ಕಮಲನಗರ (ಬೀದರ): ಮುಂಬರುವ ಲೋಕಸಭಾ ಚುನಾವಣೆಗೆ ಬೀದರ ಕ್ಷೇತ್ರದಿಂದ ಡೋಣಗಾಂವ (ಎಂ) ಹಾವಗೀಸ್ವಾಮಿ ಮಠದ ಪೀಠಾಧಿಪತಿ ಡಾ. ಶಂಭುಲಿಂಗ ಶಿವಾಚಾರ್ಯರಿಗೆ ಬಿಜೆಪಿ ಪಕ್ಷ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದ ಭಕ್ತ ಸಮೂಹವು, ಟಿಕೆಟ್ ಕೈ ತಪ್ಪಿದರೆ ಪಕ್ಷೇತರರಾಗಿ ಕಣಕ್ಕಿಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಇಲ್ಲಿಗೆ ಸಮೀಪದ ಮಹಾಳಪ್ಪಯ್ಯಾ ದೇವಸ್ಥಾನದಲ್ಲಿ ಮಂಗಳವಾರ ಮುಖಂಡರಾದ ಪ್ರಕಾಶ ದೇಸಾಯಿ, ವಿಜಯಕುಮಾರ ದೇಶಮುಖ ಮತ್ತು ಪ್ರವೀಣ ಹೊಂಡಾಳೆ ಅವರು ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಹಾವಗಿಸ್ವಾಮಿ ಮಠದ ವ್ಯಾಪ್ತಿಯಲ್ಲಿ ಸುಮಾರು 3.56 ಲಕ್ಷ ಭಕ್ತ ಸಮೂಹವಿದೆ. ಲೋಕ ಕಲ್ಯಾಣಕ್ಕಾಗಿ ಸದಾ ದುಡಿಯುತ್ತಿರುವ ಪೂಜ್ಯರಿಗೆ ಟಿಕೆಟ್ ನೀಡಿದರೆ ಭಾರಿ ಬಹುಮತದಿಂದ ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.
ದೇಶದ ರಾಜಕಾರಣದಲ್ಲಿ ಸನ್ಯಾಸಿಗಳಿಂದಲೇ ಸರ್ವಾಂಗೀಣ ಅಭಿವೃದ್ಧಿಯಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ, ರಾಜಸ್ಥಾನದಲ್ಲಿ ಯೋಗಿ ಬಾಲಕನಾಥ್, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿ ಹೀಗೆ ಹಲವು ಸಂಸಾರ ತ್ಯಾಗಿಗಳಿಂದಲೇ ರಾಷ್ಟ್ರ ಪ್ರಗತಿಯಾಗಿದೆ. ಹಾಗಾಗಿ ಬೀದರ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿ ಟಿಕೆಟ್‌ಗಾಗಿ ಡಾ. ಶಂಭುಲಿಂಗ ಶಿವಾಚಾರ್ಯರರನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದರು.
ಬೀದರ ಲೋಕಸಭೆಯ ಎಂಟು ವಿಧಾನಸಭೆ ಕ್ಷೇತ್ರಗಳಲ್ಲೂ ಡಾ. ಶಿವಾಚಾರ್ಯರಿಗೆ ಬೀದರ್ ಲೋಕಸಭೆ ಬಿಜೆಪಿ ಅಭ್ಯರ್ಥಿ ಮಾಡಬೇಕೆಂಬ ಸಾಮೂಹಿಕ ಕೂಗು ಎದ್ದಿದೆ. ಹಾಗಾಗಿ ಬಿಜೆಪಿ ಹೈಕಮಾಂಡ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಒಂದು ವೇಳೆ ಬಿಜೆಪಿ ಪಕ್ಷ ಪೂಜ್ಯರಿಗೆ ಟಿಕೆಟ್ ನಿರಾಕರಿಸಿದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದು ನಿಶ್ಚಿತ ಎಂದು ಹೇಳಿದ ಅವರು, ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಮೀಜಿ ಬೆಂಬಲ ಇರಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸುದ್ದಿಗೋಷ್ಠಿಯಲ್ಲಿ ಶಿವರಾಜ ನೀಲಂಗೆ, ಸುಭಾಷ ಪಾಟೀಲ, ಸಂಜುಕುಮಾರ ಮುಧಾಳೆ, ಪ್ರೇಮದಾಸ ಕಾಳಗಾಪೂರೆ, ಬಸವರಾಜ ಮುಧಾಳೆ, ಉಮಾಕಾಂತ ಪಾಟೀಲ, ನಾಗೇಶ ಪಾಟೀಲ, ಗಣೇಶ ಕಾರೆಗಾವೆ, ರವಿ ಚಿಂಚನಸೂರೆ, ಶೈಲೇಶ ದೇಶಮುಖ, ವಿಜಯಕುಮಾರ ದೇಶಮುಖ, ವಿಜಯಕುಮಾರ ದೇಸಾಯಿ, ಮಲ್ಲಿಕಾರ್ಜುನ ಗಂದಗೆ, ಮಹಾಂತೇಶ ದೇವರ್ಸೆ, ಶೇಷರಾವ ಪಾಟೀಲ್ ಮತ್ತಿತರರು ಇದ್ದರು.