ಬೀದರ: ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಅಭಾವವನ್ನು ಸಮರ್ಪಕವಾಗಿ ನಿಭಾಯಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ|ಎಚ್.ಆರ್.ಮಹಾದೇವ ಅವರು ತಹಶೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಯಾವುದೇ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳ ಬಗ್ಗೆ ತಾಲೂಕು ಮಟ್ಟದ ವಿಪತ್ತು ನಿರ್ವಹಣಾ ಸಮಿತಿಯಲ್ಲಿ ಚರ್ಚಿಸಿ ಸಭಾ ನಡಾವಳಿ ಸಲ್ಲಿಸಿದಲ್ಲಿ ವಿಪತ್ತು ನಿರ್ವಹಣೆಯಡಿ ಅನುದಾನ ಖರ್ಚು ಮಾಡಬಹುದು. ಹಾಗಾಗಿ ಕೂಡಲೇ ಸಭೆ ನಡೆಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದರು.
ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ ಗ್ರಾಮಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಎಷ್ಟು ಟ್ಯಾಂಕರ್ ಗಳು ಬೇಕಾಗಬಹುದು ಎನ್ನುವ ಬಗ್ಗೆ ಮಾಹಿತಿ ಸಿದ್ಧಪಡಿಸಿಕೊಳ್ಳಲಾಗಿದೆ ಎಂದು ತಹಶೀಲ್ದಾರರು ತಿಳಿಸಿದಾಗ, ತಾಲೂಕು ಕಾರ್ಯನಿರ್ವಾಹಕ ಅಧಿ ಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ ವರದಿ ಸಲ್ಲಿಸಬೇಕು. ತಹಶೀಲ್ದಾರರು ಮತ್ತು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಅಧಿಕಾರಿಗಳು ಸಲ್ಲಿಸುವ ಪಟ್ಟಿಯಲ್ಲಿ ವ್ಯತ್ಯಾಸಗಳಿರಬಾರದು ಎಂದು ಹೇಳಿದರು.
ವಿಪರಿತ ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ತಹಶೀಲ್ದಾರರು ಹಾಗೂ ತಾಪಂ ಕಾರ್ಯನಿರ್ವಾಹಕ ಅ ಧಿಕಾರಿಗಳು ಸ್ಥಳ ಪರಿಶೀಲಿಸಿದ ನಂತರವೇ ಟ್ಯಾಂಕರ್‌ನಿಂದ ನೀರು ಪೂರೈಸಲು ಕ್ರಮ ವಹಿಸಬೇಕು. ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ಮುಖ್ಯಸ್ಥರು ಸಹ ತಮ್ಮ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಎದುರಾಗಬಹುದಾದ ಪ್ರದೇಶಗಳ ಬಗ್ಗೆ ತಾಲೂಕು ಸಮಿತಿಗೆ ವರದಿ ನೀಡಬೇಕು ಎಂದು ಸೂಚಿಸಿದರು.
ಹೆಚ್ಚುವರಿ ಮೋಟಾರ್ ಲಭ್ಯವಿರಲಿ: ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಲು ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಹೆಚ್ಚುವರಿ ಮೋಟರ್‌ಗಳನ್ನು ಇಟ್ಟುಕೊಂಡಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಜ್ಞಾನೇಂದ್ರಕುಮಾರ ಗಂಗವಾರ್, ಅಪರ ಜಿಲ್ಲಾಧಿಕಾರಿ ರುದ್ರೇಶ್ ಗಾಳಿ, ಸಹಾಯಕ ಆಯುಕ್ತರಾದ ಅಕ್ಷಯ್ ಶ್ರೀಧರ್, ಭಂವರ್‌ಸಿಂಗ್ ಮೀನಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಶರಣಬಸಪ್ಪ ಕೋಟೆಪ್ಪಗೋಳ, ಎಲ್ಲ ತಹಶೀಲ್ದಾರರು, ತಾಪಂ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.