ಹುಮನಾಬಾದ: ಮಾತಿಗಿಂತ ಕೃತಿ ಲೇಸು ಎಂದು ಅನುಭವಿಗಳು ಹೇಳಿದ್ದಾರೆ. ಆ ಪ್ರಕಾರ ಈ ದೇಶದಲ್ಲಿ ಬರೀ ಮಾತು ಹೇಳುವವರು ಬಿಜೆಪಿಗರು, ಕೃತಿಗೆ ಮಹತ್ವ ನೀಡುವವರು ಕಾಂಗ್ರೆಸ್ಸಿಗರು. ಮತದಾರರು ಮೈತ್ರಿ ಅಭ್ಯರ್ಥಿ ಈಶ್ವರ ಖಂಡ್ರೆ ಅವರನ್ನು ಗೆಲ್ಲಿಸಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ರಾಜಶೇಖರ ಪಾಟೀಲ ಹೇಳಿದರು.
ಚುನಾವಣಾ ಬಹಿರಂಗ ಪ್ರಚಾರಕ್ಕೆ ಅಂತಿನಮ ದಿನವಾದ ರವಿವಾರ ನಡೆದ ರೋಡ್ ಶೋ ವೇಳೆ ಮಾತನಾಡಿದ ಅವರು, 7 ದಶಕಗಳಿಂದ ಕಾಂಗ್ರೆಸ್ಸಿಗರಿಂದ ಯಾವುದೇ ಅಭಿವೃದ್ಧಿ ಕಾರ್ಯ ಆಗಿಲ್ಲ ಎನ್ನುವ ಬಿಜೆಪಿ ಮುಖಂಡರು ಒಂದೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಆರೂವರೆ ದಶಕ ಅಧಿಕಾರದಲ್ಲಿದ್ದ ಕಾಂಗ್ರೆಸ್ ಏನೂ ಮಾಡದಿದ್ದರೆ ದೇಶದಾದ್ಯಂತ ಅಭಿವೃದ್ಧಿ ಕಾರ್ಯ ಹೇಗಾದವು? 15 ವರ್ಷ ಕಾಲ ಕಾಂಗ್ರೆಸೇತರ ಪಕ್ಷಗಳೂ ಅಧಿಕಾರದಲ್ಲಿದ್ದವು. ಅದು ಲೆಕ್ಕಕ್ಕಿಲ್ಲವೇ ಎಂದು ಪ್ರಶ್ನಿಸಿದರು.
ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರೈತರ ಸಾಲ ಮನ್ನಾ ಆಗಿದೆ. ನಂತರ ಮೈತ್ರಿ ಸರ್ಕಾರದಲ್ಲೂ ಸಾಲ ಮನ್ನಾ ಮಾಡಲಾಗಿದೆ. ಅನ್ನಭಾಗ್ಯ, ಕ್ಷೀರಭಾಗ್ಯ, ಶೂಭಾಗ್ಯ, ಉಚಿತ ಪುಸ್ತಕ, ಸಮವಸ್ತ್ರ, ಕೃಷಿಹೊಂಡ, ತೋಟಗಾರಿಕೆ ಬೇಸಾಯಕ್ಕೆ ಪ್ರೋತ್ಸಾಹ ಧನ, ಪ.ಜಾ., ಪ.ಪಂ. ಜನಾಂಗಕ್ಕೆ ನಿರೀಕ್ಷೆಗೂ ಮೀರಿದ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಜಿಲ್ಲೆಗೆ ಹಿಂದೆಂದೂ ಸಿಗದ ಮೂರು ಸಚಿವ ಸ್ಥಾನ ಕಲ್ಪಿಸಿದ್ದರ ಕೀರ್ತಿ ಮೈತ್ರಿ ಸರ್ಕಾರಕ್ಕೆ ಸಲ್ಲುತ್ತದೆ. ಕ್ಷೇತ್ರದ ಮಹಾಜನತೆ ನನ್ನನ್ನು ನಾಲ್ಕು ಬಾರಿ, ಈಶ್ವರ ಖಂಡ್ರೆ ಅವರನ್ನು ಮೂರುಬಾರಿ, ರಹೀಂ ಖಾನ್ ಅವರನ್ನುಎರಡು ಬಾರಿ ಶಾಸಕರನ್ನಾಗಿ ಆಯ್ಕೆ ಮಡಿದ್ದು, ಅಭಿವೃದ್ಧಿಗೆ ಹೊರತು ಅವರ ಸೌಂದರ್ಯಕ್ಕಲ್ಲ. ಈ ಸತ್ಯವನ್ನು ಯಾವತ್ತೂ ಟೀಕಿಸುವ ಬಿಜೆಪಿಗರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಲಕ್ಷ್ಮಣರಾವ್ ಬುಳ್ಳಾ, ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವೀರಣ್ಣ ಪಾಟೀಲ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭೀಮರಾವ್ ಪಾಟೀಲ, ಡಾ|ಸಿದ್ದು ಪಾಟೀಲ, ತಾಲೂಕು ಪಂಚಾಯಿತಿ ಸದಸ್ಯ ರಮೇಶ ಎಂ.ಡಾಕುಳಗಿ, ಪಕ್ಷದ ಹಿರಿಯ ಮುಖಂಡ ಬಾಬುರಾವ್ ಪರಮಶೆಟ್ಟಿ, ಡಿ.ಆರ್.ಚಿದ್ರಿ, ಅಭಿಷೇಕ ಪಾಟೀಲ ತೆರೆದ ವಾಹನದಲ್ಲಿ ನಡೆದ ಮೆರವಣಿಗೆಯಲ್ಲಿ ಇದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಸರಮಿಯ್ಯ, ಗ್ರಾಮೀಣ ಘಟಕ ಅಧ್ಯಕ್ಷ ರಾಜಪ್ಪ ಇಟಗಿ, ಸುನೀಲ ಪಾಟೀಲ, ಶಿವರಾಜ ಗಂಗಶೆಟ್ಟಿ, ಈಶ್ವರ ಕಲಬುರ್ಗಿ, ಅಶೋಕ ಚಳಕಾಪೂರೆ, ವಿಜಯಕುಮಾರ ನಾತೆ, ಮಾಣಿಕ ಪವಾರ, ಈರಪ್ಪ ಧುಮ್ಮನಸೂರ, ಸುರೇಶ ಘಾಂಗ್ರೆ, ಪ್ರಭು ತಾಳ್ಮಡಗಿ, ದೇವೀಂದ್ರಪ್ಪ ಪೋಲಾ, ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಓಂಕಾರ ತುಂಬಾ ಹಾಗೂ ಸಾವಿರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.