Advertisement

ಕೊರೊನಾ ಜಾಗೃತಿ ಯುದ್ಧೋಪಾದಿಯಲ್ಲಿ ನಡೆಸಿ

04:44 PM Mar 14, 2020 | Naveen |

ಬೀದರ: ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಹರಡದಂತೆ ಎಲ್ಲಾ ಕಡೆಗಳಲ್ಲಿ ಜನಜಾಗೃತಿ ಕಾರ್ಯವು ಯುದ್ಧೋಪಾದಿಯಲ್ಲಿ ನಡೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಜಿಲ್ಲಾಡಳಿತಕ್ಕೆ ಸೂಚಿಸಿದರು.

Advertisement

ನಗರದಲ್ಲಿ ಶುಕ್ರವಾರ ಸಂಜೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೊರೊನಾ ವೈರಸ್‌ ಹರಡದಂತೆ ತೆಗೆದುಕೊಂಡ ಮುಂಜಾಗ್ರತೆ ಕುರಿತು ಪರಿಶೀಲನೆ ನಡೆಸಿ ಮಾತನಾಡಿದ ಸಚಿವರು, ಅಧಿಕಾರಿಗಳನ್ನು ಒಳಗೊಂಡ ತಂಡವೊಂದನ್ನು ರಚಿಸಿ, ಕೆಲಸ ಹಂಚಿಕೆ ಮಾಡಿ ಕಾರ್ಯಪ್ರವೃತ್ತರಾಗಲು ಕ್ರಮ ವಹಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಸರ್ಕಾರದ ಕಡೆಯಿಂದ ಎಲ್ಲ ವ್ಯವಸ್ಥೆ ಮಾಡಿಸಲಾಗುವುದು. ಆರೋಗ್ಯ ಸಚಿವರೊಂದಿಗೆ ಸಂಪರ್ಕದಲ್ಲಿದ್ದು ಬೇಕಾದ ಸೌಕರ್ಯ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.

ಮುಖ್ಯವಾಗಿ ಶುಚಿತ್ವಕ್ಕೆ ಹೆಚ್ಚು ಒತ್ತು ಕೊಡಬೇಕು. ಹೀಗಾಗಿ ಇಡೀ ನಗರಾದ್ಯಂತ ಸ್ವಚ್ಛತಾ ಕಾರ್ಯವನ್ನು ಕೂಡ ಮತ್ತೊಮ್ಮೆ ತುರ್ತಾಗಿ ಮಾಡಬೇಕು ಎಂದು ಸಚಿವರು ಪೌರಾಯುಕ್ತರಿಗೆ ನಿರ್ದೇಶನ ನೀಡಿದರು.

ಮುಂಜಾಗ್ರತೆ ವಹಿಸಲಾಗಿದೆ: ಕೊರೊನಾ ವೈರಸ್‌ ಹರಡದಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗ್ರಾಮೀಣ ಪ್ರದೇಶದ ಜನತೆಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕುರಿತಂತೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಲಾಗಿದೆ. ಕೊರೊನಾ ವೈರಸ್‌ ಶಂಕಿತರಿಗೆ ಚಿಕಿತ್ಸೆ ಕೊಡಿಸುವ ನಿಟ್ಟಿನಲ್ಲಿ ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ|ಎಚ್‌.ಆರ್‌.ಮಹಾದೇವ ತಿಳಿಸಿದರು.

ಹಳ್ಳಿಗಳಲ್ಲಿ ಜಾಗೃತಿ ಮೂಡಿಸಿ: ಕೊರೊನಾ ವೈರಸ್‌ ಹರಡದಂತೆ ಹೇಗೆ ಜಾಗೃತಿ ವಹಿಸಬೇಕು. ಯಾವ ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ವಿಷಯವು ಹಳ್ಳಿಹಳ್ಳಿಗೆ ತಲುಪಬೇಕು. ಹೀಗಾಗಿ ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸುತ್ತೋಲೆ ಮೂಲಕ ಸೂಚಿಸಿ, ಅವರಿಂದ ಹಳ್ಳಿಹಳ್ಳಿಗಳಲ್ಲಿ ಜನತೆಗೆ ಅರಿವು ಮೂಡಿಸಲು ಕ್ರಮ ವಹಿಸಬೇಕು ಎಂದು ಸಚಿವರು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜ್ಞಾನೇಂದ್ರಕುಮಾರ ಗಂಗವಾರ ಅವರಿಗೆ ಸೂಚಿಸಿದರು.

Advertisement

ಎಲ್ಲ ಆಸ್ಪತ್ರೆಗೆ ಭೇಟಿ ನೀಡಿ: ಜಿಲ್ಲೆಯ ಬಸವಕಲ್ಯಾಣ, ಭಾಲ್ಕಿ, ಹುಮನಾಬಾದ್‌, ಔರಾದ ತಾಲೂಕುಗಳಲ್ಲಿ ಇರುವ ಎಲ್ಲ ಆಸ್ಪತ್ರೆಗಳಿಗೆ ತಾವು ನಿಯಮಿತವಾಗಿ ಭೇಟಿ ನೀಡಿ ಅಲ್ಲಿ ಕೂಡ ಅಗತ್ಯ ವೈದ್ಯಕೀಯ ಸೌಕರ್ಯ ಇರುವಂತೆ ನೋಡಿಕೊಳ್ಳಬೇಕು. ಎಲ್ಲ ಸರ್ಕಾರಿ ಆಸ್ಪತೆಗಳಲ್ಲಿ ಕೊರೊನಾ ವೈರಸ್‌ ಬಗ್ಗೆ ಅರಿವು ಮೂಡಿಸುವ ಕಾರ್ಯ ಕೈಗೊಳ್ಳಲು ಕ್ರಮ ವಹಿಸಬೇಕು ಎಂದು ಸಚಿವರು ಡಿಎಚ್‌ಒ ಅವರಿಗೆ ಸೂಚಿಸಿದರು.

ಕೊರೊನಾ ವೈರಸ್‌ ತಡೆಗೆ ವಹಿಸಬೇಕಾದ ಮುನ್ನೆಚ್ಚರಿಕೆ ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳು ಮತ್ತು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ  ನೇತೃತ್ವದಲ್ಲಿ ಈಗಾಗಲೇ ಎರಡು ಬಾರಿ ಸಭೆ ನಡೆಸಲಾಗಿದೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಡಿಎಚ್‌ಒ ಡಾ| ವಿ.ಜಿ.ರೆಡ್ಡಿ ಅವರು ಸಭೆಗೆ ತಿಳಿಸಿದರು.

ಸೌಕರ್ಯಗಳಿಗೆ ಬೇಡಿಕೆ: ಕೊರೊನಾ ವೈರಸ್‌ ಶಂಕಿತರಿಗೆ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಮುಂದಿನ ನಾಲ್ಕು ತಿಂಗಳಲ್ಲಿ ಬೇಕಾಗುವ ಅಗತ್ಯ ವೈದ್ಯಕೀಯ ಸೌಕರ್ಯಗಳ ಬಗ್ಗೆ ಬೇಡಿಕೆಯ ಪಟ್ಟಿಯನ್ನು ಸಲ್ಲಿಸಲಾಗಿದೆ ಎಂದು ಬ್ರಿಮ್ಸ್‌ ನಿರ್ದೇಶಕರು ಸಭೆಗೆ ತಿಳಿಸಿದರು.

ಸಭೆಯಲ್ಲಿ ಎಸ್‌ಪಿ ನಾಗೇಶ ಡಿ.ಎಲ್‌., ಅಪರ ಜಿಲ್ಲಾಧಿಕಾರಿ ರುದ್ರೇಶ ಗಾಳಿ, ವೈದ್ಯಕೀಯ ಅಧಿಧೀಕ್ಷಕ ಡಾ| ವಿಜಯಕುಮಾರ ಅಂತಪ್ಪನವರ ಸೇರಿದಂತೆ ವೈದ್ಯಾ ಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next