ಬೀದರ: ಎತ್ತರದ ಮರಗಳು, ಹಚ್ಚು ಹಸಿರು ತುಂಬಿದ ವನ. ನಿಶಬ್ದ ಪರಿಸರದಲ್ಲಿ ಪಕ್ಷಿಗಳ ಕಲರವ. ಇದರ ಮಧ್ಯೆ ಬಳ್ಳಿಯಂತೆ ಬಳಕುತ್ತಾ ಇಣುಕುವ ಜಲಪಾತದ ವೈಭವ. ಬೆಟ್ಟದ ಕೆಳ ಭಾಗದ ಗುಪ್ತಲಿಂಗ ಮಂದಿರದಲ್ಲಿ ಶಿವನ ಆರಾಧನೆ. ಹೀಗೆ ಮಲೆನಾಡು ನೆನಪಿಸುವಂಥ ವಾತಾವರಣ ಬಿಸಲೂರು ಬೀದರನಲ್ಲಿಯೂ ಈಗ ಸೃಷ್ಟಿಯಾಗಿದೆ.
ಜಿಲ್ಲಾ ಕೇಂದ್ರ ಬೀದರದಿಂದ ಕೇವಲ 15 ಕಿ.ಮೀ ಅಂತರದಲ್ಲಿರುವ ಗಾಯಮುಖ (ಗುಪ್ತಲಿಂಗ) ದೇವಸ್ಥಾನದ ಪ್ರದೇಶ ಮಲೆನಾಡು ಕಣ್ಮುಂದೆ ತರುತ್ತದೆ. ಇಲ್ಲಿನ ಬೆಟ್ಟಗಳ ಮೇಲಿಂದ ಹರಿದು ಧುಮ್ಮುಕ್ಕುವ ಜಲಪಾಲ ನೋಡುವುದೇ ಚೆಂದ. ಇದು ವರ್ಷವಿಡೀ ಧುಮುಕ್ಕುವ ಜಲಪಾತವಲ್ಲ. ಮಳೆಗಾಲದಲ್ಲಿ ಮಾತ್ರ ನೋಡಿ ಕಣ್ತುಂಬಿಕೊಳ್ಳಬೇಕು ಅಷ್ಟೇ.
ಮಹಾರಾಷ್ಟ್ರ-ತೆಲಂಗಾಣ ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆ ಬೀದರ ಮೇಲೆ ಸೂರ್ಯನಿಗೆ ಹೆಚ್ಚು ಪ್ರೀತಿ. ಹಾಗಾಗಿ ವರ್ಷದ ಎಲ್ಲ ದಿನಗಳಲ್ಲೂ ಬಿಸಿಲಿನ ಪ್ರಖರತೆ ಸಾಮಾನ್ಯ. ಆದಾಗ್ಯೂ ಮುಂಗಾರು ಮಳೆ ಆರ್ಭಟಿಸಿದರೆ ಪ್ರಕೃತಿಯ ಸೊಬಗು ಬದಲಾಗುತ್ತದೆ. ಹಸಿರು ಮೇಳೈಸಿ, ಬಂಡೆಗಳ ಮೇಲೆ ನೀರು ಹರಿಯುವುದು ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಅದರಲ್ಲಿಯೂ ಜಿಲ್ಲೆಯಲ್ಲಿ ಮುಖ್ಯವಾದದ್ದು ಗಾಯಮುಖ ಕ್ಷೇತ್ರ.
ಸುತ್ತಲಿನ ಧಾರ್ಮಿಕ ಕ್ಷೇತ್ರಗಳಿಂದ ಪವಿತ್ರ ತಾಣವಾಗಿರುವ ಈ ಪ್ರದೇಶಕ್ಕೆ ಭಕ್ತರು, ಪ್ರವಾಸಿಗರ ಭೇಟಿ ನೀಡುವುದು ಅಧಿಕ. ಎಲ್ಲ ದೇವಸ್ಥಾನಗಳು ಬೆಟ್ಟ- ಗುಡ್ಡದಿಂದ ಕೂಡಿದ ನೈಸರ್ಗಿಕ ಪ್ರದೇಶಗಳಲ್ಲಿಯೇ ಜೀರ್ಣೋದ್ದಾರಗೊಂಡಿವೆ. ಬೀದರ-ಭಾಲ್ಕಿ ಮುಖ್ಯ ರಸ್ತೆಯ ಬಲ ಭಾಗದಲ್ಲಿ ಮೊದಲಿಗೆ ಇರುವುದೇ ಹೊನ್ನಿಕೇರಿಯ ಶ್ರೀ ಸಿದ್ಧಲಿಂಗೇಶ್ವರ ಮಂದಿರ. ಅಲ್ಲಿಂದ ಎರಡ್ಮೂರು ಕಿ.ಮೀ ಕ್ರಮಿಸಿದರೆ ಶ್ರೀ ಶನೇಶ್ವರ ದೇವಸ್ಥಾನ, ಹಾಗೆಯೇ ಮುಂದೆ ಎರಡು ಕಿ.ಮೀ ಬಳಿಕ ಗಾಯಮುಖ ಕ್ಷೇತ್ರ ನೆಲೆನಿಂತಿದೆ. ಇಲ್ಲಿಂದ ಸ್ವಲ್ಪ ದೂರದಲ್ಲಿಯೇ ದಕ್ಷಿಣ ಕಾಶಿ ಖ್ಯಾತಿಯ ಮೈಲಾರ ಮಲ್ಲಣ್ಣ ಪವಿತ್ರ ದೇವಾಲಯ ಇದೆ. ಹಚ್ಚು ಹಸಿರಿನಿಂದ ಕೂಡಿದ ಗಾಯಮುಖ ಕ್ಷೇತ್ರ ಪ್ರವಾಸಿಗರಿಗೆ ಮನ ತಣಿಸುವ ತಾಣವಾಗಿದೆ.
ಬೆಟ್ಟಗಳ ಕೆಳಗೆ ಶಿವಲಿಂಗದ ದೇವಸ್ಥಾನ ಇದೆ. ಪ್ರತಿ ಅಮಾವಾಸ್ಯೆ ಹಾಗೂ ಶ್ರಾವಣ ಮಾಸದಲ್ಲಿ ಜನ ಕಕ್ಕಿರಿದು ಸೇರಿರುತ್ತಾರೆ. ಮಳೆಗಾಲದಲ್ಲಿ ಮಲೆನಾಡಿನಲ್ಲಿ ಧುಮ್ಮುಕ್ಕುವ ಜಲಪಾತಗಳಂತೆ, ಸುತ್ತಲು ಸುರಿದ ಮಳೆ ಹಳ್ಳವಾಗಿ ನೀರು ಬಂದು ಬೆಟ್ಟದಿಂದ ಕೆಳಗೆ ಹರಿಯುವ ಮೂಲಕ ಜಲಪಾತವನ್ನೇ ಸೃಷ್ಟಿಸುತ್ತದೆ. ಇನ್ನೂ ಈ ದೇವಸ್ಥಾನ ಪ್ರದೇಶದಲ್ಲೇ ನೀರಿನ ಝರಿ ಇದು ಸದಾ ಹರಿಯುತ್ತಿರುತ್ತದೆ.
ಬೀದರ ತಾಲೂಕಿನ 7 ಝರಿಗಳಲ್ಲಿ ಇದು ಸಹ ಒಂದಾಗಿದೆ. ಬೀದರ ಜಿಲ್ಲೆಯಲ್ಲಿ ಏಕೈಕ ಜಲಪಾತ ಇದಾಗಿದ್ದು, ಎಲ್ಲರೂ ಒಮ್ಮೆ ನೋಡಲೆಬೇಕಾದ ಸ್ಥಳ. ಬೀದರನಿಂದ ಭಾಲ್ಕಿಗೆ ತೆರಳುವ ಮಾರ್ಗದಲ್ಲಿ ಈ ಕ್ಷೇತ್ರ ಇದೆ. ಬೀದರನಿಂದ 12 ಕಿ.ಮೀ ಮೈಲಾರ ದೇವಸ್ಥಾನದ ಕ್ರಾಸ್‌ವರೆಗೆ ಸಾಗಿ. ಅಲ್ಲಿಂದ ಗಾಯಮುಖಕ್ಕೆ 3 ಕಿ.ಮೀ. ಹೋದರೆ ಈ ಜಲಪಾತದ ದರ್ಶನವಾಗುತ್ತದೆ. ಕ್ರಾಸ್ ವರೆಗೆ ಮಾತ್ರ ವಾಹನಗಳ ವ್ಯವಸ್ಥೆ ಲಭ್ಯ ಇದೆ.
-ಶಶಿಕಾಂತ ಬಂಬುಳಗೆ