Advertisement

ವಿಮೋಚನೆಗೆ ಬೀದರ ಕೊಡುಗೆ ಅಪಾರ

03:03 PM Sep 17, 2019 | Team Udayavani |

ಬೀದರ: ಹೈದ್ರಾಬಾದ-ಕರ್ನಾಟಕ ವಿಮೋಚನಾ ಚಳವಳಿಯಲ್ಲಿ ಜಿಲ್ಲೆಯ ಅದೇಷ್ಟೊ ಜನ ಪಾಲ್ಗೊಂಡು ಜೈಲುವಾಸ ಅನುಭವಿಸಿದ್ದಾರೆ. ಹೋರಾಟದಲ್ಲಿ ಧುಮುಕಿ ಹತ್ಯಾಕಾಂಡಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

Advertisement

ಬಸವಕಲ್ಯಾಣ ತಾಲೂಕಿನ ಗೋರ್ಟಾ(ಬಿ) ಗ್ರಾಮದಲ್ಲಿ ನಡೆದ ಹತ್ಯಾಕಾಂಡವನ್ನು ಈ ಭಾಗದ ಜಲಿಯಾನ್‌ವಲಾಬಾಗ ಎಂದೇ ಅಲ್ಲಿನ ಗ್ರಾಮಸ್ಥರು ಇಂದಿಗೂ ನೆನೆಪಿಸುತ್ತಾರೆ. ನಾವು ದೇಶದ ಮಹಾನ್‌ ನಾಯಕರನ್ನು, ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸುತ್ತೇವೆ. ಆದರೆ, ಹೈದ್ರಾಬಾದ ಕರ್ನಾಟಕ ಭಾಗದ ಹೋರಾಟ ಕುರಿತು ಈ ಭಾಗದ ಯುವಕರಿಗೆ, ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಪರಿಪೂರ್ಣ ಮಾಹಿತಿಯ ಕೊರತೆ ಇಂದಿಗೂ ಇದೆ. ವಿಮೋಚನಾ ಚಳವಳಿ ಕುರಿತು ಯಾವುದೇ ಪಠ್ಯಪುಸ್ತಕದಲ್ಲಿ ಪೂರ್ಣ ಪ್ರಮಾಣದ ಇತಿಹಾಸ ಹೇಳುವ ಕೆಲಸ ಇಂದಿಗೂ ನಡೆಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿನ ಅನೇಕ ಹೋರಾಟಗಾರರ ಇತಿಹಾಸ ಅವರ ಕುಟುಂಬಕ್ಕೆ ಮಾತ್ರ ಸಿಮಿತಗೊಂಡಿರುವುದು ವಿಪರ್ಯಾಸ.

ಹೋರಾಟದ ಸ್ವರೂಪ: ಹೈ.ಕ. ವಿಮೋಚನೆಗಾಗಿ ಜಿಲ್ಲೆಯ ಅನೇಕ ಮಠ, ಸಂಸ್ಥಾನ, ಶಿಕ್ಷಣ ಸಂಸ್ಥೆಗಳು ಕೂಡ ಶ್ರಮಿಸಿವೆ. ಹೋರಾಟದ ರೂಪುರೇಷೆ ಸಿದ್ಧಪಡಿಸುವುದು ಹಾಗೂ ಹೋರಾಟದಲ್ಲಿ ಧುಮುಕುವ ಯುವಕರಿಗಾಗಿ ವಿವಿಧೆಡೆ ತರಬೇತಿ ಕೇಂದ್ರಗಳು ನಡೆಯುತ್ತಿದ್ದವು. ಆ ಸಂದರ್ಭದಲ್ಲಿ ಅಸ್ಥಿತ್ವಕ್ಕೆ ಬಂದ ಆರ್ಯ ಸಮಾಜ, ಗೋರ್ಟಾ ಹಿರೇಮಠ, ಭಾಲ್ಕಿ ಹಿರೇಮಠ, ಮಾಣಿಕನಗರದ ಮಾಣಿಕಪ್ರಭುಗಳ ಸಂಸ್ಥಾನ, ಚಿಟಗುಪ್ಪ ಭವಾನಿ ಮಂದಿರ ಸೇರಿದಂತೆ ವಿವಿಧ ಪ್ರಮುಖ ಸ್ಥಳಗಳಲ್ಲಿ ಗುಪ್ತವಾಗಿ ಸ್ವಯಂ ರಕ್ಷಣಾ ತರಬೇತಿಗಳು ನಡೆಯುತ್ತಿದವು.

ಸೋಲಿಲ್ಲದ ಸರದಾರ ಎಂದು ಗುರುತಿಸಿಕೊಂಡ ದಿ| ರಾಮಚಂದ್ರ ವೀರಪ್ಪ ಅವರು ಕೂಡ ಈ ಹೋರಾಟದಲ್ಲಿ ಮುಂದಾಳತ್ವ ವಹಿಸಿ ಜೈಲು ಶಿಕ್ಷೆ ಅನುಭವಿಸಿದರು. ಅವರ ನಿಧನದ ನಂತರ ಸರ್ಕಾರ ಅವರ ಸ್ಮಾರಕ ನಿರ್ಮಾಣ ಮಾಡುವ ಭರವಸೆ ನೀಡಿದ್ದು, ಇಂದಿಗೂ ಆ ಕಾರ್ಯ ನಡೆದಿಲ್ಲ. ಈ ಭಾಗದಲ್ಲಿ ಆರ್ಯ ಸಮಾಜದ ಶಾಖೆಗಳನ್ನು ಸ್ಥಾಪಿಸಿದ ಭಾಯಿ ಬನಸ್ಸಿಲಾಲ್ ಹೋರಾಟಕ್ಕೆ ಹೊಸ ಸ್ವರೂಪ ನೀಡಿದರು. ವಕೀಲರಾದ ಇವರು ಸರದಾರ ವಲ್ಲಭಾಯಿ ಪಟೇಲ್ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಇಲ್ಲಿನ ಕ್ರೌರ್ಯ, ನಿಜಾಮನ ದಬ್ಟಾಳಿಕೆ ಕುರಿತು ವಿವರಿಸಿದರು. ಈ ಕುರಿತು ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿದ್ದು, ಇವರ ಕಾರ್ಯಕ್ಕೆ ಭಾಯಿ ಶಾಮಲಾಲ್ ಸಾಥ್‌ ನೀಡಿದರು. ಅಲ್ಲದೆ ಜಿಲ್ಲೆಯ ಅನೇಕ ಗ್ರಾಮಗಳಲ್ಲಿನ ಜನರು ಹೋರಾಟ ನಡೆಸಿದ್ದು, ಅವರ ಕಾರ್ಯಗಳನ್ನು ಗುರುತಿಸಿ, ಈ ಭಾಗದಲ್ಲಿ ವಿಶೇಷ ಸ್ಮಾರಕಗಳನ್ನು ನಿರ್ಮಿಸುವ ಕಾರ್ಯ ನಡೆಯಬೇಕಾಗಿದೆ ಎನ್ನುತ್ತಾರೆ ಹುತಾತ್ಮರ ಕುಟುಂಬದವರು.

ಆಪರೇಷನ್‌ ಪೋಲೊ: ಸ್ವತಂತ್ರ ಭಾರತದ ಒಕ್ಕೂಟ ಆಡಳಿತ ವ್ಯವಸ್ಥೆಗೆ ಸೇರದಿರಲು ನಿರ್ಧರಿಸಿದ ನಿಜಾಮನ ಸೈನ್ಯ ಈ ಭಾಗದಲ್ಲಿ ಹಿಂಸೆಗೆ ಮುಂದಾಗಿತ್ತು. ಇಲ್ಲಿನ ಕ್ರೌರ್ಯದ ಮಾಹಿತಿ ಪಡೆದುಕೊಂಡ ಅಂದಿನ ಗೃಹ ಮಂತ್ರಿ ಸರ್ದಾರ್‌ ವಲ್ಲಭಾಯಿ ಪಟೇಲರು 1948 ಸೆಪ್ಟೆಂಬರ್‌ 13ಕ್ಕೆ ‘ಆಪರೇಷನ್‌ ಪೋಲೊ’ ಎಂಬ ಹೆಸರಿನ ಕಾರ್ಯಾಚರಣೆ ಶುರು ಮಾಡಿದರು. ಸೊಲ್ಲಾಪೂರ, ಬೇಜವಾಡ ಮಾರ್ಗವಾಗಿ ಆರಂಭಗೊಂಡ ಕಾರ್ಯಚರಣೆ ಮೇಜರ್‌ ಜನರಲ್ ಜೆ.ಎನ್‌. ಚೌಧರಿ ಅವರ ನೇತೃತ್ವದಲ್ಲಿ ರಜಾಕಾರರ ಪಡೆಯ ವಿರುದ್ಧ ಹೋರಾಟ ನಡೆಯಿತು.

Advertisement

ಸತತ ಐದುದಿನಗಳ ಕಾಲ ಕಾರ್ಯಾಚರಣೆ ನಡೆದಿದ್ದು, ಸೆಪ್ಟೆಂಬರ್‌ 17ರ ಸಂಜೆ 5 ಗಂಟೆ ಸುಮಾರು ಹೈದ್ರಾಬಾದ್‌ ಸಂಸ್ಥಾನದ ಸೇನೆಯ ಮುಖ್ಯಸ್ಥ ಎಲ್.ಉದ್ರುಜ್‌ ಭಾರತೀಯ ಸೇನೆಗೆ ಶರಣಾದರು. ನಿಜಾಮನು ಹೈದ್ರಾಬಾದ ಕರ್ನಾಟಕವನ್ನು ಅಧಿಕೃತವಾಗಿ ಭಾರತದ ಒಕ್ಕೂಟ ವ್ಯವಸ್ಥೆಗೆ ಸೇರಿಸಿ ಅಂಗೀಕಾರ ಪತ್ರಕ್ಕೆ ಸಹಿ ಹಾಕಿದನು. ಆ ಮೂಲಕ ಹೈ.ಕ. ವಿಮೋಚನೆ ಹೊಂದಿ ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆಯಾಗಿರುವುದು ಇತಿಹಾಸ.

 

•ದುರ್ಯೋಧನ ಹೂಗಾರ

Advertisement

Udayavani is now on Telegram. Click here to join our channel and stay updated with the latest news.

Next