Advertisement

Bidar: ಹಾಸ್ಟೆಲ್‌ ಮಕ್ಕಳಿಗೆ ವಾಶಿಂಗ್‌ ಮಷಿನ್‌ ಭಾಗ್ಯ

05:57 PM Dec 08, 2023 | Team Udayavani |

ಬೀದರ: ಸರ್ಕಾರಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಟ್ಟೆ ತೊಳೆಯುವುದು ಕಷ್ಟದ ಕೆಲಸ. ಜತೆಗೆ ವಿದ್ಯಾಭ್ಯಾಸಕ್ಕೆ ಸಮಯದ ವ್ಯರ್ಥ ಸಹ. ಇದನ್ನು ಮನಗಂಡು ಶಾಲಾ ಶಿಕ್ಷಕ ಬಾಂಧವರು ದಾನಿಗಳ ನೆರವಿನಿಂದ ವಾಶಿಂಗ್‌ ಮಶೀನ್‌ (ಬಟ್ಟೆ ಒಗೆಯುವ ಯಂತ್ರ)ಗಳ ಸೌಲಭ್ಯ ಕಲ್ಪಿಸಿ ಅನುಕೂಲ ಮಾಡಿಕೊಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisement

ಬೀದರ ತಾಲೂಕಿನ ಘೋಡಂಪಳ್ಳಿಯ ಅಟಲ್‌ ಬಿಹಾರಿ ವಾಜಪೇಯಿ ವಸತಿ ಶಾಲೆ ಮತ್ತು ಕಾಲೇಜಿನಲ್ಲಿ ಮಕ್ಕಳಿಗಾಗಿ ವಿಶೇಷ ಸೌಲತ್ತು ಒದಗಿಸಿ ಶಿಕ್ಷಕರು ಮತ್ತು ಮೇಲ್ವಿಚಾರಕರು ಸೈ ಎನಿಸಿದ್ದಾರೆ. ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ನೂರು ಪ್ರತಿಶತ ಫಲಿತಾಂಶದೊಂದಿಗೆ ಗಮನಾರ್ಹ ಸಾಧನೆ ಮಾಡುವ ಈ ವಸತಿ ಶಾಲೆ ಈಗ ಹಾಸ್ಟೆಲ್‌ ವಿದ್ಯಾರ್ಥಿಗಳಿಗಾಗಿ ಇಂಥದ್ದೊಂದು ವ್ಯವಸ್ಥೆ ಹೊಂದಿದ ರಾಜ್ಯದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ.

ವಸತಿ ಶಾಲೆಗಳು ಎಂದಾಕ್ಷಣ ಮೂಲಸೌಕರ್ಯಗಳ ಕೊರತೆ ದೂರುಗಳೇ ಹೆಚ್ಚು. ನೀರು, ಸ್ವತ್ಛತೆ ಹೀಗೆ ಒಂದಿಲ್ಲೊಂದು ಸಮಸ್ಯೆಗಳು ಸಾಮಾನ್ಯ. ಅದರೊಟ್ಟಿಗೆ ತಮ್ಮ ಬಟ್ಟೆಗಳನ್ನು ಶುಚಿಗೊಳಿಸಿಕೊಳ್ಳುವುದು ವಿದ್ಯಾರ್ಥಿಗಳಿಗೆ ಹರಸಾಹಸವೇ ಸರಿ.
ಅದರಲ್ಲೂ ಗಂಡು ಮಕ್ಕಳಿಗೆ ದೊಡ್ಡ ಹಿಂಸೆ. ವಾರದ ರಜೆ ಬಂದರೆ ಸಾಕು ಬಟ್ಟೆಗಳನ್ನು ತೊಳೆಯುವುದರಲ್ಲೇ ಅವರು ಸಮಯ ಕಳೆಯುತ್ತಾರೆ. ಕೆಲ ಮಕ್ಕಳು ಸಮೀಪದ ಊರಿನವರಾಗಿದ್ದರೆ ಮನೆಗೆ ಕಳುಹಿಸುತ್ತಾರೆ. ಇದರಿಂದ ಓದಲು ಸಮಯ ವ್ಯರ್ಥವಾಗಿ ವಿದ್ಯಾರ್ಥಿಗಳ ಕಲಿಕೆ ಮೇಲೂ ಪರಿಣಾಮ ಬೀಳುತ್ತಿದೆ.

ಮಕ್ಕಳ ಈ ಪಡಿಪಾಟಲು ಗಮನಿಸಿದ ವಸತಿ ಶಾಲೆಯ ಪ್ರಾಚಾರ್ಯರು ಮತ್ತು ಮೇಲ್ವಿಚಾರಕರು ಬಟ್ಟೆ ಒಗೆಯುವ ಕಷ್ಟದಿಂದ ಮುಕ್ತಿ ದೊರಕಿಸಿ ನಿರಾಳರನ್ನಾಗಿಸಿದ್ದಾರೆ. ಒಂದು ವರ್ಷದ ಹಿಂದೆ ದಾನಿಗಳು-ಶಿಕ್ಷಕರ ನೆರವಿನಿಂದಲೇ 9 ವಾಶಿಂಗ್‌ ಮಶೀನ್‌ಗಳನ್ನು ಖರೀದಿಸಿ ಬಟ್ಟೆ ಶುಚಿಗಾಗಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. 6ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಒಟ್ಟು 550 ವಿದ್ಯಾರ್ಥಿಗಳು ವಸತಿ ಶಾಲೆಯಲ್ಲಿ ಓದುತ್ತಿದ್ದು, ಈಗ ಅವರೆಲ್ಲರೂ ಪ್ರತಿ ದಿನ ಕೋಣೆಗಳ ಪಾಳಿಯಂತೆ ಯಂತ್ರದ ಉಪಯೋಗ ಮಾಡಿಕೊಳ್ಳುತ್ತಿದ್ದಾರೆ.

ಗುಣಮಟ್ಟದ ಐಎಫ್‌ಬಿ ಕಂಪನಿಯ ವಾಶಿಂಗ್‌ ಮಶೀನ್‌ಗಳನ್ನು ನೇರವಾಗಿ ಡೀಲರ್‌ಗಳ ಮೂಲಕ ಖರೀದಿ ಮಾಡಲಾಗಿದೆ. ಪ್ರತಿ ಯಂತ್ರಕ್ಕೆ 33 ಸಾವಿರ ರೂ.ಗಳಂತೆ 2.97 ಲಕ್ಷ ರೂ. ರೂ. ವೆಚ್ಚದಲ್ಲಿ ಖರೀದಿಸಲಾಗಿದೆ. ಯಂತ್ರಗಳಿಗೆ ನೀರು ಮತ್ತು ವಿದ್ಯುತ್‌ ವ್ಯವಸ್ಥೆಗಳನ್ನು ಸಮರ್ಪಕವಾಗಿ ಮಾಡಿ ವಿದ್ಯಾರ್ಥಿಗಳಿಗೆ ಬಟ್ಟೆ ಒಗೆದುಕೊಳ್ಳಲು ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ.

Advertisement

ದಶಕದ ಹಿಂದೆ ರಾಜ್ಯದಲ್ಲೇ ಮೊದಲು ತರಗತಿಗಳು ಮತ್ತು ಕಚೇರಿಯಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ
ಕಲಿಕೆ ಮೇಲೆ ಕಣ್ಗಾವಲು ಮಾಡಿಕೊಂಡಿದ್ದ ಸರ್ಕಾರಿ ವಸತಿ ಶಾಲೆಯಲ್ಲಿ ಈಗ ವಿದ್ಯಾರ್ಥಿಗಳ ಮೇಲಿನ ಕೆಲಸದ ಹೊರೆ ತಪ್ಪಿಸಿ ಅಭ್ಯಾಸಕ್ಕೆ ಸಹಕಾರಿಯಾಗಿ ಹೊಸ ಪ್ರಯೋಗ ಮಾಡಿರುವುದು ವಿಶೇಷ. ಇತರೆ ವಸತಿ ಶಾಲೆಗಳು ಈ ರೀತಿಯ ವ್ಯವಸ್ಥೆ ಕಲ್ಪಿಸಲು
ಮುಂದಾಗಲಿ. ಅದಕ್ಕೆ ಸಾರ್ವಜನಿಕ ದಾನಿಗಳು ಕೈಜೋಡಿಸಲಿ.

ವಿದ್ಯಾರ್ಥಿಗಳಿಗೆ ಓದಲು ಸಮಯ ವ್ಯರ್ಥ ಆಗುವುದನ್ನು ತಪ್ಪಿಸಲು ಘೋಡಂಪಳ್ಳಿ ಅಟಲ್‌ ಬಿಹಾರಿ ವಾಜಪೇಯಿ ವಸತಿ ಶಾಲಾ-ಕಾಲೇಜಿನಲ್ಲಿ ಒಟ್ಟು 9 ವಾಶಿಂಗ್‌ ಮಶೀನ್‌ಗಳನ್ನು ಖರೀದಿಸಲಾಗಿದೆ. ದಾನಿಗಳು, ಶಿಕ್ಷಕರ ಸಹಾಯದಿಂದ ಈ ವ್ಯವಸ್ಥೆ ಮಾಡಲು
ಸಾಧ್ಯವಾಗಿದ್ದು, ಒಟ್ಟು 3 ಲಕ್ಷ ರೂ. ವೆಚ್ಚ ಮಾಡಲಾಗಿದೆ. ಶಾಲೆಯ 550 ಮಕ್ಕಳು ಕಳೆದ ಒಂದು ವರ್ಷದಿಂದ ಈ ಯಂತ್ರಗಳ
ಉಪಯೋಗ ಪಡೆದುಕೊಳ್ಳುತ್ತಿದ್ದಾರೆ.
ಶರಣಪ್ಪ ಬಿರಾದಾರ, ಪ್ರಾಚಾರ್ಯರು.

*ಶಶಿಕಾಂತ ಬಂಬುಳಗೆ

Advertisement

Udayavani is now on Telegram. Click here to join our channel and stay updated with the latest news.

Next