ಶಶಿಕಾಂತ ಬಂಬುಳಗೆ
ಬೀದರ: ಪ್ರವಾಸಿ ನಗರಿಯಲ್ಲಿ ಕಾರ್ಯಾರಂಭ ಮಾಡಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ವಿದೇಶ ಪ್ರಯಾಣಕ್ಕೆ ಬಹುಮುಖ್ಯವಾಗಿರುವ ಪಾಸ್‌ಪೋರ್ಟ್ ಇದೀಗ ಬೀದರನಲ್ಲೇ ತ್ವರಿತವಾಗಿ ಲಭ್ಯತೆ ಹಿನ್ನೆಲೆಯಲ್ಲಿ ಇದಕ್ಕಾಗಿ ಹಿಂದೆ ಗಡಿ ಜಿಲ್ಲೆಯ ಜನರು ಕಲಬುರಗಿ, ಬೆಂಗಳೂರಿಗೆ ಅಲೆದಾಡುವುದು ತಪ್ಪಿದೆ.
ದೇಶದಲ್ಲಿ ಪಾಸ್‌ಪೋರ್ಟ್ ಕೋರಿ ಸಲ್ಲಿಸುತ್ತಿದ್ದವರ ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿತ್ತು. ಹಾಗಾಗಿ ಸಾಮಾನ್ಯ ನಾಗರಿಕನಿಗೆ ಸರಳ ಮತ್ತು ತ್ವರಿತವಾಗಿ ಪಾಸ್‌ಪೋರ್ಟ್ ದೊರೆಯಬೇಕು ಎಂಬ ಉದ್ದೇಶದಿಂದ 2018ರ ಮಾರ್ಚ್‌ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ರಾಷ್ಟ್ರದ ಪ್ರಮುಖ ಜಿಲ್ಲೆಗಳ ಪ್ರಧಾನ ಅಂಚೆ ಕಚೇರಿಗಳಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ಕಾರ್ಯಾರಂಭ ಮಾಡಿದೆ. ಅದರಂತೆ ರಾಜ್ಯದಲ್ಲಿಯೂ ಬೀದರ ಸೇರಿ 6 ಜಿಲ್ಲೆಗಳಲ್ಲಿ ಕೇಂದ್ರಕ್ಕೆ ಚಾಲನೆ ನೀಡಲಾಗಿದೆ. ಬೀದರನ ಕೇಂದ್ರ ಅಂಚೆ ಕಚೇರಿಯಲ್ಲಿ ಆರಂಭಗೊಂಡಿರುವ ಸೇವಾ ಕೇಂದ್ರದಲ್ಲಿ ಪ್ರತಿ ನಿತ್ಯ 35 ರಿಂದ 40 ಅರ್ಜಿಗಳಂತೆ ತಿಂಗಳಿಗೆ 600
ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದೆ.
ಕೇಂದ್ರ ಆರಂಭಗೊಂಡ 21 ತಿಂಗಳಲ್ಲಿ 11,195 ಅರ್ಜಿಗಳ ವಿಲೆವಾರಿ ಆಗಿದೆ. 5 ವರ್ಷದ ಒಳಗಿನ ಮಕ್ಕಳಿಗೆ 900 ರೂ., 5 ರಿಂದ 12 ವರ್ಷ 1,000 ರೂ., 12 ಮೇಲ್ಪಟ್ಟವರಿಗೆ 1500 ರೂ. ಹಾಗೂ ಹಿರಿಯ ನಾಗರಿಕರಿಗೆ 1350 ರೂ. ಶುಲ್ಕ ನಿಗದಿ ಮಾಡಲಾಗಿದೆ. ಪಾಸ್‌ಪೋರ್ಟ್ ನವೀಕರಣಕ್ಕೆ ಮಕ್ಕಳಿಗೆ 5 ಮತ್ತು ಉಳಿದವರಿಗೆ 10 ವರ್ಷ ಇದೆ.
ಜಿಲ್ಲೆಯ ಜನರು ಈ ಹಿಂದೆ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದರೆ ಕಲಬುರಗಿ, ಬೆಂಗಳೂರು ನಗರಕ್ಕೆ ಅಲೆದಾಡಬೇಕಿತ್ತು. ಇದಕ್ಕಾಗಿ ತಿಂಗಳುಗಟ್ಟೆಲೇ ಕಾಯ್ದು ಹಣ ಮತ್ತು ಸಮಯ ವ್ಯರ್ಥವಾಗುತ್ತಿತ್ತು. ಇದನ್ನು ಮನಗಂಡಿದ್ದ ಸ್ಥಳೀಯ ಸಂಸದ ಭಗವಂತ ಖೂಬಾ ಅವರ ಪ್ರಯತ್ನದ ಫಲವಾಗಿ ಜಿಲ್ಲೆಗೆ ನೂತನ ಕೇಂದ್ರ ಮಂಜೂರಾಗಿದೆ. ವಿದೇಶಗಳಲ್ಲಿ ಉದ್ಯೋಗ ಮತ್ತು ಪ್ರವಾಸಕ್ಕಾಗಿ ಪಾಸ್‌ಪೋಟ್ ಗಾಗಿ ಮುಂದಾಗುತ್ತಿದ್ದಾರೆ. ಬೀದರ ಮಾತ್ರವಲ್ಲ ಕಲಬುರಗಿ ಜಿಲ್ಲೆಯ ಕೆಲ ತಾಲೂಕು ಮತ್ತು ತೆಲಂಗಾಣ, ಮಹಾರಾಷ್ಟ್ರದ ಜನರು ಬೀದರ ಕೇಂದ್ರದ ಲಾಭ ಪಡೆಯುತ್ತಿರುವುದು ವಿಶೇಷ.
ಪಾಸ್‌ಪೋರ್ಟ್‌ಗಾಗಿ ಮೊದಲು ಆಲ್‌ಲೈನ್ ನಲ್ಲಿ ನೋಂದಣಿ ಮಾಡಿಕೊಂಡು, ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬೇಕು. ನಂತರ ಸೇವಾ ಕೇಂದ್ರದಲ್ಲಿ ನಿಗದಿತ ದಿನಾಂಕದಂದು ದಾಖಲೆಗಳ ಜತೆಗೆ ಹಾಜರಾಗಬೇಕು. ಕೇಂದ್ರದ ಎ ವಿಭಾಗದಲ್ಲಿ ಅರ್ಜಿದಾರನ ದಾಖಲೆಗಳನ್ನು ಅಪ್ ಲೋಡ್ ಮಾಡಲಾಗುತ್ತದೆ ಮತ್ತು ಬೆರಳಚ್ಚು, ಛಾಯಾಚಿತ್ರ ಪಡೆದುಕೊಳ್ಳಲಾಗುವುದು. ಬಿ ವಿಭಾಗದಲ್ಲಿ ದಾಖಲೆಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಸಿ ವಿಭಾಗವನ್ನು ವಿದೇಶಾಂಗ ಇಲಾಖೆ ನೋಡುಕೊಳ್ಳುತ್ತದೆ. ಪೊಲೀಸ್ ಇಲಾಖೆ ಪರಿಶೀಲನೆ ಬಳಿಕ ಅಭ್ಯರ್ಥಿಗಳಿಗೆ ನೇರವಾಗಿ ಪಾಸ್‌ಪೋರ್ಟ್ ಕೈ ಸೇರಲಿದೆ. ಸರಳ ವಿಧಾನದಿಂದಾಗಿ ಹಿಂದೆ ಅಭ್ಯರ್ಥಿಗಳಿಗೆ ಆಗುತ್ತಿದ್ದ ಕಿರಿಕಿರಿ ತಪ್ಪಿದಂತಾಗಿದೆ.