನ ವಿಭಾಗದ ಮಾಹಿತಿ ಪ್ರಕಾರ 29 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಅದರಲ್ಲಿ ಭಾಲ್ಕಿ ತಾಲೂಕಿನ 18, ಔರಾದ ತಾಲೂಕಿನ 11 ಹಾಗೂ ಬಸವಕಲ್ಯಾಣ ಮತ್ತು ಬೀದರ ತಾಲೂಕಿನ ತಲಾ ಒಂದು ಗ್ರಾಮಕ್ಕೆ ಟ್ಯಾಂಕರ್‌ನಿಂದ ನೀರು ಸರಬರಾಜು ಮಾಡಲಾಗುತ್ತಿದೆ. ಬೀದರ, ಹುಮನಾಬಾದ, ಚಿಟಗುಪ್ಪ ತಾಲೂಕಿನ ಕೆಲ ಗ್ರಾಮಗಳ ಜನ ಖಾಸಗಿ ಕೊಳವೆ ಬಾವಿ ನೀರಿನ್ನೇ ಆಶ್ರಯಿಸಬೇಕಾಗಿದೆ.
ಬೀದರ ಜಿಲ್ಲೆಯಲ್ಲಿ ನೀರಿನ ಸಮಸ್ಯೆಗಳಿರುವ ಗ್ರಾಮಗಳ ಪಟ್ಟಿಯನ್ನು ಮೊದಲೇ ಸಿದ್ಧಪಡಿಸಿ ಖಾಸಗಿ ಕೊಳವೆಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಅಗತ್ಯ ಕಡೆಗಳಲ್ಲಿ ಟ್ಯಾಂಕರ್ ಬಳಸಲಾಗುತ್ತಿದೆ. ತುರ್ತು ಕುಡಿಯುವ ನೀರಿನ ಯೋಜನೆಗೆ ಜಿಪಂನಲ್ಲಿ ಅನುದಾನ ಲಭ್ಯವಿದ್ದು, ಯಾವುದೇ ರೀತಿಯ ಸಮಸ್ಯೆಗಳಿಲ್ಲ.
ಗ್ಯಾನೇಂದ್ರಕುಮಾರ ಗಂಗ್ವಾರ್,
ಜಿಪಂ ಸಿಇಒ, ಬೀದರ.
ಶಶಿಕಾಂತ ಬಂಬುಳಗೆ