ಕಮಲನಗರ (ಬೀದರ್): ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಶುಕ್ರವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಸಾಕಷ್ಟು ಗಿಡಮರಗಳು ಉರುಳಿ ಬಿದ್ದಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ.
ಅಲ್ಲದೇ ತಾಲ್ಲೂಕಿನಾದ್ಯಂತ ವಿದ್ಯುತ್ ಕಂಬಗಳು ಉರುಳಿ ಬಿದ್ದಿರುವುದರಿಂದ ರಾತ್ರಿ ಇಡಿ ವಿದ್ಯುತ್ ಕಡಿತಗೊಂಡು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಹಾರಿದ ಮನೆ ಮೇಲ್ಚಾವಣಿ: ಸುಮಾರು ಎರಡು ಗಂಟೆಗಳ ಕಾಲ ಜೋರಾಗಿ ಬೀಸಿದ ಗಾಳಿಯ ಹೊಡೆತಕ್ಕೆ ಹಲವಾರು ಮನೆಗಳ ಮೇಲಿನ ಹಂಚುಗಳು ಹಾರಿ ಹೋಗಿ ಸಾರ್ವಜನಿಕರ ಅಪಾರ ಪ್ರಮಾಣದಲ್ಲಿ ಹಾನಿಯುಂಟಾಗಿದೆ.
ನೆಲಕ್ಕುರುಳಿದ ಮರಗಳು: ಜೋರಾಗಿ ಬೀಸಿದ ಗಾಳಿಗೆ ಹಲವು ಗ್ರಾಮಗಳಲ್ಲಿ ಗಿಡಮರಗಳು ನೆಲಕ್ಕುರುಳಿವೆ. ಅಲ್ಲದೇ ಖತಗಾಂವ್- ಹಕ್ಯಾಳ ಮಧ್ಯದ ರಸ್ತೆಯ ಮೇಲೆ ಮರವೊಂದು ಉರುಳಿ ಬಿದ್ದಿರುವುದರಿಂದ ಸಂಚಾರ ಸ್ಥಗಿತಗೊಂಡಿತ್ತು. ಖತಗಾಂವ್ – ಮದನೂರ್, ಕಮಲನಗರ್ – ಮದನೂರ್ ಮಧ್ಯದ ರಸ್ತೆಯಲ್ಲಿ ಕೂಡಾ ಮರಗಳು ಬಿದ್ದು ಸಂಚಾರ ಸ್ಥಗಿತಗೊಂಡಿತ್ತು.
ನೆಲಕ್ಕುರುಳಿದ ಮಾವು: ಭಾರಿ ಬಿರುಗಾಳಿಗೆ ಮಾವು ಬೆಳೆಗಾರರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಬಿರುಗಾಳಿಯೊಂದಿಗೆ ಮಳೆಯೂ ಸುರಿದಿದ್ದರಿಂದ ಮಿಡಿಕಾಯಿಗಳು ನೆಲಕ್ಕುರುಳಿವೆ. ಬಹುತೇಕ ಗಿಡಗಳ ಕೆಳಗೆ ಮಾವಿನ ಮಿಡಿ ಕಾಯಿಗಳ ರಾಶಿ ಸಂಗ್ರಹವಾಗಿರುವುದು ಕಂಡು ಬಂದಿದೆ. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರು, ಮಾವು ಬೆಳೆಗಾರರು ಒಂದೆ ದಿನದಲ್ಲಿ ಬೆಳೆ ಕಳೆದುಕೊಳ್ಳುವಂತಾಗಿದೆ.