ಬೀದರ: ಸಕ್ಷಮ ಪ್ರಾಧಿಕಾರದಿಂದ ಭೂಪರಿವರ್ತನಾ ಆದೇಶ ಪಡೆಯದೇ ಕೃಷಿ ಜಮೀನಿನಲ್ಲಿ ಲೇಔಟ್ ರೂಪಿಸಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದರ ಬಗ್ಗೆ ತಕ್ಷಣ ಅಧಿಕಾರಿಗಳು ವರದಿ ಮಾಡಿ ಅದನ್ನು ಸರ್ಕಾರಕ್ಕೆ ವಶಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ| ಎಚ್.ಆರ್ ಮಹಾದೇವ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೀದರ ತಾಲೂಕು ವ್ಯಾಪ್ತಿಯ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರೊಂದಿಗೆ ಗುರುವಾರ ಸಭೆ ನಡೆಸಿದ ಜಿಲ್ಲಾಧಿಕಾರಿ, ಪ್ರಾಧಿಕಾರದಿಂದ ಭೂಪರಿವರ್ತನಾ ಆದೇಶ ಇಲ್ಲದ ಲೇಔಟ್‌ಗಳ ಬಗ್ಗೆ ವರದಿ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಬರಕ್ಕೆ ಸ್ಪಂದಿಸಿ: ಬರ ಎದುರಾದ ಹಿನ್ನೆಲೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಹೆಚ್ಚಿನ ಒತ್ತು ಕೊಡಬೇಕು. ಚುನಾವಣಾ ಕಾರ್ಯದ ಹಿನ್ನೆಲೆಯಲ್ಲಿ ನಿಲ್ಲಿಸಿದ್ದ ಕೆಲವು ಕಾರ್ಯ ಚಟುವಟಿಕೆಗಳನ್ನು ಪುನಾರಂಭಿಸಿ ಅವುಗಳು ಸಮರ್ಪಕವಾಗಿ ನಡೆಯುವ ನಿಟ್ಟಿನಲ್ಲಿ ಕಂದಾಯ ಆಡಳಿತ ಕಾರ್ಯ ಚುರುಕುಗೊಳ್ಳಬೇಕು. ಪ್ರತಿ ಮೂರು ದಿನಕ್ಕೊಮ್ಮೆ ಕಡ್ಡಾಯ ಸಭೆ ನಡೆಸಿ ಪ್ರಗತಿ ಪರಿಶೀಲಿಸಬೇಕು. ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು ಜನರಿಗೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ತಹಶೀಲ್ದಾರ್‌ಗೆ ಸೂಚಿಸಿದರು.
ಅರ್ಜಿ ವಿಲೇವಾರಿ: 371ನೇ(ಜೆ), ಜಾತಿ, ಆದಾಯ ಪ್ರಮಾಣ ಪತ್ರ ವಿತರಣೆ, ಮಾಸಾಶನ ಅರ್ಜಿ ವಿಲೇವಾರಿ ಸೇರಿದಂತೆ ಬಾಕಿ ಇರುವ ಎಲ್ಲ ಸಕಾಲ ಅರ್ಜಿಗಳನ್ನು ಕಾಲಮಿತಿಯೊಳಗೆ ವಿಲೇವಾರಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ತಹಶೀಲ್ದಾರ್ ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಿದರು.
ಪ್ರಸ್ತಾವನೆ: ನೀರಿನ ತೊಂದರೆಯಾದ ಕಾರಣ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವುದಾಗಿ ಮರಕಲ್ ಗ್ರಾಮ ಲೆಕ್ಕಾಧಿಕಾರಿ ತಿಳಿಸಿದರು. ನೀರು ಇಲ್ಲದ ಕಡೆಗಳಲ್ಲಿ ಖಾಸಗಿ ಕೊಳವೆಬಾವಿ ಖರೀದಿ, ಪೈಪ್‌ಲೈನ್ ಹಾಕುವುದು ಸೇರಿದಂತೆ ಇನ್ನಿತರ ಅಗತ್ಯ ವ್ಯವಸ್ಥೆ ಮಾಡಲು ಪ್ರಸ್ತಾವನೆಗಳನ್ನು ಆಯಾ ಪಿಡಿಒಗಳಿಗೆ ಸಲ್ಲಿಸಿರುವುದಾಗಿ ಕೆಲವು ಅಧಿಕಾರಿಗಳು ಹೇಳಿದರು.
ಜನವಾಡದಲ್ಲಿ 14,718 ಜನಸಂಖ್ಯೆ ಇದೆ. ಎಂಟು ಖಾಸಗಿ ಕೊಳವೆಬಾವಿಗಳಿಂದ ನೀರು ಖರೀದಿಸಿ ಪೂರೈಸಲಾಗುತ್ತಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ಮಾಹಿತಿ ನೀಡಿದರು. ಕಾಡವಾದದಲ್ಲಿ 3800 ಜನಸಂಖ್ಯೆ ಇದೆ. ನೀರಿನ ಸಮಸ್ಯೆ ಇಲ್ಲ. ಕಮಠಾಣದಲ್ಲಿ 11,179 ಜನಸಂಖ್ಯೆ ಇದ್ದು. 42 ಕೊಳವೆಬಾವಿಗಳ ಪೈಕಿ 34 ಸುಸ್ಥಿತಿಯಲ್ಲಿವೆ. ಕೆಲವು ಕಡೆಗಳಲ್ಲಿ ಮಾತ್ರ ನೀರಿನ ಸಮಸ್ಯೆ ಇದೆ ಎಂದು ಅಲ್ಲಿನ ಗ್ರಾಮ ಲೆಕ್ಕಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಭೇಟಿ ಕೊಡಿ: ಚಿಮಕೋಡದಲ್ಲಿ ಎರಡು ತೆರೆದ ಬಾವಿಗಳು ಮತ್ತು ಐದು ಕೈಪಂಪ್‌ಗ್ಳು ಬತ್ತಿವೆ. 8 ಕೊಳವೆಬಾವಿ ಕೊರೆಯಿಸಲಾಗಿದೆ ಎಂದು ಅಲ್ಲಿನ ಗ್ರಾಮ ಲೆಕ್ಕಾಧಿಕಾರಿ ಮಾಹಿತಿ ನೀಡಿದರು. ನೀರಿನ ಸಮಸ್ಯೆ ಎಂದು ಕಂಡು ಬಂದ ಮಾಳೇಗಾಂವ, ಪತ್ತೇಪುರಕ್ಕೆ ಕೂಡಲೇ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಗ್ರಾಮ ಲೆಕ್ಕಾಧಿಕಾರಿಗೆ ಸೂಚಿಸಿದರು.ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಹಾಗೂ ತಹಶೀಲ್ದಾರರು ಇದ್ದರು.