Advertisement

ಲೋಕ ಮತ; ಸೋಲು-ಗೆಲುವಿನ ಲೆಕ್ಕಾಚಾರ

12:40 PM Apr 25, 2019 | Naveen |

ಚಿಂಚೋಳಿ: ಬೀದರ ಲೋಕಸಭೆ ಚುನಾವಣೆ ಮತದಾನ ಮುಗಿಯುತ್ತಿದ್ದಂತೆ ಇತ್ತ ಕಾಂಗ್ರೆಸ್‌ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಸೋಲು ಗೆಲುವಿನ ಲೆಕ್ಕಾಚಾರ ನಡೆಯುತ್ತಿದೆ. ಅಲ್ಲದೇ ನಮ್ಮ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಮತಗಳು ಸಿಗಲಿವೆ ಎನ್ನುವ ಮಾತುಗಳು ತಾಲೂಕಿನ ಪ್ರತಿ ಗ್ರಾಮಗಳಲ್ಲಿ ನಡೆಯುತ್ತಿವೆ.

Advertisement

ತಾಲೂಕಿನ ಕಾಂಗ್ರೆಸ ಭದ್ರಕೋಟೆ ಆಗಿರುವ ಗಡಿ ಪ್ರದೇಶದ ಕುಂಚಾವರಂ, ಶಾದೀಪುರ, ವೆಂಕಟಾಪುರ, ಸುತ್ತಮುತ್ತ ಇರುವ ತಾಂಡಾಗಳಲ್ಲಿ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತಗಳು ಸಿಗಲಿವೆ ಎನ್ನುವ ಮಾತುಗಳು ಕಾರ್ಯಕರ್ತರಿಂದ ಕೇಳಿ ಬರುತ್ತಿವೆ. ಚಿಂಚೋಳಿ ವಿಧಾನಸಭೆ ಮತಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದಿಂದ ಗೆಲುವು ಸಾಧಿಸಿ ಶಾಸಕರಾದ ನಂತರ ಕಾಂಗ್ರೆಸ್‌ಗೆ ಗುಡ್‌ಬೈ ಹೇಳಿದ ಮಾಜಿ ಶಾಸಕ ಡಾ|ಉಮೇಶ ಜಾಧವ ಬಂಜಾರಾ ಸಮಾಜದ ತಾಪಂ ಮತ್ತು ಗ್ರಾ.ಪಂ ಸದಸ್ಯರಿಗೆ ಹಾಗೂ ಅಲ್ಲಿನ ಸಮಾಜದ ಮುಖಂಡರಿಗೆ ಬೀದರ ಲೋಕಸಭೆ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರಿಗೆ ಮತ ಹಾಕುವಂತೆ ಮೊಬೈಲ್ ಮೂಲಕ ಸಂಪರ್ಕಿಸಿ ಮನವೊಲಿಸಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಕುಂಚಾವರಂ ಗಡಿಭಾಗದಲ್ಲಿ ಸ್ವಲ್ಪಮಟ್ಟಿಗೆ ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತಗಳು ಸಿಗಲಿವೆ ಎನ್ನುವ ಲೆಕ್ಕಾಚಾರ ಹಾಕಲಾಗುತ್ತಿದೆ.

ಐನೋಳಿ ಜಿಪಂ ಕ್ಷೇತ್ರದ ಐನೋಳಿ, ದೇಗಲಮಡಿ, ಹಸರಗುಂಡಗಿ, ತುಮಕುಂಟಾ, ಸಾಲೇಬೀರನಳ್ಳಿ, ಸಲಗರ ಬಸಂತಪುರ ಹಾಗೂ ಚಿಮ್ಮನಚೋಡ ಜಿಪಂ ಕ್ಷೇತ್ರದ ಚಂದನಕೇರಾ, ರಾಣಾಪುರ, ಐನಾಪುರ, ಭೂಯಾರ (ಬಿ), ಚೆಂಗಟಾ, ಗಡಿಲಿಂಗದಳ್ಳಿ ಗ್ರಾಮಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಈಶ್ವರ ಖಂಡ್ರೆ ಅವರಿಗೆ ಹೆಚ್ಚಿನ ಮತಗಳು ಬಿದ್ದಿವೆ ಎನ್ನುವ ಚರ್ಚೆಗಳು ನಡೆದಿವೆ.

ಪಾಲತ್ಯಾತಾಂಡಾ, ಚೌಕಿತಾಂಡಾ, ಅಡಕಿಮೋಕ, ರಾಣಾಪುರ ತಾಂಡಾ, ಹೇಮಲಾ ನಾಯಕ, ಸಲಗರ ಕಾಲೋನಿ, ಭಿಕ್ಕು ನಾಯಕ, ಎತೆಬಾರಪುರ ಸೇರಿದಂತೆ ಇನ್ನಿತರ ತಾಂಡಾಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ಪರ ಮತಗಳು ಚಲಾವಣೆಯಾಗಿವೆ ಎಂದು ಹೇಳಲಾಗುತ್ತಿದೆ.

ಕೋಡ್ಲಿ ಜಿಪಂ ಕ್ಷೇತ್ರದ ಮೋಘಾ, ರಟಕಲ್, ಕೋಡ್ಲಿ, ನಾವದಗಿ, ಹಲಚೇರಾ, ಚಿಂತಪಳ್ಳಿ, ಮುಕರಂಬಾ, ಹುಲಸಗೂಡ, ಸೇರಿಗ್ರಾಮ, ಸಾಸರಗಾಂವ, ರುಮ್ಮನಗೂಡ ಗ್ರಾಮಗಳಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗೆ ಹೆಚ್ಚು ಮತಗಳು ಬರಲಿವೆ ಎನ್ನಲಾಗುತ್ತಿದೆ. ಸೇರಿ ಬಡಾ ತಾಂಡಾ, ಸುಂಠಾಣ ತಾಂಡಾ, ಮಂಡಗೋಳ ತಾಂಡಾಗಳಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳನ್ನು ಹಾಕಲಾಗಿದೆ ಎನ್ನಲಾಗಿದೆ.

Advertisement

ತಾಲೂಕಿನಲ್ಲಿ ಬೀದರ ಲೋಕಸಭೆ ಚುನಾವಣಾ ಫಲಿತಾಂಶದ ಜೊತೆಗೆ ಕಲಬುರಗಿ ಲೋಕಸಭೆ ಚುನಾವಣೆ ಫಲಿತಾಂಶವೂ ಕುತೂಹಲಕಾರಿ ಆಗಿದೆ. ತಾಲೂಕಿನ ಪ್ರತಿ ಗ್ರಾಮಗಳ ಚಹಾ ಹೋಟೆಲ್, ಮದ್ಯದ ಅಂಗಡಿ, ದಾಬಾಗಳಲ್ಲಿ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಭರ್ಜರಿಯಾಗಿ ನಡೆಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next