ಬೀದರ್: ಜಿಲ್ಲೆಯಲ್ಲಿ ಗುರುವಾರ ಈ ವರ್ಷದ ಮೊದಲ ವರ್ಷಧಾರೆಯಾಗಿದೆ. ಮಧ್ಯಾಹ್ನ ಭಾರಿ ಗಾಳಿ, ಗುಡುಗು ಸಹಿದ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದು, ಇದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿತು.
ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಇದ್ದು ಮಧ್ಯಾಹ್ನ ಭಾರಿ ಮಳೆ ಆಗಿದೆ. ಭಾರಿ ಗಾಳಿ ಬಿಸಿದ ಕಾರಣ ಜಿಲ್ಲೆಯ ಹಲವೆಡೆ ಮರಗಳು ನೆಲಕ್ಕುರುಳಿವೆ. ಬೀದರ ತಾಲೂಕಿನ ಯರನಳ್ಳಿ ಗ್ರಾಮದಲ್ಲಿ ಬೃಹತ್ ಮರವೊಂದು ನೆಲಕ್ಕೆ ಬಿದ್ದಿದ್ದು, ದರ್ಗಾ ಬಳಿ ನಿಲ್ಲಿಸಿದ್ದ ಸ್ವಿಫ್ಟ್ ಕಾರು ಮತ್ತು ಆಟೋ ಸಂಪೂರ್ಣ ನುಜ್ಜು ನುಜ್ಜಾಗಿದೆ. ಈ ವೇಳೆ ಆಟೋದಲ್ಲಿ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಜನವಾಡಾ ಪೋಲಿಸರು ಭೇಟಿ ನೀಡಿದ್ದಾರೆ.
ಇನ್ನೂ ಭಾರಿ ಮಳೆಯಿಂದ ನಗರದ ಪ್ರಮುಖ ರಸ್ತೆಗಳೆಲ್ಲ ಜಲಮಯ ಆಗಿತ್ತು. ತಗ್ಗು ಪ್ರದೇಶಕ್ಕೆ ನೀರು ನುಗ್ಗಿ ಜನ ತೊಂದರೆ ಅನುಭವಿಸಿದರು.