ಬೀದರ: ಜಿಲ್ಲೆಯ ವಿವಿಧೆಡೆ ಸ್ಥಾಪಿಸಿರುವ ಎಲ್ಲ ಚೆಕ್ ಪೋಸ್ಟ್ ಗಳು ವ್ಯವಸ್ಥಿತವಾಗಿ ಕೆಲಸ ನಿರ್ವಹಿಸಬೇಕು. ಹೊರಗಿನಿಂದ ಜಿಲ್ಲೆಗೆ ಪ್ರವೇಶಿಸುವ ಎಲ್ಲ ವಾಹನಗಳನ್ನು ತಡೆದು ತಪ್ಪದೇ ತಪಾಸಣೆಗೆ ಒಳಪಡಿಸಬೇಕು. ಯಾರಲ್ಲಾದರೂ ರೋಗ ಲಕ್ಷಣಗಳು ಕಾಣಿಸಿದಲ್ಲಿ ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಎಚ್.ಆರ್. ಮಹಾದೇವ ಅವರು ಆರೋಗ್ಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ನಗರದಲ್ಲಿ ನಡೆದ ಕೊರೊನಾ ವೈರಸ್ ಸೋಂಕು ನಿಯಂತ್ರಣ ಕುರಿತ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಹೋಬಳಿ ಕೇಂದ್ರದಲ್ಲಿ ಪೊಲೀಸ್ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಒಳಗೊಂಡು ತಂಡಗಳನ್ನು ಸಿದ್ದಪಡಿಸಿಕೊಂಡು ಶಿಫ್ಟ್ ಆಧಾರಲ್ಲಿ ಕೆಲಸ ಹಂಚಿಕೆ ಮಾಡಿಕೊಂಡು ದಿನದ 24 ಗಂಟೆಯೂ ಪರಿಶೀಲನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಇರುವ 2 ತಂಡಗಳು ಪ್ರತಿ 7 ಗಂಟೆಗೊಂದು ಶಿಫ್ಟ್‌ಗಳಲ್ಲಿ ಎಲ್ಲ ಹೋಬಳಿಗಳಿಗೆ ಭೇಟಿ ನೀಡಿ ಗಮನಿಸುತ್ತಿರಬೇಕು ಎಂದು ಹೇಳಿದರು. ಬ್ರಿಮ್ಸ್ ಆಸ್ಪತ್ರೆಯಲ್ಲಿ ಶುಚಿತ್ವ ಕಾಪಾಡಬೇಕು. ತುರ್ತು ಸಂದರ್ಭದಲ್ಲಿ ಬೇಕಾಗುವ ಔಷಧ ಲಭ್ಯವಿರುವಂತೆ ಕ್ರಮ ವಹಿಸಬೇಕು ಎಂದು ಡಿಎಚ್‌ಒಗೆ ಸೂಚಿಸಿದ ಅವರು, ಔಷಧ ನಿಯಂತ್ರಣ ಇಲಾಖೆಯಿಂದ 1 ಲಕ್ಷ 3 ಲೇಯರ್ ಮಾಸ್ಕ್ ಗಳನ್ನು ತರಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಜಾರಿಗೊಳಿಸಿದ ನಿಷೇಧಾಜ್ಞೆಯನ್ನು ಅಚ್ಚುಕಟ್ಟಾಗಿ ಪಾಲನೆಯಾಗುವಂತೆ ಕ್ರಮ ವಹಿಸುವಂತೆ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಞಾನೇಂದ್ರಕುಮಾರ ಗಂಗವಾರ್, ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ಸಹಾಯಕ ಆಯುಕ್ತ ಅಕ್ಷಯ್ ಶ್ರೀಧರ್, ಡಿಎಚ್‌ಒ ಡಾ| ವಿ.ಜಿ.ರೆಡ್ಡಿ, ಬ್ರಿಮ್ಸ್ ನಿರ್ದೇಶಕ ಡಾ| ಶಿವಕುಮಾರ ಹಾಗೂ ಇತರರು ಉಪಸ್ಥಿತರಿದ್ದರು.